ಗದಗ
“ಫೋಟೋಗ್ರಫಿ ಒಂದು ಅದ್ಬುತವಾದ ಕಲೆ. ಫೋಟೋಗಳು ನೆನಪಿನ ಜೀವನದ ಚಿತ್ರಗಳು, ಎಂದೋ ತೆಗೆಸಿಕೊಂಡ ಫೋಟೋ ನೋಡಿ ಸಂತೋಷ ಪಡುತ್ತೇವೆ, ಫೋಟೋ ಒಂದು ಘಟನೆ ಅಥವಾ ವಿವರವನ್ನು ನೆನಪಿಸುವ ಶಕ್ತಿಶಾಲಿ” ಎಂದು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2760 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
“ಪ್ರತಿ ಕುಟುಂಬದ ಅಲಿಖಿತ ಕತೆಯೇ ಈ ಫೋಟೋಗಳು ಎಂದು ಹೇಳಬಹುದು. ಆ ಕ್ಷಣದ ಭಾವನೆಯನ್ನು, ವರ್ತನೆಯನ್ನು ಹೇಳುವ ಮೂಲಕ ನೆನಪಿನ ಸಾಗರದಲ್ಲಿ ತೇಲಿಸುತ್ತದೆ. ಈಗೀಗ ಫೋಟೋವನ್ನು ಉಡುಗೊರೆಯಾಗಿ ಕೊಡುವ ಪದ್ದತಿ ಶುರುವಾಗಿದೆ. ತನ್ನದೇ ಫೋಟೋ ಪಡೆದ ವ್ಯಕ್ತಿ ನೋಡಿ ನಕ್ಕು ಸಂತೋಷಪಡುವಂತೆ ಮಾಡುವ ಕಲೆ ಫೋಟೋಗ್ರಾಫರ್ ಮಾಡುತ್ತಾರೆ. ಈಗೀಗ ಡಿಜಿಟಲ್ ಕ್ಯಾಮೆರಾ ಬಂದಿರುವುದರಿಂದ ಕಾರ್ಯಕ್ರಮ ಪ್ರಾರಂಭವಾಗುವುದೇ ಫೋಟೋ ತೆಗೆಯುವುದರಿಂದ, ಎಲ್ಲಾ ಕಾರ್ಯಕ್ರಮಗಳಲ್ಲಿ ಫೋಟೋಗ್ರಾಫರ್ ಬೇಕೇಬೇಕು” ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಯಲಿಶಿರೂರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಚಂದ್ರಶೇಖರ ಜೋಗಿನವರು, “ವಿಶ್ವ ಫೋಟೋಗ್ರಫಿ ದಿನದ ಬಗ್ಗೆ ಉಪನ್ಯಾಸ ನೀಡುತ್ತ, ಫೋಟೋಗ್ರಫಿ ಎಂದರೆ ಜೀವನದೊಂದಿಗೆ ಪ್ರೀತಿಯಿಂದ ಇರುವುದು. ಬಾಲ್ಯದ ಫೋಟೋವನ್ನು ಈಗ ನೋಡಿ ನಕ್ಕವರು ನಾವು. ಅಂದಿನ ನಮ್ಮ ಚಿತ್ರ ಈಗಿನ ನಮ್ಮ ಚಿತ್ರ ಅಜಗಜಾಂತರ ವ್ಯತ್ಯಾಸವಾಗಿರುತ್ತವೆ. ಫೋಟೋಗಳು ನೆನಪನ್ನು ಅಳಿಸಲಾಗದ ಚಿತ್ರಗಳು. ಒಂದು ಫೋಟೋ ನೂರಾರು ಕತೆಗಳನ್ನು ಹೇಳುವಂತೆ ಚಿತ್ರಿಸಿದ ಫೋಟೋಗ್ರಾಫರ್ ಕೌಶಲ ಅದ್ಬುತ. ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಮದುವೆ ಮುಂಜಿ ಹೀಗೆ ಎಲ್ಲದಕ್ಕೂ ಫೋಟೋಗಳು ಬೇಕು. ಹಾಗೆಯೇ ಸಂತೋಷಕ್ಕಾಗಿ ಅಷ್ಟೆ ಅಲ್ಲ, ದುಷ್ಟರನ್ನು ಪತ್ತೆ ಹಚ್ಚಲು ಫೋಟೋಗಳು ಸಹಾಯ ಮಾಡುತ್ತವೆ” ಎಂದು ಅದರ ಮಹತ್ವವನ್ನು ತುಂಬಾ ಮಾರ್ಮಿಕವಾಗಿ ಹೇಳಿದರು.
ಡಾ. ರಮೇಶ ಕಲ್ಲನಗೌಡ್ರ ಪ್ರಾಚಾರ್ಯರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಳಗುಂದ ಇವರಿಂದ ವಚನ ಚಿಂತನ ನಡೆಯಿತು. ಗದುಗಿನ ಉತ್ತಮ ಫೋಟೋಗ್ರಾಫರ್ ಆದ ವೈಜನಾಥ ವೀ. ಕೌತಾಳ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ವಚನ ಚಿಂತನ ಪ್ರವಚನ ನಡೆಸಿಕೊಟ್ಟ ವಿಜಯ ಮಹಾಂತ ದೇವರು ಹಾಗೂ ಡಾ. ರಮೇಶ ಕಲ್ಲನಗೌಡ್ರ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ದರಾಮಪ್ಪ ಗೊಜನೂರ ಹಾಗೂ ದಶರಥ ಕೊಳ್ಳಿ ಉಪಸ್ಥಿತರಿದ್ದರು.
ವಚನ ಶ್ರಾವಣ ಕಾರ್ಯಕ್ರಮವನ್ನು ಕುಮಾರಿ ಶಿವಲೀಲಾ ಮರಿದೇವರಮಠ ನಡೆಸಿಕೊಟ್ಟರು. ವಚನ ಸಂಗೀತ ಸೇವೆಯನ್ನು ಗುರುನಾಥ ಸುತಾರ ಹಾಗೂ ರೇವಣಸಿದ್ದಯ್ಯ ಮರಿದೇವರಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥಪಠಣವನ್ನು ಕುಮಾರಿ ಲಕ್ಷ್ಮಿ ಆರ್. ಕಡ್ಲೇಸ್ಕರ ವಚನ ಚಿಂತನವನ್ನು ಕುಮಾರಿ ಮೇಧಾ ಎ. ಹಂಡಿ ನಡೆಸಿದರು.
ದಾಸೋಹ ಸೇವೆಯನ್ನು ಶರಣ ರಾಜಶೇಖರ ಬ್ಯಾಕೋಡ ಹುಣಸಗಿ (ಸೂಡಿ) ಹಾಗೂ ಲಿಂ. ಹೊನ್ನಪ್ಪಗೌಡ ಬಿರಾದಾರ ಇವರ ಸ್ಮರಣಾರ್ಥ ಲಕ್ಷ್ಮೀಬಾಯಿ ಹೊನ್ನಪ್ಪಗೌಡ ಬಿರಾದಾರ, ಸಿಂದಗಿ ಮತ್ತು ಅನ್ನಪೂರ್ಣಮ್ಮ ಬಸವೇಶ್ವರ ತುಪ್ಪದ ಇವರ ಸ್ಮರಣಾರ್ಥ, ಎಸ್. ಎಸ್. ಮಹಾದೇವಿ, ಹುಬ್ಬಳ್ಳಿ ಹಾಗೂ ಸೋಮಶೇಖರ ಶಿವಪ್ಪ ಅನೂರಶೆಟ್ಟರ, ಹಾವೇರಿ
ಮತ್ತು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಾತ್ರಾ ಮಹೋತ್ಸವ ಸಮಿತಿ 2025 ಇವರೆಲ್ಲರೂ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ. ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜೀಹಾಳ ಕಾರ್ಯಕ್ರಮ ನಿರೂಪಿಸಿದರು.