ಕೊಪ್ಪಳ:
ಹಾವೇರಿ ಜಿಲ್ಲೆಯ ನರಸೀಪುರ ಕ್ಷೇತ್ರದಲ್ಲಿ ೨೦೨೬ ರ ಜ.೧೪ ಹಾಗೂ ೧೫ ರಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಿಂದ ಅಂಬಿಗರ ೧೦ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ಮಹಾರಥೋತ್ಸವ ನಡೆಯಲಿದೆ ಎಂದು ನರಸೀಪುರ ಕ್ಷೇತ್ರದ ಪೂಜ್ಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಮುಂದಿನ ೨೦೨೬ ಜ. ೧೪ ಹಾಗೂ ೧೫ ರಂದು ಅಂಬಿಗರ ಚೌಡಯ್ಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಇದು ೧೪ನೇ ಶರಣ ಸಂಸ್ಕೃತಿ ಉತ್ಸವವಾಗಿದ್ದು, ಜ.೧೪ ರಂದು ಬೆಳಗ್ಗೆ ೬ ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, ಬೆಳಗ್ಗೆ ೮ ಗಂಟೆಗೆ ಚೌಡಯ್ಯನವರ ಐಕ್ಯ ಮಂಟಪ ಪೂಜೆ, ಬೆಳಗ್ಗೆ ೧೦ ಗಂಟೆಗೆ ಸಾಮೂಹಿಕ ರಕ್ತದಾನ ಶಿಬಿರ, ಬೆಳಗ್ಗೆ ೧೧ ಗಂಟೆಗೆ ಸಾಮೂಹಿಕ ಸರಳ ವಿವಾಹ, ಲಿಂ. ಶಾಂತಮುನಿ ಮಹಾಸ್ವಾಮಿಗಳ ೧೦ನೇ ಸ್ಮರಣೋತ್ಸವ, ಮಧ್ಯಾಹ್ನ ೧೨ಕ್ಕೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಚನ ಕಂಠಪಾಠ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ, ಸಂಜೆ ೭ಕ್ಕೆ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ, ರಾತ್ರಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜ. ೧೫ ರಂದು ಬೆಳಿಗ್ಗೆ ೮ ಗಂಟೆಗೆ ಧರ್ಮ ಧ್ವಜಾರೋಹಣ, ಬೆಳಿಗ್ಗೆ ೯.೩೦ ಗಂಟೆಗೆ ಧರ್ಮಸಭೆ, ಬೆಳಿಗ್ಗೆ ೧೦.೩೦ಕ್ಕೆ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ, ಬೆಳಿಗ್ಗೆ ೧೧ ಗಂಟೆಗೆ ಚೌಡಯ್ಯನವರ ೯೦೬ನೇ ಜಯಂತ್ಯುತ್ಸವ, ಮಧ್ಯಾಹ್ನ ೧೨ ಗಂಟೆಗೆ ೧೦ನೇ ಪೀಠಾರೋಹಣದ ದಶಮಾನೋತ್ಸವ ಹಾಗೂ ಸಂಜೆ ೫ ಗಂಟೆಗೆ ವಚನಗ್ರಂಥ ಮಹಾರಥೋತ್ಸವ ನಡೆಯಲಿದೆ ಎಂದರು.
ಈ ಎರಡೂ ದಿನದ ಕಾರ್ಯಕ್ರಮಕ್ಕೆ ಸಿಎಂ ಹಾಗೂ ಕೇಂದ್ರ ಸಚಿವರನ್ನು ಆಹ್ವಾನ ಮಾಡಲಿದ್ದೇವೆ. ನಾಡಿನಾದ್ಯಂತ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
‘ಅಂಬಿಗರ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜವಾಗಿದೆ. ಈ ಉತ್ಸವದಲ್ಲಿ ನಮ್ಮ ಬಹುದಿನಗಳ ಬೇಡಿಕೆಯಾದ ಎಸ್ಟಿ ಮೀಸಲಾತಿ ಒತ್ತಾಯ ಮಾಡಲಾಗುವುದು’ ಎಂದು ಸ್ವಾಮೀಜಿ ತಿಳಿಸಿದರು.
ಗೋಷ್ಠಿಯಲ್ಲಿ ಸಮಾಜದ ಬಸವರಾಜ ಸಪ್ಪನಗೋಳ, ಸೋಮಣ್ಣ ಬಾರಕೇರ, ಶರಣಪ್ಪ ಕಬ್ಬೇರ, ಮಂಜಣ್ಣ ಕುಡಗನಾಳ, ಫಕೀರಪ್ಪ ತುಂಬಿನಕಟ್ಟಿ, ಪರಶುರಾಮ ಮತ್ತಿತರರು ಉಪಸ್ಥಿತರಿದ್ದರು.
