ಆಳಂದ:
ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ, ಇಂದಿನ ಕಲ್ಯಾಣ ಕರ್ನಾಟಕ ಪ್ರದೇಶವು ಸಂಘರ್ಷದ ಮುಖಾಂತರ 1948ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡಿತು. ಭಾರತ ಸರ್ಕಾರದ ಸೈನಿಕರು ನಿಜಾಮರ ಆಳ್ವಿಕೆ ವಿರುದ್ಧ ಸಂಘರ್ಷ ನಡೆಸಿ ಸ್ವಾತಂತ್ರ್ಯ ಪಡೆಯುವಂತಾಯಿತು ಎಂದು ಕೊರಣೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪ ಶಾಲೆಯಲ್ಲಿ, ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಮತ್ತು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ಮಗುವಿನಲ್ಲಿ ನಿಸರ್ಗದತ್ತವಾದ ಕಲೆ, ಪ್ರತಿಭೆ ಅಡಗಿರುತ್ತೆ. ಅದನ್ನು ಶಿಕ್ಷಕರಾದವರು ಗುರುತಿಸಬೇಕು. ಅದರಲ್ಲಿ ಸ್ವಲ್ಪವೂ ನಿರ್ಲಕ್ಷ್ಯ ಮಾಡಬಾರದು. ಮಕ್ಕಳೊಳಗಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಅದನ್ನು ಹೊರತರುವಂತ ಕಾರ್ಯವನ್ನು ಶಿಕ್ಷಕರಾದವರು ಮಾಡಬೇಕು. ಮಕ್ಕಳಲ್ಲಿ ಪ್ರತಿಭೆ, ಚಾಣಾಕ್ಷತನ ಅಡಗಿರುತ್ತದೆ ಅದು ಬೆಳಗಲು ಶಿಕ್ಷಕರಾದರು ಸ್ವಲ್ಪ ಕಿಡಿ ಹೊತ್ತಿಸುವ ಕಾರ್ಯವಷ್ಟೇ ಮಾಡಬೇಕು, ಮುಂದೆ ಅದು ಬೆಳಗಲು ಅವಕಾಶವಾಗುತ್ತದೆಂದರು.
ಮತ್ತು ಇಂತಹ ಕಾರ್ಯಗಳಿಗೆ ಸಹಾಯ, ಸಹಕಾರ ನಮ್ಮಿಂದ ಹಾಗೂ ಮಠದಿಂದ ನೀಡಲು ಸಿದ್ದರಿದ್ದೇವೆ ಎಂದು ಸ್ವಾಮೀಜಿ ಹೇಳಿದರು. ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ಅನುಭವ ಮಂಟಪ ಶಾಲೆಯ ವಿದ್ಯಾರ್ಥಿಗಳಿಗೆ, ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅನುಭವ ಮಂಟಪ ಶಾಲೆಯ ಕೋಶಾಧ್ಯಕ್ಷ ಶ್ರೀ ಸುಭಾಷ್ ಪಾಟೀಲ ತೇಲಾಕುಣಿ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟರು.