ವಚನ ಸಾಹಿತ್ಯ ಇಲ್ಲವಾಗಿಸುವ ಹುನ್ನಾರ ನಡೆಯುತ್ತಿದೆ: ಮೀನಾಕ್ಷಿ ಬಾಳಿ
ಆಳಂದ:
ಬಸವಣ್ಣನವರ ಅನುಯಾಯಿಗಳು, ಬಸವಾಭಿಮಾನಿಗಳು ಹಾಗೂ ಪ್ರಗತಿಪರ ಚಿಂತಕರು ಲಿಂಗಾಯತ ಧರ್ಮದ ತತ್ವಗಳು, ಅದರ ಪರಂಪರೆ ಮತ್ತು ಅಸ್ತಿತ್ವದ ಕುರಿತು ಗಂಭೀರವಾದ ಚಿಂತನೆ ನಡೆಸಬೇಕಾದ ಕಾಲ ಬಂದಿದೆ ಎಂದು ಇಳಕಲ್ಲ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದ್ದಾರೆ.
ಪಟ್ಟಣದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ರವಿವಾರ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ 2ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಅರಿವು ಕಳೆದುಕೊಂಡರೆ ನಮ್ಮ ಅಸ್ತಿತ್ವವೇ ಮೌನವಾಗಿ ಸಮಾಧಿಯಾಗುವ ಅಪಾಯವಿದೆ. ಪ್ರಜ್ಞೆ ಮತ್ತು ಜಾಗೃತಿ ಹೊಂದಬೇಕಿರುವುದರ ಅವಶ್ಯಕತೆ ಇಂದು ಹೆಚ್ಚಿದೆ. ನಮ್ಮ ಧರ್ಮದ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ಲಿಂಗಾಯತರು ಹಿಂದೂ ಧರ್ಮದ ವಿರೋಧಿಗಳಲ್ಲ. ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಿದ್ದು, ಶೂದ್ರರಿಗೆ ಶಿಕ್ಷಣ, ಆಸ್ತಿ, ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಇರಲಿಲ್ಲ. ಮಹಿಳೆಯರನ್ನೂ ಸಹ ಸಂಪೂರ್ಣ ಹಕ್ಕುಗಳಿಲ್ಲದವರಂತೆ ಕೀಳಾಗಿ ನೋಡಲಾಗುತ್ತಿತ್ತು.
ಇಂತಹ ಅನ್ಯಾಯದ ವ್ಯವಸ್ಥೆಯನ್ನು 12ನೇ ಶತಮಾನದಲ್ಲೇ ಬಸವಣ್ಣನವರು ತೊಡೆದು ಹಾಕಲು ಶ್ರಮಿಸಿದ್ದಾರೆ. ಆದರೆ ಸ್ವತಂತ್ರ್ಯ ಭಾರತದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ವರ್ಗದ ಮಹಿಳೆ-ಪುರುಷರಿಗೆ ಸಮಾನ ಹಕ್ಕು, ಆಸ್ತಿ, ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ನೀಡಿದರು ಎಂದು ಸ್ವಾಮೀಜಿ ಹೇಳಿದರು.
ಶರಣ ಸಾಹಿತಿ ಡಾ. ಮೀನಾಕ್ಷಿ ಬಾಳಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಬಸವಣ್ಣನ ಹೆಸರಲ್ಲಿ ವಚನ ಸಾಹಿತ್ಯ ಇಲ್ಲವಾಗಿಸುವ ಹುನ್ನಾರ ಕೆಲ ಮಠಾಧೀಶರ ಮೂಲಕವೇ ಮಾಡಿಸಲಾಗುತ್ತಿದೆ. ವೈಚಾರಿಕ ಸಮಾನತೆಯ ಚಿಂತನೆಯ ವಚನ ಸಾಹಿತ್ಯ ನಾಶಪಡಿಸುವುದು ವೈದಿಕಶಾಹಿ ಗುರಿಯಾಗಿದೆ. ಲಿಂಗಾಯತರು ಇದರಿಂದ ಎಚ್ಚರಗೊಳ್ಳಬೇಕಿದೆ ಎಂದರು.

ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಲಿಂಗಾಯತ ಸಮಾಜದಲ್ಲಿ ಮಾತ್ರ ನಿಜವಾದ ಬದಲಾವಣೆ ಸಾಧ್ಯವಿದೆ. ಆದರೆ ಆ ಬದಲಾವಣೆಗೆ ಸ್ವವಿಮರ್ಶೆ ಅನಿವಾರ್ಯ ಸ್ವವಿಮರ್ಶೆ ಇಲ್ಲದೆ ಭವಿಷ್ಯವಿಲ್ಲ ಎಂದು ಹೇಳಿದರು.
ಲಿಂಗಾಯತರು ಸ್ವವಿಮರ್ಶೆಯಿಂದ ಬಹುದೂರ ಉಳಿದಿದ್ದಾರೆ. ವಿಮರ್ಶೆ ಮಾಡಿಕೊಳ್ಳದೆ ಹೋದರೆ ಸಮಾಜದ ಭವಿಷ್ಯವೇ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ವಚನ ಚಿಂತನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ, ಬಸವಣ್ಣನವರನ್ನು ಕೇವಲ ಧಾರ್ಮಿಕ ನಾಯಕರಾಗಿ ಪೂಜಿಸದೆ, ಅವರು ಹೇಳಿದ ಜಾಗತಿಕ ಶಾಂತಿ, ಸಮಾನತೆ ಸಹಬಾಳ್ವೆ ಹಾಗೂ ಸಮೃದ್ಧಿಗೆ ಬೇಕಾದ ಅಗತ್ಯ ವಿಚಾರಗಳನ್ನು ಮುನ್ನೆಲೆಗೆ ತರಬೇಕಿದೆ ಎಂದರು. ಸಂಜಯ ಪಾಟೀಲ, ಅಣ್ಣಾಜಿ ಕೃಷ್ಣಾರೆಡ್ಡಿ, ಪರ್ವೀನ್ ಸುಲ್ತಾನ ಅವರಿಂದ ವಚನ ನಿರ್ವಚನ ನಡೆಯಿತು.

ಶ್ರೀ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಸಮ್ಮೇಳನದ ನೇತೃತ್ವ ವಹಿಸಿ ಮಾತನಾಡಿದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೆಶ ಎಸ್. ಉಪ್ಪಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ವಿಶ್ವರಾಧ್ಯ ಸತ್ಯಂಪೇಟೆ ಸಹ ಮಾತನಾಡಿದರು. ವಿಜಯಪುರದ ಶರಣ ಸಂಸ್ಕೃತಿ ಚಿಂತಕ ಡಾ. ಜೆ.ಎಸ್. ಪಾಟೀಲ ಸಮಾರೋಪ ನುಡಿಗಳನ್ನಾಡಿದರು.

ಸಮ್ಮೇಳನದಲ್ಲಿ 2025ನೇ ಸಾಲಿನ ಶರಣ ಸಂಕುಲರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಸಿದ್ದಬಸವ ಕಬೀರ ಸ್ವಾಮೀಜಿ, ಕೆ. ನೀಲಾ, ಪ್ರದೀಪ್ ಸಾವಳ್ಕರ್, ಕೌಸರ್ ಜಬೀನ್, ಜಯಶ್ರೀ ಸುಕಾಲೆ ಈ ಸಾಧಕರಿಗೆ ಪ್ರದಾನ ಮಾಡಲಾಯಿತು.
ತೋಂಟದಾರ್ಯ ಶಾಲಾ ಮಕ್ಕಳಿಂದ ಶರಣರ ಕುರಿತು ರೂಪಕಗಳ ಪ್ರದರ್ಶನ, ವಚನ ನೃತ್ಯ, ವಚನ ಭಜನೆ ಜನಮನ ಸೆಳೆಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಮುಖಂಡ ಬಾಬುರಾವ ಮಡ್ಡೆ, ಮಲ್ಲಿನಾಥ ಯಲಶೆಟ್ಟಿ, ರಾಜಶೇಖರ ಯಂಕಂಚಿ, ಗುರುಶರಣ ಪಾಟೀಲ, ಶಿವಪುತ್ರಪ್ಪ ಪಾಟೀಲ ಇತರರಿದ್ದರು. ನಾಗರಾಜ ಹೊಸಪೇಟೆ ನಿರೂಪಿಸಿದರು. ರಾಜ್ಯದ ನಾನಾ ಕಡೆಗಳಿಂದ ಜನ ಬಂದಿದ್ದರು.

ಎಲ್ಲರ ಅಭಿಪ್ರಾಯ ಉತ್ತಮವಾಗಿದೆ