ಅನುಭವ ಮಂಟಪದ ಪ್ರಥಮ ಅಧ್ಯಕ್ಷರ ಜಯಂತಿ
ಚಿತ್ರದುರ್ಗ
ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಲೋಕದ ನಿರ್ಮಾಯ ಅಲ್ಲಮಪ್ರಭುಗಳು ಎಂದು ಎಸ್.ಜೆ.ಎಂ.ವಿದ್ಯಾಪೀಠ ಹಾಗೂ ಮುರುಘರಾಜೇಂದ್ರ ಬೃಹನ್ಮಠ ಆಡಳಿತಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿಗಳು ತಿಳಿಸಿದರು.
ಶ್ರೀಗಳು ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಗುರುವಾರ ಆಯೋಜಿಸಿದ್ದ ಶೂನ್ಯಪೀಠ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುಗಳ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಅಲ್ಲಮಪ್ರಭುಗಳ ಜೀವನ ಮತ್ತು ಸಾಧನೆ ಅತ್ಯಂತ ಅನನ್ಯವಾದದು.
ಈ ನೆಲದ ಬಳ್ಳಿಗಾವಿಯ ಬಳ್ಳಿಗೆ ಒಮ್ಮಿಂದೊಮ್ಮೆ ಅರಳಿದ ಹೂವಾಗಿ, ಜ್ಞಾನ ವೈಚಾರಿಕತೆಯ ಪ್ರಾಜ್ಞನಾಗಿ, ೧೨ನೇ ಶತಮಾನದ ಎಲ್ಲ ಶರಣರ, ಸಾಧಕರ, ಸಿದ್ದರ, ಸಂತರ ಮೇಲೆ ತನ್ನ ಆಳವಾದ ಪ್ರಭಾವವನ್ನು ಬೀರಿದವರು, ಶರಣ ಮಾರ್ಗಕ್ಕೆ ಗುರುವಾದವರು, ಅನುಭವ ಮಂಟಪದ ಅಧ್ಯಕ್ಷನಾದವರು, ಶೂನ್ಯ ಸಿಂಹಾಸನದ ದೊರೆಯಾದವರು, ಒಬ್ಬ ವ್ಯಕ್ತಿ ಇಷ್ಟೊಂದು ಅಂತರ್ಮುಖಿಯಾಗಿ ಬದುಕಲು ಸಾಧ್ಯವೇ? ಎಂಬುದನ್ನು ಸಾಧಿಸಿ ತೋರಿಸಿದವರು ಅಲ್ಲಮಪ್ರಭುಗಳು.
ಅವರು ಯಾವ ಕಟ್ಟುಪಾಡಿಗೆ ಒಳಗಾಗಲಿಲ್ಲ, ಎಲ್ಲಾ ಮಾರ್ಗಗಳ, ಎಲ್ಲಾ ಪಂಥಗಳ, ಎಲ್ಲಾ ವ್ಯಕ್ತಿಗಳ ಗುಣಾಂಶವನ್ನು ಮೆಚ್ಚಿದವರು. ಅವಗುಣಗಳನ್ನು ಖಂಡಿಸಿದವರು. ಅಲ್ಲಮರ ನಿಷ್ಠುರತೆಯ ಹಿಂದೆ ವೈಚಾರಿಕತೆಯ ಪ್ರಖರತೆ ಇತ್ತು. ಸತ್ಯ ಪ್ರೇಮಿ ಶುದ್ಧ ಬುದ್ಧಿ ಇತ್ತು. ಮಾತೃ ಹೃದಯದ ವಾತ್ಸಲ್ಯವಿತ್ತು. ಚಾರಿತ್ರಿಕ ಬುದ್ಧಿಯ ಸೂಕ್ಷ್ಮತೆ ಇತ್ತು. ಈ ಕಾರಣದಿಂದಾಗಿಯೇ ೧೨ನೇ ಶತಮಾನದ ಎಲ್ಲಾ ಶರಣರು ಅವರಿಗೆ ತಲೆಬಾಗುತ್ತಿದ್ದರು.

ಅಲ್ಲಮಪ್ರಭು ದೇವರ ವ್ಯಕ್ತಿತ್ವ ಮತ್ತು ಅವರ ವಚನಗಳ ರಚನೆ, ಕನ್ನಡ ಸಾಹಿತ್ಯ, ಸಾಂಸ್ಕೃತಿಕ, ಆಧ್ಯಾತ್ಮಿಕ ಲೋಕಕಷ್ಟೇ ಸೀಮಿತವಾಗದೆ ಇಡೀ ಭಾರತೀಯ ಮತ್ತು ಜಾಗತಿಕ ಲೋಕಕ್ಕೆ ಅಸಾಧಾರಣವಾದ ಕಾಣಿಕೆಯಾಗಿದೆ.
ಒಬ್ಬ ಸಾಹಿತಿ ಪ್ರಭುದೇವರನ್ನು ನೋಡುವ ದೃಷ್ಟಿಕೋನಕ್ಕೂ, ಒಬ್ಬ ಸ್ವಾಮೀಜಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾಕೆಂದರೆ ಅಲ್ಲಮ ಈ ನೆಲದ ಬಹುದೊಡ್ಡ ತತ್ವಜ್ಞಾನಿ. ಜಗತ್ತಿನ ಧರ್ಮಗಳೆಲ್ಲ ಮತಗಳಾಗಿ, ಜಾತಿಗಳಾಗಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಮತವೇ ಬೇರೆ, ಧರ್ಮವೇ ಬೇರೆ ಎಂದು ಸಾಧಿಸಿ ತೋರಿಸಿದವರು ಅಲ್ಲಮ ಪ್ರಭುದೇವರು. ಇಂತಹ ಅಲ್ಲಮ ವ್ಯಕ್ತಿಯಾಗಿ ಮಾತ್ರವಲ್ಲ ಒಂದು ಸಿದ್ಧಾಂತವಾಗಿ ಕಂಡವರು. ಉರಿವ ಅಗ್ನಿಗೆ ಮೈಯೆಲ್ಲಾ ನಾಲಿಗೆ ಎಂಬಂತೆ ಅಲ್ಲಮರು ಶಬ್ದದೊಳಗೆ ನಿಶಬ್ದವನ್ನು ಕಂಡವರು.
ಅಲ್ಲಮಪ್ರಭುಗಳ ಬಗ್ಗೆ ಶೂನ್ಯ ಸಂಪಾದನೆಗಳಲ್ಲಿ ಸಾಕಷ್ಟು ವಿವರಗಳು ದೊರಕುತ್ತವೆ. ಶೂನ್ಯ ಸಂಪಾದನೆ ಆಗಬೇಕೇ ಹೊರತು ಸಂಪಾದನೆ ಶೂನ್ಯವಾಗಬಾರದು. ಸಂಪಾದನೆ ಅದು ಜ್ಞಾನದ ಪ್ರತೀಕವಾಗಬೇಕು. ಅಲ್ಲಮ ಜ್ಞಾನದ ವೈರಾಗ್ಯ ನಿಧಿ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳ ನಾಡಿದ ನಿವೃತ್ತ ಪ್ರಾಂಶುಪಾಲರಾದ ಕೊಟ್ರೇಶ್ ಅವರು ಮಾತನಾಡಿ, ಅಲ್ಲಮಪ್ರಭುಗಳು ಹಲವಾರು ಶರಣರನ್ನು ಪ್ರಭಾವಿಸಿದವರು. ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ದರಾಮರಿಗೆ ಕೈವಲ್ಯ ಜ್ಞಾನವನ್ನು ನೀಡಿದವರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವ ಯಾದವಾನಂದ ಶ್ರೀಗಳು, ಶ್ರೀ ಮುರುಘೇಂದ್ರ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಶ್ರೀ ಪೂರ್ಣಾನಂದ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ, ನಾಗರಾಜ್ ಸಂಗಮ್, ಆನಂದ್, ಬಸವರಾಜ ಕಟ್ಟಿ, ಬಿ ಟಿ ನಂದೀಶ್, ಪದ್ಮಪೀಠ ನೇಕಾರ ಮಾಸಪತ್ರಿಕೆಯ ವರದಿಗಾರ ಎಂ ಜಿ ಲಿಂಗರಾಜ್, ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಮೇಶ್ ಪತ್ತಾರ್ ವಚನ ಪ್ರಾರ್ಥಿಸಿ, ಬಸವರಾಜ್ ಸ್ವಾಗತಿಸಿ ನಿರೂಪಿಸಿದರು.
