ಬಸವಕಲ್ಯಾಣ:
ಅನುಭವಮಂಟಪ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಅಕ್ಕನಾಗಲಾಂಬಿಕಾ ತಾಯಿ (೭೧ ವ.) ಗುರುವಾರ ಮಧ್ಯಾಹ್ನ ಲಿಂಗೈಕ್ಯರಾದರು.
ತಾಯಿಯವರ ಅಗಲಿಕೆಗೆ ಅನುಭವಮಂಟಪದ ಅಧ್ಯಕ್ಷರಾದ ನಾಡೋಜ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಸಂಚಾಲಕರಾದ ಶಿವಾನಂದ ಸ್ವಾಮಿಗಳು, ಮಹಾಲಿಂಗ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ವೈಜಿನಾಥ ಕಾಮಶೆಟ್ಟೆ, ಡಾ. ಎಸ್.ಬಿ. ದುರ್ಗೆ, ಕುಪೇಂದ್ರ ಪಾಟೀಲ, ಶಿವರಾಜ ಪಾಟೀಲ, ಮಾಲತಿ ಇವಳೆ ಮುಂತಾದ ಗಣ್ಯರು ಸಂತಾಸ ಸೂಚಿಸಿದ್ದಾರೆ.
ತಾಯಿಯವರ ಅಂತ್ಯಕ್ರಿಯೆ ಬಸವತತ್ವದ ವಿಧಿವಿಧಾನಗಳೊಂದಿಗೆ ಬಸವಕಲ್ಯಾಣದ ಅನುಭವಮಂಟಪ ಅಕ್ಕಮಹಾದೇವಿ ಆಶ್ರಮದಲ್ಲಿ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ನೆರವೇರಿಸಲಾಗುವುದು ಎಂದು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಲಬುರಗಿ ಜಿಲ್ಲೆಯ ಶಹಾಪುರದ ತಂದೆ ಸೋಮಣ್ಣ ತಾಯಿ ಭಾಗಮ್ಮ ಅವರ ಉದರದಲ್ಲಿ ೨೦-೦೮-೧೯೫೫ರಂದು ಜನಿಸಿದ (ಯಶೋಧಾ) ಪೂಜ್ಯ ಅಕ್ಕನಾಗಲಾಂಬಿತಾಯಿ ಗ್ರಹಸ್ಥ ಜೀವನ ಬಿಟ್ಟು, ಸನ್ಯಾಸ ಜೀವನ ಸ್ವೀಕರಿಸಿ, ಪೂಜ್ಯ ಸುಜ್ಞಾನಿದೇವಿತಾಯಿ ಅವರ ಶಿಷ್ಯರಾಗಿ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಪ್ರಚಾರ ಪ್ರಸಾರ ಮಾಡುತ್ತಾ ಬಸವಕಲ್ಯಾಣದ ಅನುಭವಮಂಟಪದ ಅಕ್ಕಮಹಾದೇವಿ ಆಶ್ರಮದಲ್ಲಿ ಸುಮಾರು ವರ್ಷಗಳಿಂದ ನೆಲೆಸಿದ್ದರು. ಬಸವಾದಿ ಶಿವಶರಣರ ಅನೇಕ ಗ್ರಂಥಗಳನ್ನು ತಾಯಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಲಿಂಗೈಕ್ಯ ತಾಯಿಯವರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ, ತಮ್ಮ ಜೀವನವನ್ನು ಬಸವತತ್ವ ಪ್ರಸಾರಕ್ಕಾಗಿ ಮುಡುಪಾಗಿಟ್ಟಿದ್ದರು.
