“ಲಿಂಗಾಯತ ಯುವಕರಲ್ಲಿ ಶರಣ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಒತ್ತು ಕೊಟ್ಟು ಮಾಡುತ್ತೇವೆ.”
ಚಾಮರಾಜನಗರ
ಹೊಸದಾಗಿ ರೂಪುಗೊಂಡಿರುವ ಸಂಘಟನೆ, ‘ಅನುಭವ ಮಂಟಪ – ಕರ್ನಾಟಕ’, ತನ್ನ ಮೊದಲ ಸಭೆಯನ್ನು ಚಾಮರಾಜನಗರದಲ್ಲಿ ಗುರುವಾರ ನಡೆಸಿತು. ಆಹ್ವಾನಿತರಿಗೆ ಮಾತ್ರ ಸೀಮಿತವಾಗಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಲಿಂಗಾಯತ ಮತ್ತು ವೀರಶೈವ ಸಂಘಟನೆಗಳ 100ಕ್ಕೂ ಹೆಚ್ಚು ಮಂದಿ ಪಕ್ಷಾತೀತವಾಗಿ ಭಾಗವಹಿಸಿದ್ದರೆಂದು ತಿಳಿದುಬಂದಿದೆ.
ಇದರಿಂದ ರಾಜ್ಯಮಟ್ಟದಲ್ಲಿ ಬಸವ ತತ್ವಕ್ಕೆ ದುಡಿಯುತ್ತಿರುವ ಲಿಂಗಾಯತ ಸಂಘಟನೆಗಳ ಪಟ್ಟಿಗೆ ಮತ್ತೊಂದು ಹೆಸರು ಸೇರಿಕೊಂಡಂತಾಗಿದೆ.

ಇಂಜಿನಿಯರಿಂಗ್ ಪದವೀಧರ ಸಿದ್ದೇಶ್ ಸಾಲಿಮಠ್ ಕರೆದಿದ್ದ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲರ ಪುತ್ರ ಹಾಗೂ ಬಿ.ಎಲ್.ಡಿ.ಸಂಸ್ಥೆಯ ನಿರ್ದೇಶಕ ಬಸನಗೌಡ ಬಿ ಪಾಟೀಲ, ಬೆಂಗಳೂರು ಮಾಜಿ ಮೇಯರ್ ಪುಟ್ಟರಾಜು, ಮಾಜಿ ಮೇಯರ್ ಗಂಗಾಬಿಕೆ ಪತಿ ಉದ್ಯಮಿ ಮಲ್ಲಿಕಾರ್ಜುನ್, ವೀರಶೈವ ಲಿಂಗಾಯತ ಮುಖಂಡ ಸೋಮಯ್ಯ ಗಣಚಾರಿ, ನಂಜನಗೂಡಿನ ಬಸವ ಮಾಸ ಸಮಿತಿಯ ಅಧ್ಯಕ್ಷ ಆಯರಳ್ಳಿಯ ಪ್ರಭುಸ್ವಾಮಣ್ಣ ಭಾಗವಹಿಸಿದ್ದರು.
ಸಭೆಯಲ್ಲಿ ಸಮುದಾಯದ ಮುಂದಿರುವ ಸವಾಲುಗಳು, ಯುವಕರಲ್ಲಿನ ಅರಿವಿನ ಕೊರತೆ, ನೂತನ ಸಂಘಟನೆಯ ದ್ಯೇಯೋಧ್ದೆಶ, ಒಳಪಂಗಡಗಳ ಒಗ್ಗಟ್ಟು, ಬಸವ ತತ್ವದ ಪ್ರತಿಪಾದನೆ, ಪಕ್ಷಾತೀತ ಧೋರಣೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತೆಂದು ತಿಳಿದುಬಂದಿದೆ.

ಕಾರ್ಯಕ್ರಮ ನಿರ್ವಹಿಸಿದ ಚೆನ್ನವಡೆನಪುರದ ಚನ್ನಪ್ಪ ಅವರು ಲಿಂಗಾಯತ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು. ಬಸವಾದಿ ಪ್ರಮಥರ ಮತ್ತು ಫ ಗು ಹಳಕಟ್ಟಿ, ಶಿರಸಂಗಿ ಲಿಂಗರಾಜ ದೇಸಾಯಿರಂತಹ ಹಿರಿಯರ ಆದರ್ಶದಲ್ಲಿ ಯುವಕರು ನಡೆಯಬೇಕು ಎಂದು ಬಸವನಗೌಡ ಪಾಟೀಲರು ಕರೆ ಕೊಟ್ಟರು. ಸಮುದಾಯದ ಅಭಿವೃದ್ಧಿಗೆ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ಕೂಡ ನೀಡಿದರು.

ಬಸವ ಮೀಡಿಯಾದ ಜೊತೆ ಮಾತನಾಡಿದ ಸಿದ್ದೇಶ್ ಸಾಲಿಮಠ್ ಅವರು ಬಸವ ತತ್ವದ ಸಮಾನತೆ ಮತ್ತು ಕಾಯಕ ಆಧಾರಿತ ಸಮಾಜದ ನಿರ್ಮಾಣ ‘ಅನುಭವ ಮಂಟಪ ಕರ್ನಾಟಕ’ದ ಮುಖ್ಯ ಉದ್ದೇಶ ಎಂದು ಹೇಳಿದರು. ಲಿಂಗಾಯತ ಸಮಾಜ ಮುಖ್ಯವಾಗಿ ಯುವಕರು ಎದುರಿಸುತ್ತಿರುವ ಶಿಕ್ಶಣ, ಉದ್ಯೋಗ ಮುಂತಾದ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಬೇರೆ ಬೇರೆ ಪ್ರಭಾವಗಳಿಗೆ ಸಿಲುಕಿರುವ ಲಿಂಗಾಯತ ಯುವಕರಲ್ಲಿ ಶರಣ ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಒತ್ತು ಕೊಟ್ಟು ಮಾಡುತ್ತೇವೆ, ಎಂದು ಹೇಳಿದರು.

ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಾಲೂಕು ಮಟ್ಟದ ಸಂಘಟನೆ ಅಸ್ತಿತ್ವಕ್ಕೆ ಬರಲಿದೆ. ಹಾಸನ, ಅರಸೀಕೆರೆಗಳಲ್ಲಿಯೂ ಸದ್ಯದಲ್ಲೇ ಇಂತಹ ಸಭೆಗಳು ನಡೆಯಲಿವೆ ಎಂದು ಹೇಳಿದರು. ಚಾಮರಾಜನಗರದಿಂದ ಬೀದರ್ ವರೆಗೆ ಕೆಲಸ ಮಾಡುವ ಆಶಯ ಹೊಂದಿದ್ದರೂ ದಕ್ಷಿಣ ಕರ್ನಾಟಕದ ಮೇಲೆ ಮೊದಲು ಗಮನ ಕೊಡುವುದಾಗಿ ಹೇಳಿದರು.
ಮೂಲತಃ ಕಲಬುರಗಿಯವರಾದರು ಸಾಲಿಮಠ್ ಎಂಜಿನಿಯರಿಂಗ್ ಪದವಿ ಪಡೆದದ್ದು ಮೈಸೂರಿನ NIE ಸಂಸ್ಥೆಯಲ್ಲಿ (2022 ಬ್ಯಾಚ್). ಅದಕ್ಕೆ ದಕ್ಷಿಣ ಜಿಲ್ಲೆಗಳಲ್ಲಿರುವ ಸಮುದಾಯದ ಸ್ಥಿತಿಗತಿಯ ಬಗ್ಗೆ ಅರಿವಿದ್ದು, ಈ ಭಾಗದಲ್ಲಿ ‘ಅನುಭವ ಮಂಟಪ ಕರ್ನಾಟಕ’ದಂತಹ ಸಂಘಟನೆಯ ಅಗತ್ಯವಿರುವುದರಿಂದ ಇಲ್ಲಿಂದಲೇ ಕೆಲಸ ಶುರುಮಾಡಿರುವುದಾಗಿ ಹೇಳಿದರು.
ವಿವಿಧ ಮಟ್ಟದಲ್ಲಿ ಸಂಘಟನೆ ಅಸ್ತಿತ್ವಕ್ಕೆ ಬಂದ ಮೇಲೆ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಬಗೆಹರಿಸಲು ಸೂಕ್ತ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಸಭೆಯಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ಬಸವ ತತ್ವದ ಹೋರಾಟಗಾರರೊಬ್ಬರು ಮೈಸೂರು, ಚಾಮರಾಜ ನಗರ ಜಿಲ್ಲೆಗಳಲ್ಲಿ ಕಳೆದ 15 ವರ್ಷಗಳಲ್ಲಿ ಬಸವ ಚಿಂತನೆ, ಸಂಘಟನೆಗಳು ಬೆಳೆದಿದ್ದರೂ ಸಮುದಾಯದಲ್ಲಿ ಬಹಳ ಗೊಂದಲಗಳಿವೆ.
ಕಳೆದ ನೂರು ವರ್ಷಗಳಿಂದ ಯಾವ ಮಠವೂ ಇಲ್ಲಿ ಬಸವ ತತ್ವವನ್ನು ಗಂಭೀರವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿಲ್ಲ. ನಮ್ಮ ಹಳ್ಳಿಗಳಲ್ಲಿ ಇನ್ನೂ ಜನರಿಗೆ ಎರಡಕ್ಕಿಂತ ಹೆಚ್ಚಿನ ವಚನಗಳು ಬಾಯಲ್ಲಿಲ್ಲ. ಬಸವಣ್ಣ, ಮಹದೇಶ್ವರ, ಗುರು ಮಲ್ಲೇಶ್ವರ ಮುಂತಾದ ಶರಣರ ಬಗ್ಗೆಯಾಗಲಿ ಸ್ಥಳೀಯ ಶರಣ ಕ್ಷೇತ್ರಗಳ ಮತ್ತು ಪರಂಪರೆಯ ಬಗ್ಗೆಯಾಗಲಿ ಸ್ಪಷ್ಟ ಕಲ್ಪನೆಯಿಲ್ಲ.
ಈ ಸೈದ್ಧಾಂತಿಕ ಕೊರತೆಯಿಂದ ಇಲ್ಲಿ ಲಿಂಗಾಯತರಲ್ಲಿ ಒಗ್ಗಟ್ಟಾಗಲಿ, ಬಲಿಷ್ಠವಾದ ನಾಯಕತ್ವವಾಗಲಿ ಬಂದಿಲ್ಲ. ‘ಅನುಭವ ಮಂಟಪ ಕರ್ನಾಟಕ’ದಂತಹ ಒಂದು ಪ್ರಭಾವಿ ಸಂಘಟನೆ ಇಲ್ಲಿ ಸರಿಯಾದ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಈ ಕೊರತೆ ನೀಗಬಹುದು, ಎಂದರು.

ಎಲ್ಲಾ ಜಿಲ್ಲೆಗಳಲ್ಲಿ ಲಿಂಗಾಯತರು ಎಚ್ಛೆತ್ತುಕೊಂಡರೆ ರಾಜ್ಯಮಟ್ಟದಲ್ಲಿಯೂ ಸಮುದಾಯದ ಧ್ವನಿ ಗಟ್ಟಿಯಾಗುತ್ತದೆ. ಸಿದ್ದಗಂಗಾ ಶ್ರೀಗಳ ಪ್ರತಿಮೆ ವಿರೂಪಗೊಂಡರೂ ಎಲ್ಲೂ ಪ್ರತಿಭಟನೆ ನಡೆಯಲಿಲ್ಲ. ಬೆಂಗಳೂರು ಮೆಟ್ರೋಗೆ ಬಸವಣ್ಣನವರ ಹೆಸರು ಇಡಬೇಕೆಂದು ಎಂ ಬಿ ಪಾಟೀಲರು ಧ್ವನಿ ಎತ್ತಿದ ಸಂದರ್ಭದಲ್ಲಿಯೂ ಸಮುದಾಯ ಸರಿಯಾಗಿ ಬೆಂಬಲಿಸಲಿಲ್ಲ. ‘ಅನುಭವ ಮಂಟಪ ಕರ್ನಾಟಕ’ಗಳಂತಹ ಸಂಘಟನೆಗಳಿಂದ ಈ ರೀತಿ ಜಾಗೃತಿ ಮೂಡಿಸಲು ಸಾಧ್ಯ ಎಂದರು.
ಶಕ್ತಿಯುತ ಲಿಂಗಾಯತ ಯುವಸಂಘಟನೆ ಹಳೆಯ ಮೈಸೂರು ಪ್ರಾತ್ಯಕ್ಕೆ ಬಹಳ ಅವಶ್ಯಕತೆ ಇದ್ದು ಈ ಸಂಘಟನೆ ಧಾರ್ಮಿಕ ಸಂಘಟನೆ ಯಾಗಿ ನೂರಕ್ಕೆ ನೂರು ಬಸವಪರ ಸಂಘಟನೆಯಾಗಿ ಕಾರ್ಯ ನಿರ್ವಹಿಸುವ ಹಾಗಿದ್ದರೆ ಮೈಸೂರಿನ ಎಲ್ಲ ಬಸವಪರ ಲಿಂಗಾಯತ ಸಂಘನೆಗಳು ಸಂಪೂರ್ಣ ಸಹಕಾರ ನೀಡಲಿದೆ
ಉತ್ತಮ ಧ್ಯೇಯೋದ್ದೇಶಗಳನ್ನು ಹೊಂದಿರುವ ಈ ಸಂಘಟನೆಗೆ ಶುಭ ಕೋರುತ್ತೇನೆ ಮತ್ತು ಸಂಘಟಕರಿಗೆ ನನ್ನ ಅಭಿನಂದನೆಗಳು.
ಬಸವಾದಿ ಶರಣರ ಚಳುವಳಿಯ ಸ್ವರೂಪ ಮತ್ತು ತೀವ್ರತೆಯನ್ನು ಮರೆಯದಿರೋಣ. ಧರ್ಮ ಇಂದು ಜಾತಿಯಾಕಾಗಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ವಿಭೂತಿಯನ್ನು ನುಂಗಿದ ಕುಂಕುಮಕ್ಕೆ ಉತ್ತರಕೊಟ್ಟು ರಾಮಧ್ವಜ ಯಾರ ಕೈಯಲ್ಲಿ ಇದೆಯೋ ಅವರ ಕೈಯ್ಯಲ್ಲಿ ಬಸವಧ್ವಜವನ್ನು ಕೊಟ್ಟು ಯಾವ ಕಾಯಕವನ್ನು ಜಾತಿಯಾಗಲು ಬಸವಣ್ಣ ಬಿಟ್ಟಿಲ್ಲ,, ನಾವೂ ಬಿಡುವದಿಲ್ಲ ಎಂದು ಹೇಳಿ ಬಿಟ್ಟು ಹೋದವರನ್ನ ಕರೆದುಕೊಂಡು ಬರೋಣ