‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ…’ ಎಂಬ ಲೋಕಪ್ರಸಿದ್ಧ ನುಡಿಯನ್ನು ಎಲ್ಲರೂ ಕೇಳಿರುತ್ತಾರೆ. ‘ವಜ್ರದಂತೆ ಕಠೋರ’ ಎಂಬ ನುಡಿ ಗಮನ ಸೆಳೆಯುತ್ತದೆ. ಥಳ ಥಳ ಹೊಳೆಯುವ ವಜ್ರ ಕಠಿಣವಾದ ವಸ್ತುವಾಗಿದೆ.
ಹಾಗೆ ಅಲ್ಲಮಪ್ರಭುದೇವರ ವಚನಗಳು ಮೇಲ್ನೊಟಕ್ಕೆ ಸರಳವೆನಿಸಿದರೂ ಅಧ್ಯಯನದ ಆಳಕ್ಕೆ ಇಳಿದಾಗ, ವಜ್ರಕ್ಕಿಂತಲೂ ಕಠಿಣವೆನಿಸುವ ಭಾವ ಓದುಗರಲ್ಲಿ ಮೂಡುತ್ತದೆ. ಹಾಗೆ ನೋಡಿದರೆ ಅಲ್ಲಮಪ್ರಭುದೇವರು ಇಡೀ ಶರಣ ಚಳುವಳಿಯಲ್ಲಿಯೇ ಒಂದು ಭಿನ್ನ ಸ್ವರ. ಎಲ್ಲ ಪಂಥ ಮತ ಧರ್ಮಗಳನ್ನು ಮೀರಿ ನಿಲ್ಲುವ ಘನ ವ್ಯಕ್ತಿತ್ವ ಅವರದು. ಅಂತೆಯೇ ಅವರನ್ನು ‘ಅಪಾಂಥಿಕ’ ಎಂದು ಕರೆಯಬಹುದು.
ಹೀಗೆ ಎಲ್ಲವನ್ನೂ ಮೀರಿ ನಿಂತ ಅನುಭಾವದ ತುತ್ತತುದಿ ಏರಿದ ಅಲ್ಲಮರ ಅನಿರ್ವಚನೀಯವಾದ ವಚನಗಳನ್ನು ಓದಿ ಅರಗಿಸಿಕೊಳ್ಳುವುದು ತುಂಬ ಕಷ್ಟದ ಕೆಲಸ. ಪ್ರಭುದೇವರ ವಚನಗಳಿಗೆ ೧೫ನೇ ಶತಮಾನದಲ್ಲಿಯೇ ಕಲ್ಲುಮಠದ ಪ್ರಭುದೇವರು ಮತ್ತು ಮಹಾಲಿಂಗದೇವರು ಟೀಕೆ ಬರೆಯುವ ಪ್ರಯತ್ನ ಮಾಡಿದ್ದಾರೆ.
ಪ್ರೌಢದೇವರಾಯನ ಕಾಲವನ್ನು ವಚನ ಸಾಹಿತ್ಯದ ಪುನರುಜ್ಜೀವನದ ಘಟ್ಟವೆಂದು ಕರೆಯಲಾಗಿದೆ. ಈ ಕಾಲದಲ್ಲಿಯೇ ವಚನಗಳಿಗೆ ಹೆಚ್ಚು ಟೀಕೆ-ವ್ಯಾಖ್ಯಾನ ಬರೆಯುವ ಪರಂಪರೆ ಬೆಳೆದು ಬಂದಿತು. ಸಂಸ್ಕೃತದಲ್ಲಿ ಹೀಗಿರುವ ಸಾಹಿತ್ಯವನ್ನು ವ್ಯಾಖ್ಯಾನ, ಭಾಷ್ಯ, ವಾರ್ತಿಕ, ಅಧಿಕರಣ, ತಾತ್ಪರ್ಯ ನಿರ್ಣಯಗಳೆಂಬ ಹೆಸರಿನಿಂದ ಕರೆದರೆ, ಕನ್ನಡ ಕೃತಿಗಳಿಗೆ ಟೀಕೆ ಬರೆದ ಲಿಂಗಾಯತ ಟೀಕಾಕಾರರು ಟೀಕೆ, ವ್ಯಾಖ್ಯಾನ, ಟಿಪ್ಪಣಿ, ಸಾರಾರ್ಥ, ಸಾರಾಮೃತ, ವಾಚ್ಯ, ವಚನಾರ್ಥ, ನುಡಿ ಮುಂತಾದ ಪದಗಳನ್ನು ಬಳಸಿರುವುದು ಗಮನಿಸುವ ಅಂಶ.
೧೫ನೇ ಶತಮಾನದಲ್ಲಿ ಕಲ್ಲುಮಠದ ಪ್ರಭುದೇವರು ಮತ್ತು ಮಹಾಲಿಂಗದೇವರು ಅಲ್ಲಮನ ವಚನಗಳಿಗೆ ಟೀಕೆಯನ್ನು ಬರೆದಿದ್ದರು. ಶರಣ ಸಾಹಿತ್ಯದಲ್ಲಿ ಟೀಕಿನ ಸಾಹಿತ್ಯ ಅಪಾರವಾಗಿದೆ. ಟೀಕೆ, ವ್ಯಾಖ್ಯಾನ-ಸಂಕಲನ ಸಂಪಾದನ-ಸಂಗ್ರಹ ಮೊದಲಾದ ಪ್ರಕ್ರಿಯೆಗಳಿಂದ ವಚನಸಾಹಿತ್ಯ ಮತ್ತಷ್ಟು ಸಮೃದ್ಧಗೊಂಡಿತು. ಯೋಗದ ಪರಿಭಾಷೆಯನ್ನು ಅಲ್ಲಮನಷ್ಟು ನಿಚ್ಚಳವಾಗಿ ತಿಳಿಸುವ ಮತ್ತೊಬ್ಬ ದಾರ್ಶನಿಕರು ಇಲ್ಲ. ಇಮ್ಮಡಿ ಶಿವಬಸವ ಸ್ವಾಮಿಗಳು ‘ಅಲ್ಲಮನ ಟೀಕಿನ ವಚನಗಳು’ ಎಂಬ ಕೃತಿಯನ್ನು ಸಂಪಾದಿಸಿ, ವಿಸ್ತೃತವಾದ ಪ್ರಸ್ತಾವನೆಯನ್ನು ಬರೆದು ಪ್ರಕಟಿಸಿದ್ದಾರೆ. ಯೋಗದ ಹತ್ತಾರು ಆಯಾಮಗಳು ಬೆಳೆದು ಬಂದ ಬಗೆ, ಎಲ್ಲ ಯೋಗಗಳಲ್ಲಿ ಶಿವಯೋಗದ ಸ್ಥಾನಮಾನ ಮೊದಲಾದ ವಿಷಯಗಳನ್ನು ಕುರಿತು ಶಿವಬಸವ ಸ್ವಾಮಿಗಳು ಅಲ್ಲಮನ ವಚನಗಳ ಆಧಾರದಿಂದ ಪ್ರತಿಪಾದಿಸಿದ್ದಾರೆ. ಅಲ್ಲಮನನ್ನು ಅಧ್ಯಯನ ಮಾಡುವ ಯಾರೇ ಆಗಲಿ, ಶಿವಬಸವ ಸ್ವಾಮಿಗಳ ಈ ಪ್ರಸ್ತಾವನೆಯನ್ನು ನೋಡಿಯೇ ಮುಂದೆ ಸಾಗಬೇಕು. ಅಷ್ಟರಮಟ್ಟಿಗೆ ತಾತ್ವಿಕ ಮತ್ತು ಸಂಶೋಧನಾತ್ಮಕ ಪ್ರಸ್ತಾವನೆ ಅದಾಗಿದೆ.
ವಚನಗಳ ಹಾಗೂ ವಚನಗಳಿಗೆ ಬರೆದ ಟೀಕೆಗಳು ಸಾಂಸ್ಕೃತಿಕ ಅಧ್ಯಯನಕ್ಕೆ ತುಂಬ ಸಹಕಾರಿಯಾಗುತ್ತವೆ. ಒಂದು-ಶರಣರ ಕಾಲದ ಸಾಂಸ್ಕೃತಿಕ ಜೀವನವನ್ನು ಹೇಳಿದರೆ; ಇನ್ನೊಂದು; ಟೀಕಾಕಾರನ ಕಾಲದ ಸಾಂಸ್ಕೃತಿಕ ಜೀವನದ ಚಿತ್ರವನ್ನು ಒದಗಿಸುತ್ತದೆ. ಹೀಗಿದ್ದೂ ಟೀಕಾಕಾರನ ಕಾಲದ, ಅದರಲ್ಲಿಯೂ ಅವನ ಪ್ರದೇಶದ ಜನಜೀವನವನ್ನು ಚಿತ್ರಿಸುವಲ್ಲಿ ಅಲ್ಲಮಪ್ರಭುದೇವರ ಕಾಲದ ಸಾಮಾಜಿಕ ಜೀವನದ ಎಳೆಗಳು ಸೇರಿಕೊಂಡಿರುವ ಸಾಧ್ಯತೆಯಿದೆಯೆಂಬುದನ್ನು ಮರೆಯಲಾಗದು. ಕಲ್ಲುಮಠದ ಪ್ರಭುದೇವರು ಅಲ್ಲಮಪ್ರಭುದೇವರ ಷಟ್ಸ್ಥಲ ವಚನಗಳಿಗೆ ಮಾತ್ರ ಟೀಕೆ ಬರೆದಿದ್ದಾರೆ. ಈ ಟೀಕೆಯ ಜೊತೆಗೆ ಮಹಾಲಿಂಗದೇವರ ಟೀಕೆಯನ್ನು ಸಂಯುಕ್ತವಾಗಿ ಜೋಡಿಸಿ ಡಾ. ಶಿವಬಸವ ಸ್ವಾಮಿಗಳು ಔಚಿತ್ಯಪೂರ್ಣವಾಗಿ ಸಂಪಾದಿಸಿದ್ದಾರೆ.
ಹನ್ನೆರಡನೆಯ ಶತಮಾನದಲ್ಲಿ ರಚಿತವಾದ ವಚನಗಳಲ್ಲಿ ಕೆಲವು ವಚನಗಳಿಗಾದರೂ ಟೀಕೆ ಬರೆಯುವ ಕಾರ್ಯ ಬಹುಶಃ ಅಂದೇ ನಡೆದಿರಬಹುದೆನಿಸುತ್ತದೆ. ಈ ಟೀಕಾಕಾರ್ಯ ಹೆಚ್ಚು ಸಮರ್ಪಕ, ವ್ಯವಸ್ಥಿತ ಹಾಗೂ ವ್ಯಾಪಕವಾಗಿ ಪ್ರಾರಂಭವಾದುದು ನೂರೊಂದು ವಿರಕ್ತರ ಕಾಲದಲ್ಲಿ. ಇವರು ವಚನಗಳಿಗೆ ತತ್ತ್ವಾರ್ಥ ಹಾಗೂ ವಾಚ್ಯಾರ್ಥ ರೂಪದ ಟೀಕೆ ಬರೆದುದು ತಿಳಿದು ಬರುತ್ತದೆ. ವಚನಗಳ ಅರ್ಥವನ್ನು ಸಮಕಾಲೀನರಿಗೆ ಬಿಡಿಸಿ ಹೇಳುವ ಉದ್ಧೇಶ ಕಾರಣವಾಗಿ ಈ ಟೀಕೆಗಳಲ್ಲಿ ಆಯಾ ಕಾಲದ ಸಾಮಾಜಿಕ ಅಧ್ಯಯನ, ಆ ಕಾಲದ ಚಟುವಟಿಗಳಿಗೆ ಕಲ್ಲುಮಠದ ಪ್ರಭುದೇವರು ಬರೆದ ವ್ಯಾಖ್ಯಾನ ಅರ್ಥಪೂರ್ಣವಾಗಿದೆ.
ಡಾ. ಎನ್.ಜಿ. ಮಹಾದೇವಪ್ಪನವರು ತಮ್ಮ ಮಾತಿನಲ್ಲಿ ಈ ವ್ಯಾಖ್ಯಾನಗಳ ಕುರಿತು ಹೀಗೆ ಹೇಳುತ್ತಾರೆ : “ಅಲ್ಲಮನ ವಚನಗಳು ವಜ್ರಗಳಂತೆ ಕಠಿಣವಾದುದರಿಂದ ಅವುಗಳನ್ನು ಇಲ್ಲಿ ವಜ್ರ ಎಂದು ಕರೆಯಲಾಗಿದೆ. ಅವುಗಳ ಕಾಠಿಣ್ಯದ ಅರಿವು ಹಿಂದಿನವರಿಗೂ ಇತ್ತು. ಜಕ್ಕಣಾರ್ಯ ಮತ್ತು ಕಲ್ಲುಮಠದ ಪ್ರಭುದೇವ (ಹದಿನೈದನೆಯ ಶತಮಾನ) ಅವುಗಳಿಗೆ ವ್ಯಾಖ್ಯಾನ ಬರೆದು ಅವುಗಳು ಅಭೇದ್ಯವಲ್ಲವೆಂದೂ ಕೇವಲ ಕಠಿಣವೆಂದೂ ತೋರಿಸಿಕೊಟ್ಟಿದ್ದಾರೆ. ‘ಅಲ್ಲಮನ ವಜ್ರಗಳು’ ಅವರ ವ್ಯಾಖ್ಯಾನವನ್ನು ಅವಲಂಬಿಸಿರುವುದರಿಂದ ಅವರಿಗೆ ನನ್ನ ಮೊದಲ ಕೃತಜ್ಞತಾಪೂರ್ವಕ ವಂದನೆಗಳು’. ಇದು ಡಾ. ಮಹಾದೇವಪ್ಪನವರ ಸೌಜನ್ಯಶೀಲ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ.
ಆಧುನಿಕ ಕಾಲಘಟ್ಟದಲ್ಲಿ ಎಲ್. ಬಸವರಾಜು ಅವರು ‘ಅಲ್ಲಮನ ವಚನಗಳು’ ಎಂಬ ಕಾವ್ಯಾತ್ಮಕ ಅನುವಾದದ ಕೃತಿಯೊಂದನ್ನು ರಚಿಸಿದ್ದಾರೆ. ಈ ಕೃತಿ ಸುತ್ತೂರು ಶ್ರೀಮಠದಿಂದ ಪ್ರಕಟವಾಗಿದೆ. ಹಾಗೆಯೇ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ‘ಅಲ್ಲಮನ ವಚನ ನಿರ್ವಚನ’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಎರಡೂ ಕೃತಿಗಳು ಅಲ್ಲಮಪ್ರಭುದೇವರ ಷಟ್ಸ್ಥಲ ವಚನಗಳಿಗೆ ಮಾತ್ರ ಸೀಮಿತವಾಗಿವೆ. ಅದರಲ್ಲೂ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳವರ ವಚನ ನಿರ್ವಚನ ಸಾಮಾನ್ಯ ಓದುಗರಿಗೆ ನಿಲುಕಲಾರದ ಕೃತಿಯಾಗಿಯೇ ಉಳಿದಿದೆ. ಶ್ರೀಗಳ ಅಪಾರ ಜ್ಞಾನ ಸಂಪತ್ತಿನ ಅರ್ಥವ್ಯಾಖ್ಯಾನ ಜನಸಾಮಾನ್ಯರಿಗೆ ತಿಳಿಯುವುದು ಸ್ವಲ್ಪ ಕಠಿಣವೇ ಆಗಿದೆ. ಅಲ್ಲದೆ, ಶ್ರೀ ಸಿದ್ಧೇಶ್ವರ ಶ್ರೀಗಳು ಅಲ್ಲಮನ ವಚನಗಳನ್ನು ಅದ್ವೈತ ವೇದಾಂತದ ದೃಷ್ಟಿಕೋನದ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿರುವುದರಿಂದ ವಚನ ಸಂಸ್ಕೃತಿ ಅಭ್ಯಾಸಿಗಳಿಗೆ ಅದು ಸುಲಭಗ್ರಾಹ್ಯವಾಗುವುದಿಲ್ಲ.
ಅಲ್ಲಮಪ್ರಭುದೇವರ ವಚನಗಳ ಸರಿಯಾದ ವ್ಯಾಖ್ಯಾನದ ಅನಿವಾರ್ಯತೆ ಕಾಲಧರ್ಮದ ಅಗತ್ಯವಾಗಿತ್ತು ಎಂದೆನಿಸುತ್ತದೆ. ಡಾ. ಎನ್. ಜಿ. ಮಹಾದೇವಪ್ಪನವರು ಅಲ್ಲಮಪ್ರಭುದೇವರ ಷಟ್ಸ್ಥಲ ವಚನಗಳಿಗೆ ಮಾತ್ರವಲ್ಲದೆ, ಹೆಚ್ಚಿನ ವಚನಗಳಿಗೂ ವ್ಯಾಖ್ಯಾನ ಬರೆದು, ವಜ್ರದಷ್ಟು ಕಠಿಣವಾಗಿರುವ ಅಲ್ಲಮರ ವಚನಗಳನ್ನು ಕುಸುಮ ಕೋಮಲದಂತೆ ಎಡೆ ಮಾಡಿಕೊಟ್ಟಿದ್ದಾರೆ. ಈಗಾಗಲೇ ಅವರು ತೋಂಟದ ಸಿದ್ಧಲಿಂಗ ಶಿವಯೋಗಿಗಳ ಸಮಗ್ರ ವಚನಗಳು ಷಟ್ಸ್ಥಲ ಜ್ಞಾನಸಾರಾಮೃತ ಕೃತಿಯ ೭೦೧ ವಚನಗಳಿಗೂ ಸವಿಸ್ತಾರವಾದ ವ್ಯಾಖ್ಯಾನವನ್ನು ರಚಿಸಿದ್ದಾರೆ. ಈಗ ಅಲ್ಲಮಪ್ರಭುದೇವರ ಸಮಗ್ರ ವಚನಗಳಿಗೂ ವ್ಯಾಖ್ಯಾನ ಬರೆದು ಸಮಸ್ತ ಕನ್ನಡಿಗರಿಗೆ ಮಹದುಪಕಾರ ಮಾಡಿದ್ದಾರೆ.
‘ಅಲ್ಲಮನ ವಜ್ರಗಳು’ ಆಧುನಿಕ ಶರಣ ಸಾಹಿತ್ಯ ಚರಿತ್ರೆಯಲ್ಲಿಯೇ ದಾಖಲಾರ್ಹವಾದ ಒಂದು ಪ್ರಯತ್ನವೆಂದು ಹೇಳಬೇಕು. ಇಷ್ಟೊಂದು ಸರಳವಾಗಿ ಅಲ್ಲಮರ ವಚನಗಳಿಗೆ ವ್ಯಾಖ್ಯಾನ ಬರೆಯುವುದು ಸುಲಭವಾದ ಕೆಲಸವಲ್ಲ. ತಮ್ಮ ಇಳಿ ವಯಸ್ಸಿನಲ್ಲಿಯೂ ಡಾ. ಮಹಾದೇವಪ್ಪನವರು ತಪಸ್ಸಿನಂತೆ ಕುಳಿತು ಈ ಕಾರ್ಯವನ್ನು ಆಗು ಮಾಡಿದ್ದಾರೆ.
ವರ್ತಮಾನದ ಕಾಲಘಟ್ಟದಲ್ಲಿ ಶರಣ ಸಂಸ್ಕೃತಿ, ಲಿಂಗಾಯತ ಧರ್ಮ ತತ್ವ ಸಿದ್ಧಾಂತಗಳ ಕುರಿತು ದಾರ್ಶನಿಕ ನೆಲೆಯಲ್ಲಿ ಸಮಗ್ರವಾದ ವಿವರಣೆ ನೀಡುವ ಏಕೈಕ ವಿದ್ವಾಂಸರೆಂದರೆ ಡಾ. ಎನ್. ಜಿ. ಮಹಾದೇವಪ್ಪನವರು ಮಾತ್ರ. ಡಾ. ರಾಧಾಕೃಷ್ಣನ್, ಪ್ರೊ. ಹಿರಿಯಣ್ಣ, ಡಾ. ಸುರೇಂದ್ರನಾಥ ದಾಸಗುಪ್ತ ಮೊದಲಾದ ಆಧುನಿಕ ಭಾರತೀಯ ತತ್ವಜ್ಞಾನಿಗಳ ಬರಹಗಳಿಗೆ ಸರಿದೊರೆಯಾಗಿ ಕನ್ನಡದಲ್ಲಿ ನಿಲ್ಲಬಲ್ಲ ಏಕೈಕ ಸಾಹಿತ್ಯವೆಂದರೆ ಅದು ಡಾ. ಎನ್. ಜಿ. ಮಹಾದೇವಪ್ಪನವರದು. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರೇ ಡಾ. ಮಹಾದೇವಪ್ಪನವರ ದಾರ್ಶನಿಕ ಜ್ಞಾನಕ್ಕೆ ಬೆರಗಾಗಿದ್ದರು. ಅವರು ೨೦೦೪ರಲ್ಲಿ ಬರೆದ ‘ವಚನಗಳಲ್ಲಿ ತತ್ವಮೀಮಾಂಸೆ’ ಕೃತಿಯನ್ನು ತುಂಬ ಪ್ರೀತಿಯಿಂದ ಓದಿ, ನಲ್ನುಡಿ ಬರೆದು, ಇದು ಕನ್ನಡದಲ್ಲಿ ಮೊದಲ ಪ್ರಯತ್ನ, ಇದು ತತ್ವದರ್ಶನಗಳ ಚಿಂತನೆಗೆ ಮಾದರಿಯಾದ ಕೃತಿಯೆಂದು ಮನದುಂಬಿ ಬಣ್ಣಿಸಿದ್ದರು. ಇಂತಹ ಹಿರಿಯ ವಿದ್ವಾಂಸರು ಅಲ್ಲಮನ ವಚನಗಳಿಗೆ ನೀಡಿದ ವ್ಯಾಖ್ಯಾನ ಅತ್ಯಂತ ಹೃದಯಂಗಮವಾಗಿದೆ.
ಡಾ. ಮಹಾದೇವಪ್ಪನವರು ಪ್ರಸ್ತಾವನೆಯಲ್ಲಿ ಅಲ್ಲಮನ ಶಬ್ದ ನಿಷ್ಪತ್ತಿ, ಅಲ್ಲಮನ ಸಂಕ್ಷಿಪ್ತ ಜೀವನ, ಅಲ್ಲಮನ ಅನುಭಾವ, ಅಲ್ಲಮನ ತತ್ವಶಾಸ್ತ್ರ, ಅಲ್ಲಮನ ವಚನಗಳ ಭಾಷೆ ಕುರಿತು ತುಂಬ ಮೌಲಿಕ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ.
ಡಾ. ಮಹಾದೇವಪ್ಪನವರ ವಚನ ವ್ಯಾಖ್ಯಾನವು ಎಷ್ಟು ಸರಳ ಸುಭಗ ಎಂಬುದಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮಿಗಳ ವಚನ ನಿರ್ವಚನದೊಂದಿಗೆ ತುಲನೆ ಮಾಡಿದಾಗ, ಅದರ ಅನುಭವ ನಮಗಾಗುತ್ತದೆ.
ವೇದ ಪ್ರಮಾಣವಲ್ಲ, ಶಾಸ್ತ್ರ ಪ್ರಮಾಣವಲ್ಲ,
ಪುರಾಣ ಪ್ರಮಾಣವಲ್ಲ ಕಾಣಿಭೋ ಲಿಂಗಕ್ಕೆ!
ಅಂಗಸಂಗದ ಮಧ್ಯದಲ್ಲಿದ್ದುದ ಬೈಚಿಟ್ಟು ಬಳಸಿದ
ಗುಹೇಶ್ವರಾ, ನಿಮ್ಮ ಶರಣ
ಈ ವಚನಕ್ಕೆ ಶ್ರೀ ಸಿದ್ಧೇಶ್ವರ ಶ್ರೀಗಳು ನೀಡುವ ವ್ಯಾಖ್ಯಾನ ಹೀಗಿದೆ : “ವೇದ ಶಾಸ್ತ್ರ ಪುರಾಣಗಳು ಲಿಂಗದ ಅಪರೋಕ್ಷ ಜ್ಞಾನಕ್ಕೆ ನೇರವಾದ ಸಾಧನಗಳಲ್ಲ. ತನ್ನ ದೇಹಾಂತರಂಗದೊಳಗೆ ನೆಲೆಸಿರುವ ಪ್ರಾಣಲಿಂಗವನ್ನು ಶರಣನು ಉನ್ಮನಿಯಾಗಿ ಅನುಭವಿಸುತ್ತಾನೆ. ಸರ್ವಾಂತರ್ಯಾಮಿಯಾದ ಲಿಂಗದ ಅಪರೋಕ್ಷಾನುಭೂತಿಯನ್ನು ಪಡೆಯಲು ಈ ವೇದಾದಿ ಶಬ್ದ ಪ್ರಮಾಣಗಳು ನೇರವಾಗಿ ಸಹಾಯಕವಾಗವು. ಅಂದರೆ ಇವುಗಳ ಕೇವಲ ಶಾಬ್ದಿಕ ಅಧ್ಯಯನದಿಂದ ಲಿಂಗದ ಸಾಕ್ಷಾತ್ಕಾರ ಉಂಟಾಗದು. ದೇಹದ ಒಳಗೆ ಮನಸ್ಸು, ಮನಸ್ಸಿನ ಮಧ್ಯೆ ಪ್ರಾಣಲಿಂಗ, ಶರಣನು ದೇಹವನ್ನು ಸ್ಥಿರಗೊಳಿಸಿ ಮನವನ್ನು ನಿಶ್ವಲಗೊಳಿಸಿ ಉನ್ಮನಿ ಅವಸ್ಥೆಯಲ್ಲಿ ನಿಂತು ಆ ಪರಮ ಪ್ರಾಣಲಿಂಗವನ್ನು ತನ್ನ ಸ್ವರೂಪವಾಗಿಯೇ ಅನುಭವಿಸುತ್ತಾನೆ. ಲಿಂಗವು ಪ್ರಮಾಣವೇದ್ಯವಲ್ಲ, ಅನುಭಾವ ವೇದ್ಯ ಎಂಬ ಆಶಯ ಇಲ್ಲಿದೆ” (ಶ್ರೀ ಸಿದ್ಧೇಶ್ವರ ಸ್ವಾಮಿಗಳು : ಅಲ್ಲಮಪ್ರಭುದೇವರ ವಚನ ನಿರ್ವಚನ ಪು. ೩೯೭-೩೯೮)
ಇದೇ ವಚನಕ್ಕೆ ಡಾ. ಮಹಾದೇವಪ್ಪನವರು ನೀಡುವ ವಿವರಣೆ ಹೀಗಿದೆ : “ವೇದದ ಕರ್ಮಕಾಂಡ ಭಾಗವು ಅನೇಕ ದೈವಗಳ ಬಗ್ಗೆಯೂ, ಯಜ್ಞಯಾಗಾದಿಗಳ ಮೂಲಕ ಅವುಗಳನ್ನು ಒಲಿಸಿಕೊಳ್ಳುವ ಬಗ್ಗೆಯೂ ವಿವರಣೆ ನೀಡುತ್ತದೆ. ಜ್ಞಾನಕಾಂಡವು ಲಿಂಗದ (ಬ್ರಹ್ಮದ) ಸ್ವರೂಪದ ಬಗ್ಗೆ ಹೇಳುತ್ತದೆ. ಆದರೆ ವೇದಗಳನ್ನು ಓದಿದ ಮಾತ್ರಕ್ಕೆ ನಮಗೆ ಲಿಂಗಾನುಭವ ಉಂಟಾಗುವುದಿಲ್ಲ. ಹಾಗೆಯೇ, ಶಾಸ್ತ್ರಗಳಾಗಲಿ, ಪುರಾಣಗಳಾಗಲಿ ನಮಗೆ ಲಿಂಗವನ್ನು ಅನುಭಾವದ ಮೂಲಕ ತಿಳಿದುಕೊಳ್ಳುವ ವಿಧಾನವನ್ನು ತಿಳಿಸಿಕೊಡುವುದಿಲ್ಲ. ನಮ್ಮ ದೇಹದಲ್ಲಿ ಮನಸ್ಸಿದೆ; ಮನಸ್ಸಿನ ಮಧ್ಯದಲ್ಲಿ ಲಿಂಗವಿದೆ. ದೇಹವನ್ನೂ, ಮನಸ್ಸನ್ನೂ ರಹಸ್ಯವಾಗಿ ಬಳಸುವ ಲಿಂಗವು ನಮಗೆ ಸುಲಭವಾಗಿ ವ್ಯಕ್ತವಾಗುವುದಿಲ್ಲ. ಅದನ್ನು ಕಠಿಣ ಶಿವಯೋಗ ಸಾಧನೆಯ ಮೂಲಕ ಪಡೆದ ಅನುಭಾವದಲ್ಲಿ ಮಾತ್ರ ಅನುಬವಿಸಬಹುದು. ಇದು ಶರಣನಿಗಷ್ಟೇ ಸಾಧ್ಯ” (ಎನ್. ಜಿ. ಮಹಾದೇವಪ್ಪ : ಅಲ್ಲಮನ ವಜ್ರಗಳು ಪು. ೧೨೬)
ಡಾ. ಮಹಾದೇವಪ್ಪನವರ ಸರಳಾತಿಸರಳ ನಿರೂಪಣೆಯಲ್ಲಿ ವಚನದ ಭಾವವೆಲ್ಲವೂ ಓದುಗರಿಗೆ ತಿಳಿಯುತ್ತದೆ. ಹೀಗೆ ಪ್ರತಿಯೊಂದು ವಚನಕ್ಕೂ ನೀಡಿದ ವಿವರಣೆ ಅತ್ಯಂತ ಮನೋಜ್ಞವಾಗಿ, ಸೋಪಜ್ಞಶೀಲವಾಗಿದೆ.
ಶಂಕರಾಚಾರ್ಯರ ಮಾಯಾವಾದದ ಅದ್ವೈತಕ್ಕೂ ಅಲ್ಲಮಪ್ರಭುದೇವರ ಲಿಂಗಾದ್ವೈತಕ್ಕೂ ತುಂಬ ವ್ಯತ್ಯಾಸವಿದೆ. ಲೋಕ ನಶ್ವರ, ನಾನೇ ಬ್ರಹ್ಮ ಎಂಬ ಮಾಯಾವಾದಕ್ಕೆ ಬದಲಾಗಿ ಇಂತಹ ಅದ್ವೈತಿಗಳನ್ನು ಕುರಿತು ಅಲ್ಲಮರು ಹೇಳುವ ವಚನ ತುಂಬ ಮಾರ್ಮಿಕವಾಗಿದೆ:
ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ
ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ!
ಪ್ರಥಮವಿಷಯವಿಂತಿರಲಿಕೆ,
ಗುಹೇಶ್ವರ ಏಕೋ ಅದ್ವೈತ!
ಈ ವಚನಕ್ಕೆ ಡಾ. ಮಹಾದೇವಪ್ಪನವರು ನೀಡುವ ವ್ಯಾಖ್ಯಾನ ತುಂಬ ಮೌಲಿಕವಾಗಿದೆ. ‘ಕೆಲವರು ಅಂಗನೂ ಲಿಂಗನೂ ಒಂದೇ ಎಂದು ಅದ್ವೈತದ ಮಾತಾಡುತ್ತಾರೆ. ಅವರದು ಕೇವಲ ವಾಗಾದ್ವೈತ ಏಕೆಂದರೆ ಅವರ ನಡೆ ನುಡಿಯಲ್ಲಿ ಅದ್ವೈತ ಕಾಣುವುದಿಲ್ಲ. ಅದ್ವೈತಿಯು ತಾನು ಲಿಂಗ, ಪ್ರಸಾದ ಮೂರೂ ಒಂದೇ ಎಂದು ಭಾವಿಸಿ, ಅದನ್ನು ಪ್ರತಿಕ್ಷಣದಲ್ಲಿಯೂ ಅನುಭವಿಸುತ್ತಾರೆ; ತಾನೇ ಲಿಂಗ, ಪ್ರಸಾದ ತನಗಾಗಿ ಅಲ್ಲ, ಲಿಂಗಕ್ಕಾಗಿ ಎಂಬ ಭಾವನೆಯಿಂದ ಪ್ರಸಾದವನ್ನು ಸೇವಿಸುತ್ತಾನೆ. ಅವನ ಪ್ರಸಾದ ಸೇವನೆಯಲ್ಲಿ ಸ್ವಾರ್ಥ ಭಾವ ಇಲ್ಲವೇ ಇಲ್ಲ. ಆದರೆ ವಾಗದ್ವೈತಿಗಳು ಕೇವಲ ತಮ್ಮ ಸ್ವಾರ್ಥಕ್ಕಾಗಿ ಆಹಾರ ಸೇವಿಸಿ, ತಾವು ಪ್ರಸಾದ ಸೇವಿಸಿರುವುದಾಗಿ ಹೇಳಿಕೊಳ್ಳುತ್ತಾರೆ. ಅವರನ್ನು ಖಂಡಿಸುತ್ತಾ ‘ಅವರ ಬಾಯಿ ಭಗ, ಕೈ ಇಂದ್ರಿಯ, ಆಹಾರ ಬಿಂದು’ ಎಂದು ವಿಡಂಬಿಸುತ್ತಾನೆ. ಅಂಥವರಿಗೆ ಅದ್ವೈತ ಜೀವನ ಹೇಗೆ ಸಾಧ್ಯ?” (ಪು. ೨೦೧) ಹೀಗೆ ಪ್ರತಿಯೊಂದು ಚಿಕ್ಕ ವಚನಕ್ಕೂ ವಿವರವಾದ ವ್ಯಾಖ್ಯಾನವನ್ನು ಡಾ. ಮಹಾದೇವಪ್ಪನವರು ನೀಡಿದ್ದಾರೆ.
ಮೊದಲ ಭಾಗದಲ್ಲಿ ೬೯೪ ಷಟ್ಸ್ಥಲ ವಚನಗಳಿಗೆ ವ್ಯಾಖ್ಯಾನವನ್ನು ನೀಡಿದರೆ, ಎರಡನೆಯ ಭಾಗದಲ್ಲಿ ೯೧೯ ವಚನಗಳಿವೆ. ಹೆಚ್ಚಿನ ವಚನಗಳಲ್ಲಿ ಬಹಳಷ್ಟು ಪ್ರಕ್ಷಿಪ್ತವಾಗಿವೆ ಎಂಬ ವಿದ್ವಾಂಸರ ಅಭಿಪ್ರಾಯವನ್ನು ಡಾ. ಮಹಾದೇವಪ್ಪನವರು ಇಲ್ಲಿ ಮನ್ನಿಸಿದ್ದಾರೆ. ಹೆಚ್ಚಿನ ವಚನಗಳಲ್ಲಿ ಷಟ್ಸ್ಥಲ ಸಿದ್ಧಾಂತಕ್ಕೆ ವಿರುದ್ಧವಾದ ಕೆಲವು ವಚನಗಳಿವೆ. ಬೆಳಗಿನ ಜಾವದಲ್ಲಿ ಲಿಂಗಪೂಜೆ ಮಾಡಿ ಸೂರ್ಯೋದಯವಾದ ಮೇಲೆ ಜಂಗಮರ ಕಾಲಿಗೆ ಬಿದ್ದರೆ ಹಿಂದಿನ ಏಳು ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂಬ ವಚನ ಅಲ್ಲಮನ ಮೂಲ ನಿಲುವಿಗೆ ವಿರುದ್ಧವಾಗಿದೆ. ವೇಷಧಾರಿ ಜಂಗಮರನ್ನು ಖಂಡಿಸುವ ಅವನು ಇದನ್ನು ಬರೆದಿರಲಾರ. ಅಲ್ಲದೆ, ಜಂಗಮರ ಕಾಲಿಗೆ ಬಿದ್ದರೆ ಪಾಪಗಳು ನಾಶವಾಗುತ್ತವೆ ಎಂಬ ಸುಳ್ಳನ್ನು ಅಲ್ಲಮ ಪ್ರತಿಪಾದಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾದ ಮಾತುಗಳ ಮೂಲಕ ಅಲ್ಲಮರ ಘನ ವ್ಯಕ್ತಿತ್ವವನ್ನು ವಿವರಿಸುವ ಪ್ರಯತ್ನ ಮಾಡುತ್ತಾರೆ. ಪ್ರಾರಂಭದ ಮೂರು ಶೂನ್ಯಸಂಪಾದನಕಾರರು ಅಲ್ಲಮ ಮತ್ತು ಬಸವಣ್ಣನವರ ವಿಚಿತ್ರ ವೈಪರಿತ್ಯದ ಪ್ರಸಂಗ ಸಾರುವ ವಿಷಯವನ್ನು ನಾಲ್ಕನೆಯ ಶೂನ್ಯಸಂಪಾದನಕಾರ ಕೈಬಿಟ್ಟದ್ದು ಸರಿಯಾಗಿದೆ ಎನ್ನುವ ಡಾ. ಮಹಾದೇವಪ್ಪನವರು ಅಂಥ ವಚನಗಳನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ. ‘ಒಟ್ಟಿನಲ್ಲಿ, ಹೆಚ್ಚಿನ ವಚನಗಳಿಂದ ಅಲ್ಲಮನ ಬಗ್ಗೆ ಹೆಚ್ಚಿನ ಅರಿವು ಉಂಟಾಗದು’ ಎಂಬ ನಿರ್ಣಯಕ್ಕೆ ಬರುತ್ತಾರೆ.
ಅನುಬಂಧದಲ್ಲಿ ಕಠಿನ ಪದಕೋಶ, ಪಾರಿಭಾಷಿಕ ಪದಕೋಶ, ಷಟ್ಸ್ಥಲ ವಚನಗಳ ಅಕಾರಾದಿಯನ್ನು ಕೊಟ್ಟಿರುವುದು ಓದುಗರಿಗೆ ತುಂಬ ಉಪಯುಕ್ತವಾಗಿದೆ. ಈ ಕೃತಿಯನ್ನು ಪ್ರೀತಿಯಿಂದ ಪ್ರಕಟಿಸಿ ಶರಣ ಸಾಹಿತ್ಯ ಅಧ್ಯಯನ ಮಾಡುವವರ ಕರಕಮಲಗಳಿಗೆ ನೀಡಿ ಶರಣೆಂದವರು ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು. ಪ್ರಕಾಶಕರ ನುಡಿಗಳಲ್ಲಿ ಕೃತಿ ಕುರಿತು ಡಾ. ಜತ್ತಿಯವರು ಹೇಳುವ-“ಜಗತ್ತಿನ ಶ್ರೇಷ್ಠ ಅನುಭಾವಿಗಳಲ್ಲೊಬ್ಬರಾದ ಅಲ್ಲಮಪ್ರಭುಗಳ ವಚನಗಳು ನೈಜ ನೆಲೆಯಲ್ಲಿ ಲಿಂಗನುಡಿಗಳೇ ಆಗಿವೆ. ಹೀಗಾಗಿ ಅಂಗಭಾವದಲ್ಲಿರುವ ಸಾಮಾನ್ಯರಿಗೆ ಅಲ್ಲಮಪ್ರಭುಗಳ ರಚನೆಗಳು ಬೆಡಗಿನ ರೂಪದಲ್ಲಿ, ಪಾರಿಭಾಷಿಕ ಸ್ವರೂಪದಲ್ಲಿ ಮತ್ತು ಅದಕ್ಕೂ ಮಿಗಿಲಾಗಿ ಅನುಭಾವವನ್ನು ವ್ಯಕ್ತಪಡಿಸುವ ಅವರ ಅಸಾಧಾರಣ ಶಕ್ತಿ ಅಭೇದ್ಯ ಎನ್ನುವಂತಿದ್ದರೂ ಸಹ ಶರಣರ ದರ್ಶನವನ್ನು ಸಂಪೂರ್ಣವಾಗಿ ಅರಿತು, ಅಲ್ಲಮರ ವಚನಗಳನ್ನು ನಿರ್ವಚನ ಮಾಡುವ ಕೈಂಕರ್ಯ ಅಸಾಧಾರಣ. ಇಂತಹ ಕೈಂಕರ್ಯವನ್ನು ಹಿರಿಯರಾದ ಕೇವಲ ೮೭ ವಯಸ್ಸಿನ ಡಾ. ಎನ್. ಜಿ. ಮಹಾದೇವಪ್ಪನವರು ವಚನಗಳನ್ನು ಅರ್ಥೈಸಿಕೊಂಡು, ವಚನಗಳಲ್ಲಿರುವ ಮೂಲದ್ರವ್ಯವನ್ನು ನಮ್ಮಂತಹ ಸಾಮಾನ್ಯ ಓದುಗರಿಗೆ ಉಣಬಡಿಸುವ ಪ್ರಯತ್ನ ಅನನ್ಯವಾದುದು” ಎಂಬ ಅವರ ನುಡಿಗಳು ಈ ಕೃತಿಯ ಮೌಲಿಕತೆಗೆ ಉಜ್ವಲ ನಿದರ್ಶನವನ್ನು ಒದಗಿಸುತ್ತವೆ.
ಡಾ. ಮಹಾದೇವಪ್ಪನವರು ಪ್ರಸ್ತುತ ಕೃತಿಯನ್ನು ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗವನ್ನು ಮುನ್ನಡೆಸುತ್ತಿರುವ ಗದುಗಿನ ತೋಂಟದಾರ್ಯಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರಿಗೆ ಅರ್ಪಿಸಿರುವುದು ಔಚಿತ್ಯಪೂರ್ಣವಾಗಿದೆ.
ಇಂದು ಶರಣ ಸಾಹಿತ್ಯವನ್ನು ವಾಸ್ತವ ನೆಲೆಯಲ್ಲಿ ಅರ್ಥೈಸುವ, ವ್ಯಾಖ್ಯಾನಿಸುವ ಶರಣ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ತಿಳಿಸಿ ಹೇಳುವ ವಿದ್ವಜ್ಜನರೇ ಇಲ್ಲ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ಡಾ. ಎನ್. ಜಿ. ಮಹಾದೇವಪ್ಪನವರು ಲಿಂಗಾಯತರ ಪಾಲಿಗೆ ಭುವನದ ಭಾಗ್ಯವಾಗಿ, ಕಣ್ಣ ಮುಂದಿನ ಬೆಳಕಾಗಿ, ಬೆನ್ನ ಹಿಂದಿನ ಶಕ್ತಿಯಾಗಿ ಬಂದಿದ್ದಾರೆ. ಡಾ. ಮಹಾದೇವಪ್ಪನವರು ಇನ್ನೂ ಇಂತಹ ಮೌಲಿಕ ಗ್ರಂಥಗಳನ್ನು ರಚಿಸುವಂತಾಗಲಿ, ತನ್ಮೂಲಕ ಲಿಂಗಾಯತ ಧರ್ಮ ಸಾಹಿತ್ಯ ಸಂಸ್ಕೃತಿಗಳ ಕುರಿತು ನೈಜವಾದ ಸಾಹಿತ್ಯ ಹೊರಬರುವಂತಾಗಲಿ, ಅವರಿಗೆ ಬಸವಾದಿ ಶಿವಶರಣರು ಆಯುರಾರೋಗ್ಯ ಸಕಲ ಸಂಪದಗಳನ್ನು ನೀಡಿ, ಇನ್ನಷ್ಟು ಶರಣ ಸಾಹಿತ್ಯ ಸೇವೆಗೆ ಆಶೀರ್ವದಿಸಲಿ ಎಂದು ಪ್ರೀತಿಪೂರ್ವಕ ಆಶಿಸುತ್ತೇನೆ.
ಪುಸ್ತಕದ ಹೆಸರು : ಅಲ್ಲಮನ ವಜ್ರಗಳು
ಲೇಖಕರು : ಡಾ. ಎನ್. ಜಿ. ಮಹಾದೇವಪ್ಪ
ಪ್ರಕಾಶಕರು : ಬಸವ ಸಮಿತಿ, ಬೆಂಗಳೂರು, ೨೦೨೪
ಬೆಲೆ : ರೂ. ೪೫೦