“ಅಂತರಂಗದ ಪ್ರಯಾಣವು ಶಿವನನ್ನು ಅರಿಯುವ ಮೊದಲ ಹೆಜ್ಜೆ”

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಮಾನವನು ಶತಮಾನಗಳಿಂದಲೂ “ಶಿವ ಎಲ್ಲಿದ್ದಾನೆ?” ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ಬಂದಿದ್ದಾನೆ. ಆದರೆ ಒಂದು ಮೂಲಭೂತ ತಪ್ಪು ಅರ್ಥೈಸುವಿಕೆಯೇ ನಮ್ಮನ್ನು ಹೊರಗಿನ ಲೋಕದತ್ತ ದೂಡುತ್ತದೆ. ಅದೇ “ಶಿವ ಬೇರೆ, ನಾನು ಬೇರೆ”ಎಂಬ ಭಿನ್ನತೆಯ ಭಾವನೆ.

ಈ ಭಿನ್ನತೆಯೇ ದೇವರನ್ನು ಹಿಮಾಲಯದ ಶಿಖರಗಳಲ್ಲಿ, ಗುಡ್ಡಗಾಡು ಶಿಖರಗಳಲ್ಲಿ, ಮಂದಿರಗಳಲ್ಲಿ ಹುಡುಕುವ ಮನೋಭಾವಕ್ಕೆ ಕಾರಣವಾಗುತ್ತದೆ. ಅಲ್ಲದೇ ವಿಧವಿಧವಾದ ಬಾಹ್ಯ ಆಚರಣೆಗಳು, ಕ್ರಿಯೆಗಳು, ಪೂಜಾ ವಿಧಾನಗಳು ನಮ್ಮನ್ನು ತಾತ್ಕಾಲಿಕ ಭಕ್ತಿಭಾವಕ್ಕೆ ಕೊಂಡೊಯ್ಯಬಹುದಾದರೂ, ಶಿವನ ಸತ್ಯಸ್ವರೂಪವನ್ನು ಅನಾವರಣಗೊಳಿಸಲು ಸಾಧ್ಯವಿಲ್ಲ.

ನಿಜವಾದ ಶಿವನು ಯಾವುದೋ ಒಂದು ಸ್ಥಳದಲ್ಲಿ ಮಾತ್ರ ಬಂಧಿತನಾಗಿರುವ ದೇವಸ್ವರೂಪವಲ್ಲ; ಆತನು ಅಂತರಾಳದ ಚೈತನ್ಯ. ಶಿವನನ್ನು ಅರಿಯುವ ದಾರಿ ಹೊರಗೆ ಇಲ್ಲ; ಒಳಗೆ ಇದೆ. ಅಂತರಂಗದ ಪ್ರಯಾಣವು ಶಿವನನ್ನು ಅರಿಯುವ ಮೊದಲ ಹೆಜ್ಜೆ. “ನಾನು ಯಾರು?” ಎಂಬ ಜಿಜ್ಞಾಸೆಯು ಕೇವಲ ತಾತ್ವಿಕ ಪ್ರಶ್ನೆಯಲ್ಲ; ಅದು ಆತ್ಮಜಾಗೃತಿಯ ಅಗ್ನಿಕುಂಡ.

ಈ ಪ್ರಶ್ನೆಯಲ್ಲಿ ಆಳವಾಗಿ ಸವೆದಾಗ, ನಮ್ಮ ಗುರುತುಗಳು, ಪದವಿಗಳು, ಸಂಬಂಧಗಳು, ಹೆಮ್ಮೆ ಎಲ್ಲವೂ ಒಂದೊಂದಾಗಿ ಕರಗಿ ಹೋಗುತ್ತವೆ. ಒಂದು ಹಂತದಲ್ಲಿ “ನಾನು” ಎಂಬ ಭಾವನೆ ಕೂಡ ಮಾಯವಾಗುತ್ತದೆ. ಉಳಿಯುವುದು ಖಾಲಿತನ. ಆದರೆ ಅದು ಶೂನ್ಯವೆಂದು ಕಾಣಿಸಿಕೊಂಡರೂ, ಅದೇ ಅನಂತ. ಆ ಶೂನ್ಯತೆಯಲ್ಲೇ ಬ್ರಹ್ಮಾಂಡವನ್ನೇ ಆವರಿಸುವ ಚೈತನ್ಯವು ಸ್ಪಷ್ಟವಾಗುತ್ತದೆ. ಈ ಅನುಭಾವವೇ ಏಕತ್ವದ ಅರಿವಿನ ನಿಜವಾದ ಲಿಂಗತತ್ವ. ಅಷ್ಟೇ ಅಲ್ಲ, ಇದು ದ್ವೈತದ ಅಳಿವು ಸಹ ಹೌದು.

ಈ ಆತ್ಮಜ್ಞಾನ ದಾರಿಯಲ್ಲಿ ನಡೆದ ಮಹಾನ್ ದಾರ್ಶನಿಕರು ಅನೇಕರು. ಬಸವಾದಿ ಅಲ್ಲಮ ಅಕ್ಕಮಹಾದೇವಿ ಮುಂತಾದ ಶರಣ ಶರಣೆಯರು ಅಂತರ್ಮುಖಿಯಾಗಿ  ಆತ್ಮಶುದ್ಧಿ ಮಾಡಿಕೊಳ್ಳುವ ಮೂಲಕ ಅಂತರಂಗದ ಅನುಭಾವವನ್ನು ಅನುಭವಿಸಿ ಜಗತ್ತಿಗೆ ತಿಳಿಸಿದ ಮಹಾನ್ ದಾರ್ಶನಿಕರಾಗಿದ್ದಾರೆ.

ಇವರ ಸಾಧನೆಯು ಬಹಿರಂಗದಲ್ಲಿ ನಾವು ಮಾಡುವಂತಹ ಆಚರಣೆಗಳ ಮೂಲಕ ಆಗಿದ್ದಿಲ್ಲ ಬದಲಾಗಿ ಆತ್ಮಜಾಗೃತಿಯ ಆಳಕ್ಕೆ ಇಳಿಯುವುದರಿಂದಾಗಿತ್ತು. ಇವರಿಗೆ ಶಿವನು ಎಲ್ಲೋ ಇರುವ ಮನುಷ್ಯ ರೂಪದ ಮತ್ತು ಸಂಸಾರ ಹೊತ್ತ ದೂರದ ದೇವರಾಗಿದ್ದಿಲ್ಲ; ಒಳಗಿನ ಅನುಭಾವವಾಗಿತ್ತು.

ಶಿವನ ಸತ್ಯಸ್ವರೂಪವನ್ನು ಅರಿಯುವುದು ಕೇವಲ ನಂಬಿಕೆಯ ವಿಷಯವಲ್ಲ, ಅನುಭಾವದ ವಿಷಯ. ಅದು ನಡುಬಗ್ಗಿಸಿ ದೇವಸ್ಥಾನದ ಬಾಗಿಲು ದಾಟಿದಾಗ ದೊರೆಯುವುದಿಲ್ಲ; ಸೆಟೆದು ಮನಸ್ಸಿನ ಬಾಗಿಲು ತೆರೆದಾಗ ಉದಯಿಸುತ್ತದೆ. ಇದು ಬಹಳ ಕಷ್ಟದ ಮಾರ್ಗ, ಹೋಗುತ್ತಲೂ ಬರುತ್ತಲೂ ಕೊಯ್ಯುವುದು. ಅದು ಶಿವನ ಮೂರ್ತಿಯ ಮುಂದೆ ನಿಂತಾಗ ಕಾಣಿಸುವುದಿಲ್ಲ; ಅಹಂಕಾರವನ್ನು ಕರಗಿಸಿಕೊಂಡಾಗ ಪ್ರಕಾಶಿಸುತ್ತದೆ.

ನಾವು ಶಿವನನ್ನು ಹುಡುಕುವ ಪ್ರಯಾಣವನ್ನು ಹೊರಗಿನಿಂದ ಒಳಗೆ ತಿರುಗಿಸಿದ ಕ್ಷಣವೇ ಆತ್ಮಜ್ಞಾನದ ಅರಿವು ಪ್ರಾರಂಭ. “ಶಿವ ಬೇರೆ ಅಲ್ಲ, ನಾನು ಬೇರೆ ಅಲ್ಲ” ಎಂಬ ಅನುಭಾವದಲ್ಲಿ ಬದುಕಿದಾಗ ಜೀವನವೇ ಪೂಜೆಯಾಗುತ್ತದೆ; ಉಸಿರೇ ಜಪವಾಗುತ್ತದೆ; ಪ್ರತಿಯೊಂದು ಕ್ಷಣವೂ ಶಿವಮಯವಾಗುತ್ತದೆ.

ಅಂಥ ಮಹತ್ ಸ್ಥಿತಿವಂತರಾದ ದಾರ್ಶನಿಕ ಶರಣ ಶರಣೆಯರ ಪಾದಾರವಿಂದಗಳಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.