ಜಾತಿ ವ್ಯವಸ್ಥೆಯ ಸಂಕುಚಿತ ಪರಿಧಿಯನ್ನು ಮೀರಿದ ಬಸವಣ್ಣನವರು ಎಲ್ಲ ಕಾಲಕ್ಕೂ ಪ್ರಸ್ತುತ
ಮೈಸೂರು
ಹನ್ನೆರಡನೇ ಶತಮಾನದಲ್ಲಿ ಪುರೋಹಿತಶಾಹಿಗಳಿಂದ ಬಸವಣ್ಣನವರು ಎದುರಿಸಿದ ಸಂಕಷ್ಟಗಳು ವರ್ತಮಾನದಲ್ಲೂ ಜೀವಂತವಾಗಿವೆ. ಜಾತಿ ವ್ಯವಸ್ಥೆ ಕುರಿತು ಯೋಚಿಸಿ ಮಾತನಾಡಬೇಕಾದ ಪರಿಸ್ಥಿತಿ ಇದೆ. ಮರ್ಯಾದೆ ಹೆಸರಿನಲ್ಲಿ ಹತ್ಯೆಗಳು ನಡೆಯುತ್ತಿವೆ. ಹನ್ನೆರಡನೆಯ ಶತಮಾನಕ್ಕೂ, ವರ್ತಮಾನಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ, ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಅರವಿಂದ ಮಾಲಗತ್ತಿ ಕಳವಳ ವ್ಯಕ್ತಪಡಿಸಿದರು.
ನಗರದ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ, ಐಕ್ಯೂಎಸಿ, ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕ ಇವುಗಳ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ‘ವಚನ ಸಾಹಿತ್ಯ ಮತ್ತು ವರ್ತಮಾನದ ಸ್ಪಂದನೆ’ ವಿಷಯ ಕುರಿತು ಮಂಗಳವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಮುಖ್ಯವಾಹಿನಿಗೆ ಬರಬೇಕು ಎಂದು ಭಾಷಣ ಮಾಡುವುದು ಮಾತಿನ ಮತ್ತು ಬೌದ್ಧಿಕತೆಯ ಜಪವಾಗಿದೆ. ಆದರೆ ಬಸವಣ್ಣನವರು ಸಾಮಾಜಿಕವಾಗಿ ಹಿಂದುಳಿದವರು ಮೇಲೆ ಬರಬೇಕು ಎಂದು ಜಪಮಾಡುತ್ತ ಕೂರಲಿಲ್ಲ. ಬದಲಿಗೆ ಸ್ವತಃ ತಾವೇ ನೊಂದ ಸಮುದಾಯಗಳ ಹತ್ತಿರ ಹೋಗಿ ಕೈ ಹಿಡಿದು ಸಮಾನತೆಯ ಮಾರ್ಗದಲ್ಲಿ ಮುನ್ನಡೆಸಿದರು. ಬಸವಣ್ಣ ರಾಜಪ್ರಭುತ್ವದ ಕಾಲದಲ್ಲಿಯೂ ಯಾರ ಮುಲಾಜಿಗೂ ಒಳಗಾಗದೆ ಜಾತಿ ಪದ್ಧತಿಯನ್ನು ನಿರಾಕರಿಸಿದರು. ಕಾಯಕ ಸಿದ್ಧಾಂತದ ಮೂಲಕ ಅರ್ಥವ್ಯವಸ್ಥೆಯನ್ನು ರೂಪಿಸಬೇಕು ಎಂದು ಪ್ರತಿಪಾದಿಸಿದರು ಎಂದರು.
ಪ್ರತಿಯೊಬ್ಬರೂ ನೈತಿಕ ಮಾರ್ಗದಲ್ಲಿ ಗಳಿಸಿದ ಸಂಪಾದನೆಯಲ್ಲಿ ಬದುಕಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಬಸವಣ್ಣನವರ ಆಶಯಗಳ ಹಿನ್ನೆಲೆಯಲ್ಲಿ ಇವತ್ತಿನ ರಾಜಕಾರಣಿಗಳು ಮತ್ತು ರಾಜಕೀಯ ಸಂದರ್ಭವನ್ನು ಅವಲೋಕಿಸಿದಾಗ ತೀವ್ರ ನಿರಾಶೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣನವರು ಬ್ರಾಹ್ಮಣ್ಯದ ಸಂಕೋಲೆಯನ್ನು ಕಡಿದುಕೊಂಡು ತಮ್ಮನ್ನು ‘ಮಾದಾರ ಚೆನ್ನಯ್ಯನ ಮನೆಯ ಮಗ’ ಎಂದು ಘೋಷಿಸಿಕೊಳ್ಳುತ್ತಾರೆ. ಹೀಗೆ ಜಾತಿ ವ್ಯವಸ್ಥೆಯ ಸಂಕುಚಿತ ಪರಿಧಿಯನ್ನು ಮೀರಿದ ಕಾರಣದಿಂದ ಬಸವಣ್ಣ ಎಲ್ಲ ಕಾಲಕ್ಕೂ ಪ್ರಸ್ತುತರಾಗುತ್ತಾರೆ ಎಂದು ಬಣ್ಣಿಸಿದರು.
ಆಳುವ ಸರ್ಕಾರಗಳಿಗೆ ಶರಣರ ಆಶಯಗಳು ಆದರ್ಶವಾಗಬೇಕು. ಪ್ರಜಾಪ್ರಭುತ್ವದ ಮಾದರಿಯಲ್ಲಿ ರಚನೆಗೊಂಡ ಸರ್ಕಾರಗಳು ಜಾತಿ ವ್ಯವಸ್ಥೆ, ಮೂಢನಂಬಿಕೆ, ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಕೆಲಸವನ್ನು ಮಾಡಬೇಕು. ಜನರನ್ನು ಮತ್ತೆ ಕತ್ತಲೆಯೆಡೆಗೆ ನೂಕಬಾರದು ಎಂದು ಎಚ್ಚರಿಸಿದರು.

ಕರಾಮುವಿಯ ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕರಾದ ಡಾ.ಕವಿತಾ ರೈ ಅವರು ‘ವಚನ ವಾಙ್ಮಯದಲ್ಲಿ ವೈಚಾರಿಕತೆ’ ವಿಷಯದ ಕುರಿತು ಮಾತನಾಡಿದರು. ಲೋಕಸಭಾ ಸಚಿವಾಲಯದ ಜಂಟಿ ನಿರ್ದೇಶಕ ಪಿ.ಎನ್. ಚಂದ್ರಶೇಖರ್ ‘ವಚನ ಸಾಹಿತ್ಯ- ಕಾಯಕ ಮತ್ತು ದಾಸೋಹ’ ವಿಷಯ ಕುರಿತು ಮಾತನಾಡಿದರು.
ಮೈಸೂರು ವಿವಿಯ ಗಣಕವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಎಸ್. ಗುರು, ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಕೆ.ಎಸ್. ಸುಕೃತ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್. ಭಾರತಿ ಉಪಸ್ಥಿತರಿದ್ದರು.