ಬಸವಕಲ್ಯಾಣ :
ಯೋಗಾಂಗ ತ್ರಿವಿಧಿಯು ಅಕ್ಕನ ಅಧ್ಯಾತ್ಮಿಕ ಸಾಧನೆಯ ಸಾರವಾಗಿದ್ದು, ಇದು ಅನುಭಾವದ ಉತ್ತುಂಗವನ್ನು ತೋರುತ್ತದೆ ಎಂದು ಹರಳಯ್ಯ ಗವಿಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ಅಕ್ಕಮಹಾದೇವಿ ಅನುಭಾವ ಪೀಠದ ವತಿಯಿಂದ ಅಕ್ಕಮಹಾದೇವಿ ಗವಿ ಬಂದವರ ಓಣಿಯಲ್ಲಿ ಅಕ್ಕಮಹಾದೇವಿ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಮತ್ತು ಅನುಭಾವ ಗೋಷ್ಠಿಯ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ರಾಜಪ್ರಭುತ್ವವನ್ನು ಹಾಗೂ ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸಿ ಸ್ತ್ರೀ ಹಕ್ಕುಗಳ ಪರವಾಗಿ ಧ್ವನಿಯೆತ್ತಿದ ಮೊದಲ ಮಹಿಳಾಪರ ಚಿಂತಕಿ ಅಕ್ಕಮಹಾದೇವಿ. ಅವರು ತಮ್ಮ ವಚನಗಳ ಮೂಲಕ ಮಹಿಳೆಯರ ಅತ್ಮಸ್ವಾತಂತ್ರ್ಯ ವ್ಯಕ್ತಿತ್ವ, ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದರು ಎಂದು ಹೇಳಿದರು.
ನಾವೆಲ್ಲ ಪ್ರತಿದಿನ ಇಷ್ಟಲಿಂಗ ನಿರೀಕ್ಷಣೆ ಹಾಗೂ ವಚನಗಳ ಪಠಣವನ್ನು ಕಡ್ಡಾಯವಾಗಿ ಮಾಡಬೇಕು ಎಂದು ನುಡಿದರು.
ನೀಲಾಂಬಿಕಾ ಶಿವಯೋಗಾಶ್ರಮದ ಪೂಜ್ಯ ಗಾಯತ್ರಿ ತಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಷ್ಟಾಂಗ ಯೋಗ ಮಾಡಿ ಬಳಲುವುದಕ್ಕಿಂತ, ಇಷ್ಟಲಿಂಗ ಪೂಜಾಯೋಗ ಶ್ರೇಷ್ಠ ಎಂಬುದು ಅಕ್ಕನ ವಚನಗಳಿಂದ ತಿಳಿದು ಬರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಲಿಂಗಾಂಗ ಸಾಮರಸ್ಯದ ಎತ್ತರಕ್ಕೇರಿದವರು ಅಕ್ಕ. ಚಂಚಲವಾದ ಮನಸ್ಸನ್ನು ನಿಯಂತ್ರಿಸಿ ಸಾಧನೆಯ ಶಿಖರವೇರುವುದನ್ನು ಅಕ್ಕನಿಂದ ತಿಳಿಯಬೇಕು.

ನುಡಿಗಿಂತ ನಡೆಗೆ ಹೆಚ್ಚಿನ ಮಹತ್ವ ನೀಡಿದವರು ಶರಣರು. ಕ್ಷಣಿಕ ಸುಖವನ್ನು ಬಿಟ್ಟು ಪರಮ ಸುಖವನ್ನು ಪಡೆಯಲು ಶರಣರು ಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು.
ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ೧೨ನೇ ಶತಮಾಣದ ಮಹಾನುಭಾವಿ ಶಿವಯೋಗಿಣಿ ಅಕ್ಕಮಹಾದೇವಿ ಉಡುತಡಿಯಿಂದ ಕಲ್ಯಾಣಕ್ಕೆ ಬಂದು, ಇಲ್ಲಿನ ಬಂದವರ ಓಣಿಯಲ್ಲಿ ತಂಗಿ ಅನುಭವ ಮಂಟಪವನ್ನು ಪ್ರವೇಶಿಸಿ ಅದ್ಯಾತ್ಮಿಕ ದಿವ್ಯ ಸಾಧನೆಯನ್ನು ಪಸರಿಸಿದಳು. ಅಕ್ಕ ರಚಿಸಿದ ಯೋಗಾಂಗ ತ್ರಿವಿಧಿಯು ಶೀವಯೋಗ ಸಾಧನೆಯ ವಿವಿಧ ಹಂತಗಳ ಸೂತ್ರಗಳಿದ್ದಂತಿವೆ. ಅವುಗಳು ಜನಸಾಮಾನ್ಯರಿಗೆ ಮುಟ್ಟಲೆಂದು ತ್ರಿವಿಧಿಗಳ ಪಠಣ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕರಾದ ಪುಷ್ಪಾವತಿ ಮಾಮಾ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬೀದರ ಜಿಲ್ಲಾ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಗಡ್ಡೆ ಧ್ವಜಾರೋಹಣ ಮಾಡಿದರು.
ಪೂಜ್ಯ ಚಂದ್ರಮ್ಮ ತಾಯಿ, ಬೀದರ ಬಸವ ಸೇವಾ ಪ್ರತಿಷ್ಠಾನದ ಡಾ. ವಿಜಯಶ್ರೀ ಬಶೆಟ್ಟಿ, ಅಕ್ಕನ ಬಳಗದ ರಾಜಶ್ರೀ ಖೂಬಾ, ಮಾತೆ ಕಲ್ಯಾಣಮ್ಮ, ಮಾತೆ ವಿಶಾಲ ಉಪಸ್ಥಿತರಿದ್ದರು.
ಮಮತಾ ಭೂಸೆ ಸ್ವಾಗತಿಸಿದರು. ಜಯಶ್ರೀ ಬಿರಾದಾರ ನಿರೂಪಿಸಿದರು. ಪರತಾಪೂರದ ನೀಲಾಂಬಿಕಾ ಅಕ್ಕನ ಬಳಗದವರು ಗುರುಪೂಜೆ ನಡೆಸಿಕೊಟ್ಟರು.
