ಬೆಳಗಾವಿ
ಶಾಲಾ ಪ್ರವಾಸಕ್ಕೆಂದು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿನೀಡಿದ ಮಕ್ಕಳಿಗೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ಜಾತಿ ಭೇದವಿಲ್ಲದೆ, ಲಿಂಗ ಭೇದವಿಲ್ಲದೆ, ಯಾವುದೇ ಮೇಲು ಕೀಳು ಕಲ್ಪನೆಯಿಲ್ಲದೆ ಅನುಭವ ಮಂಟಪ ಎಲ್ಲರಿಗೂ ಸಮಾನ, ಮುಕ್ತ ವೇದಿಕೆ ಆಗಿತ್ತು ಎಂದು ಹೇಳಿದರು.
ಅಂದು ಶರಣರು ಸಾರಿದ ಸಮಾನತೆ, ಜಾತ್ಯತೀತತೆ, ಸಹಬಾಳ್ವೆ, ವ್ಯಕ್ತಿ ಸ್ವಾತಂತ್ರ್ಯ ಘನತೆಯ ಬದುಕಿನ ಹಕ್ಕುಗಳು ಇಂದು ನಮ್ಮ ಸಂವಿಧಾನದ ಆಶಯಗಳಾಗಿವೆ. ಇವು ಪ್ರತಿಯೊಬ್ಬರ ಆಶಯಗಳಾಗಬೇಕು, ಎಂದು ಹೇಳಿದರು.
ವಿಶ್ವಮಾನವರಾಗಿ ಹುಟ್ಟುವ ಮಕ್ಕಳು ಜಾತಿ, ಧರ್ಮ, ವರ್ಣ, ಕಂದಾಚಾರ ಮುಂತಾದ ಸಂಕುಚಿತ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ಅಲ್ಪಮಾನವರಾಗುತ್ತಿದ್ದಾರೆ, ಎಂದು ವಿಷಾದ ವ್ಯಕ್ತ ಪಡಿಸಿದರು.
ಮಹಾಪುರುಷರ ಜೀವನಾದರ್ಶಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿಸುವ ಮೂಲಕ ಅವರನ್ನು ಈ ಜಾತಿ, ಧರ್ಮ, ಮೂಢನಂಬಿಕೆಗಳ ಅಲ್ಪತನದಿಂದ ಮುಕ್ತಗೊಳಿಸಿ ವಿಶ್ವಮಾನವರನ್ನಾಗಿಸೋಣ, ಎಂದು ಸಿದ್ದರಾಮಯ್ಯ ಹೇಳಿದರು.