ಚಿತ್ರದುರ್ಗ
ಮಹಿಳೆಗೆ ಸ್ವಾತಂತ್ರ‍್ಯ ನೀಡದ ಸಮಾಜದಿಂದ ಏನೂ ಪ್ರಯೋಜನ ಎಂದು ಎಂಟು ವರ್ಷದ ಬಾಲಕ ಉಪನಯನವನ್ನು ಧಿಕ್ಕರಿಸಿದಾಗ ಅಂದಿನ ಶ್ರೇಣೀಕೃತ ವ್ಯವಸ್ಥೆ ಬಸವಣ್ಣನವರ ಕುಟುಂಬವನ್ನು ಬಹಿಷ್ಕಾರ ಹಾಕಿತು.
ಆಗ ಮನೆ ಬಿಡುವ ಪ್ರಸಂಗ ಬಂದಾಗ ಬಸವಣ್ಣನವರನ್ನು ಒಬ್ಬ ಪರಿಪೂರ್ಣ ಹಾಗೂ ಜಗತ್ತಿಗೆ ಒಂದು ಹೊಸ ತತ್ವ ಸಿದ್ಧಾಂತವನ್ನು ನೀಡುವಷ್ಟರ ಮಟ್ಟಿಗೆ ಬೆಳೆಸಿದವರು ಅಕ್ಕನಾಗಲಾಂಬಿಕೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ ಎಂದು ನೆಲಮಂಗಲ ತಾಲ್ಲೂಕು ಡಾಬಸ್‌ಪೇಟೆ ಸಮೀಪದ ವನಕಲ್ ಮಠದ ಡಾ. ಬಸವರಮಾನಂದ ಸ್ವಾಮೀಜಿ ೧೨ನೇ ಶತಮಾನದ ಮಹತ್ವವನ್ನು ಮಂಗಳವಾರ ತಿಳಿಸಿದರು.

ಅವರು ಇಲ್ಲಿನ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ವಚನಾಭಿಷೇಕ, ಮುರುಘಾ ಗುರುಪರಂಪರೆಯ ಮಹಾಸ್ವಾಮಿಗಳವರ ಜೀವನದರ್ಶನ ಹಾಗೂ ಅಕ್ಕನಾಗಲಾಂಬಿಕೆ ತಾಯಿ ಅವರ ಶರಣೋತ್ಸವ ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದರು.
ಮನೆ ತೊರೆದ ಬಸವಣ್ಣನಿಗೆ ಎಲ್ಲಿಯೂ ತೊಂದರೆಯಾಗದಂತೆ ಅಕ್ಕ, ತಾಯಿ, ತಂದೆಯಾಗಿ ನೋಡಿಕೊಂಡು ಧೈರ್ಯ, ಸಾಹಸ, ನಡೆ-ನುಡಿಯಲ್ಲಿ ಎಚ್ಚರದಿಂದ ನಡೆಯಲು ಸ್ಫೂರ್ತಿಯಾಗುತ್ತಾರೆ. ಬಸವಣ್ಣನ ಎಲ್ಲ ಚಿಂತನೆಗಳಿಗೆ ಬೆನ್ನೆಲುಬಾಗಿ ನಿಂತು ವ್ಯಕ್ತಿತ್ವ ರೂಪಿಸುವಲ್ಲಿ ಬಹುದೊಡ್ಡ ಪಾತ್ರವಿದೆ ಎಂದರು.
ನಾಗಲಾಂಬಿಕೆಯೂ ಸಹ ವಚನ ರಚನೆ ಮಾಡಿದ್ದು ಅಸಮಾನತೆ ಹೋಗಲಾಡಿಸಲು ತನ್ನದೇ ಆದ ರೀತಿಯಲ್ಲಿ ಸಮಾಜಕ್ಕೆ ಬೆಳಕಾಗಬಲ್ಲ ವಚನಗಳನ್ನು ರಚಿಸಿದ್ದಾರೆ. ಅನುಭವ ಮಂಟಪದಲ್ಲಿ ಚರ್ಚೆಯ ಸಂದರ್ಭದಲ್ಲಿ ಭಾಗವಹಿಸುತ್ತಿದ್ದ ಅಕ್ಕನಾಗಲಾಂಬಿಕೆ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಧೈರ್ಯವಾಗಿ ಹೋರಾಡುತ್ತ ವಚನ ಸಂರಕ್ಷಣೆಯ ಭಾರವನ್ನು ತೆಗೆದುಕೊಂಡು ಒಂದು ತಂಡದೊಂದಿಗೆ ಉಳವಿಯ ಕಡೆಗೆ ಹೋಗಿದ್ದು ಚರಿತ್ರಾರ್ಹ ಘಟನೆಯೇ ಸರಿ. ಇಂತಹ ಅನೇಕ ಅನರ್ಘ್ಯ ರತ್ನಗಳು ಕಲ್ಯಾಣದಲ್ಲಿದ್ದುದು ವಿಶೇಷವೇ ಸರಿ ಎಂದು ನುಡಿದರು.

ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಅಕ್ಕನಾಗಮ್ಮನವರು ತನ್ನ ತಮ್ಮನಾದ ಬಸವಣ್ಣನನ್ನು ಬಾಲ್ಯದಿಂದ ಕಡೆಯ ಕಲ್ಯಾಣ ಕ್ರಾಂತಿಯವರೆಗೂ ಕೈಹಿಡಿದು ಮುನ್ನಡೆಸಿದರು. ಅಕ್ಕನಾಗಮ್ಮ ಕಿತ್ತೂರು ಚೆನ್ನಮ್ಮನ ರೀತಿ ಕ್ರಾಂತಿಕಾರಿ ವ್ಯಕ್ತಿತ್ವದ ದಿಟ್ಟಮಹಿಳೆ ಎಂದು ಬಣ್ಣಿಸಿದರು. ನಾನೂ ಸಹ ಮುರುಘೇಶರ ಕರುಣೆಯಿಂದ ಬೆಳೆದವನು. ಅವರ ಅಣತಿಯಂತೆ ನಡೆಯುವುದಾಗಿ ನುಡಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಅಕ್ಕನಾಗಮ್ಮ ಮಹಿಳಾ ಕುಲಕ್ಕೆ ಮಾದರಿ, ಬಣ್ಣನೆಗೆ ನಿಲುಕದ ವ್ಯಕ್ತಿತ್ವ, ಆದರ್ಶದ ಧೀರಮಹಿಳೆ. ಕೆಲವೇ ವಚನಗಳನ್ನು ರಚಿಸಿದ್ದರೂ ಅವೆಲ್ಲವೂ ನೆನಪಿನಲ್ಲಿ ಉಳಿಯುಂತಹವುಗಳೇ ಆಗಿವೆ. ಅಂತಹ ವಚನಗಳನ್ನು ನೀವು ಓದಬೇಕು. ಅನುಸರಿಸಬೇಕು. ಹಾಗೆಯೇ ಯೋಗಾಯೋಗ ಎನ್ನುವಂತೆ ನನ್ನ ಬಾಲ್ಯದ ಒಡನಾಡಿ, ಸ್ನೇಹಿತರೂ, ಒಟ್ಟಿಗೆ ಬೃಹನ್ಮಠದ ಗುರುಕುಲದಲ್ಲಿ ಕಲಿತವರೂ ಆದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳ ಹುಟ್ಟಿದ ದಿನ ಈ ಸಂದರ್ಭದಲ್ಲಿ ಬಂದಿರುವುದು ಪುಣ್ಯ. ಪ್ರಭುದೇವರು ನಾನು ನೋಡಿದಂತೆ ಹೃದಯವಂತರೂ ವಿನಯಶೀಲರೂ ಆಗಿರುವ ಅವರು ಒಂದು ತತ್ವ ವ ಪಾಲಿಸಿಕೊಂಡು ಬಂದಿದ್ದಾರೆ. ಅದೇನೆಂದರೆ ತನಗಾಗಿ ಬದುಕುವವರು ಯಾವ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಬೇರೆಯರಿಗಾಗಿ ಬದುಕುವವರು ತನಗಾಗಿ ಬದುಕುವುದಿಲ್ಲ. ಈ ಮಾತನ್ನು ಅಕ್ಷರಶಃ ಪಾಲಿಸಿ ನಡೆದಿದ್ದಾರೆ. ಮುಂದೆಯೂ ನಡೆಯುತ್ತಾರೆ. ಅವರಿಗೆ ಬಸವಾದಿ ಶರಣರು ಮುರುಘೇಶನ ಆಶೀರ್ವಾದವಿರಲಿ ಎಂದು ಸೇರಿದ ಸಮಸ್ತರೆದುರು ಬಸವಪ್ರಭು ಸ್ವಾಮಿಗಳವರಿಗೆ ಶಾಲುಹೊದಿಸಿ ಹಾರ ಹಾಕಿ ಪುಷ್ಪವೃಷ್ಟಿಗೈದರು.
ಈ ಸಂದರ್ಭದಲ್ಲಿ ಅರಳೂರು ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಶ್ರೀಮಠದ ಬಸವಮುರುಘೇಂದ್ರ ಶ್ರೀಗಳು, ಕಲ್ಕೆರೆಯ ಪೂರ್ಣಾನಂದರು, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್, ಉಪಾಧೀಕ್ಷಕ ಡಾ. ನಾಗೇಂದ್ರಗೌಡ, ವ್ಯವಸ್ಥಾಪಕ ಸತ್ಯನಾರಾಯಣ ಸೇರಿದಂತೆ ಇತರೆ ಸಿಬ್ಬಂದಿ, ಬಸವರಾಜ ಕಟ್ಟಿ, ಸಿವಿಲ್ ಇಂಜಿನಿಯರ್ ಬಸವಕುಮಾರ್, ಶುಶ್ರೂಷಕರ ಅಧೀಕ್ಷಕ ಕೆ.ಎಂ.ಜಿ. ಹಾಲಸ್ವಾಮಿ, ಲೆಕ್ಕವಿಭಾಗದ ಅಧೀಕ್ಷಕ ಆನಂದ ಪಾಟೀಲ್, ಸ್ಟೋರ್ ಇನ್‌ಛಾರ್ಜ್ ಪ್ರಶಾಂತ್‌ಸ್ವಾಮಿ, ವಿಜಯಪುರದ ಭಕ್ತರು ಸೇರಿದಂತೆ ಶ್ರೀಮಠದ ಅಭಿಮಾನಿಗಳು, ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಮುರಾ ಕಲಾವಿದ ಉಮೇಶ ಸಂಗಪ್ಪ ಪತ್ತಾರ್ ಅಕ್ಕನಾಗಮ್ಮ ಅವರ ರಚನೆಯ ವಚನ ಪ್ರಾರ್ಥನೆ ಹಾಡಿದರು. ಹೇಮಲತಾ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಸಿದ್ಧಗಂಗಮ್ಮ ಅವರು ಅಕ್ಕನಾಗಮ್ಮನವರ ಜೀವನ ವೃತ್ತಾಂತವನ್ನು ಬಣ್ಣಿಸಿ, ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.