ಸಮಾನತೆಗಾಗಿ ಹೋರಾಡಿದ ಬಸವಾದಿ ಶರಣರು ಆದರ್ಶವಾಗಲಿ: ಅಲ್ಲಮಪ್ರಭು ಶ್ರೀ

ಜಮಖಂಡಿ

‘ಜಾತಿ, ವರ್ಗರಹಿತ ಸಮಾಜ ನಿರ್ಮಾಣಕ್ಕಾಗಿ ಹಾಗೂ ಮಹಿಳೆಯರ ಸಮಾನತೆಗಾಗಿ ಹೋರಾಡಿದ ಬಸವಾದಿ ಶಿವಶರಣರು ಇಂದಿನ ಸಮಾಜಕ್ಕೆ ಆದರ್ಶವಾಗಬೇಕು’ ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಶ್ರೀ ಹೇಳಿದರು.

ನಗರದ ಓಲೇಮಠದಲ್ಲಿ ಆನಂದ ದೇವರ ನೇತೃತ್ವದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಜೀವನದಲ್ಲಿ ಶಾಶ್ವತ ಆನಂದ ಪಡೆಯುವ ಸಂಕಲ್ಪ ಮಾಡಿ ಮಠಗಳಿಗೆ ಭಕ್ತರು ಬಂದು ಸಂಸ್ಕಾರವಂತರಾಗಬೇಕು. ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಸಮಾಜ ಉದ್ಧಾರವಾಗುತ್ತದೆ. ವಚನ ಸಾಹಿತ್ಯವನ್ನು ಉಳಿಸಿದ ಶ್ರೇಯಸ್ಸು ಓಲೇಮಠಕ್ಕೆ ಸಲ್ಲುತ್ತದೆ’ ಎಂದರು.

ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀ ಮಾತನಾಡಿ, ‘ಜೀವನದ ಪ್ರತಿ ಹೆಜ್ಜೆಯನ್ನು ಹೇಗೆ ಇಡಬೇಕು ಎಂಬುದನ್ನು ವಚನಗಳು ಕಲಿಸಿಕೊಡುತ್ತವೆ, ವಚನಗಳನ್ನು ಓದುವಾಗ ಶರಣರ ಸಾನ್ನಿಧ್ಯ ಅನುಭವಿಸಬಹುದು. ವಚನಗಳ ಮೂಲಕ ಶರಣರ ದರ್ಶನ ಮತ್ತು ಮಾರ್ಗದರ್ಶನ ಪಡೆಯಬಹುದು. ವಚನಗಳನ್ನು ಓದಿ ಮನದ ಮೈಲಿಗೆ ಕಳೆದುಕೊಂಡು ಮಾನವರು ಕೂಡ ದೇವಮಾನರಾಗಲು ಸಾಧ್ಯ’ ಎಂದು ತಿಳಿಸಿದರು.

ಝುಂಜರವಾಡದ ಬಸವರಾ ಜೇಂದ್ರ ಶರಣರು ಮಾತನಾಡಿ, ‘ಸತಿ-ಪತಿಗಳು ಒಂದಾಗದಿದ್ದರೆ ಬಾಂಧವ್ಯವಾಗದೆ ಬಂಧನವಾಗುತ್ತದೆ. ಸತಿ-ಪತಿಗಳ ನಡುವೆ ಸಂಶಯ ಮೂಡಿದರೆ ಭೇದದ ಗೋಡೆ ನಿರ್ಮಾಣವಾಗುತ್ತದೆ. ಆದ್ದರಿಂದ ಸತಿ-ಪತಿಗಳು ಒಂದಾಗಬೇಕು’ ಎಂದರು.

ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀ, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಶಿವಬಸವ ದೇವರು ಸಾನ್ನಿಧ್ಯ ವಹಿಸಿದ್ದರು.

ರಾಮತೀರ್ಥ ರೋಟರಿ ಸಂಸ್ಥೆಯ ಅಧ್ಯಕ್ಷ ಕಿರಣ ಜಾಲಿಹಾಳ, ಸಿದ್ರಾಮ ಜಂಬಗಿ, ಚೆನ್ನಬಸವ ತೆಲಬಕ್ಕನವರ, ನಂದೆಪ್ಪ ಹಿಪ್ಪರಗಿ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಉಮೇಶ ಶಿದರಡ್ಡಿ, ನಿವೃತ್ತ ಶಿಕ್ಷಕ ಎಂ.ಕೆ. ಪಟ್ಟಣಶೆಟ್ಟಿ ಇದ್ದರು.

ಹನಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಹೇಮಾ ಮಠಪತಿ ಸ್ವಾಗತಿಸಿದರು. ಅರುಣಾ ಕಟಗಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *