ಶಹಾಪುರ :
ಶರಣರ ವಚನಗಳನ್ನು ಕೇಳುವುದರಿಂದ ಬದುಕು ಬದಲಾಗುವುದಿಲ್ಲ. ನಾವು ಅರಿತ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಬದುಕು ಬದಲಾಗುತ್ತದೆ ಎಂದು ಅನುಭಾವಿ ಪ್ರಮೋದ ಶಾಬಾದಿ ಅಭಿಪ್ರಾಯಪಟ್ಟರು.
ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಿಂಗಳ ಬಸವ ಬೆಳಕು 130 ರ ಕಾರ್ಯಕ್ರಮದಲ್ಲಿ ‘ವೈಜ್ಞಾನಿಕ ಮನೋಭಾವದ ಶರಣರು’ ಎಂಬ ವಿಷಯ ಕುರಿತು ಮಾತನಾಡುತ್ತಿದ್ದರು.
ನಮ್ಮ ಕುಟುಂಬ ಹಾಗೂ ಸಮಾಜ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತದೆ. ಆದರೆ ಅವುಗಳನ್ನು ಅವರು ಅನುಸರಿಸಲಾರರು. ಅರಿತುಕೊಂಡ ಸತ್ಯವನ್ನು ಬದುಕಿದಾಗ ಅದು ಎಲ್ಲರಿಗೂ ಮಾರ್ಗದರ್ಶಿಯಾಗುತ್ತದೆ. ಶರಣರು ನಮಗೆ ಈಗಲೂ ಪ್ರಸ್ತುತವಾಗಿರುವುದಕ್ಕೆ ಕಾರಣವೆ ಅವರ ಬದುಕು ಮತ್ತು ಬೋಧನೆ ಎರಡೂ ಜೊತೆಗೂಡಿಯೇ ಇದ್ದವು ಎಂಬುದು.
ಮಂತ್ರ ತಂತ್ರಗಳೆಲ್ಲ ಮೌಡ್ಯಗಳು, ನಂಬಿಕೆಯ ಹೆಸರಿನಲ್ಲಿ ಜನರನ್ನು ಭಯಗೊಳಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವ ಬಯಕೆ ಹೊಂದಿರುತ್ತದೆ. ವಿಚಾರಗಳನ್ನು ಮಾಡುವ, ಪ್ರಶ್ನಿಸುವ ಮನಸ್ಥಿತಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು.
ವೈಜ್ಞಾನಿಕ ಉಪಕರಣಗಳನ್ನು ಕ್ಷಣ ಕ್ಷಣವು ಬಳಸುವ ನಾವುಗಳು ಮೌಡ್ಯಗಳಲ್ಲಿ ಸಿಕ್ಕಿ ಬಿದ್ದಿದ್ದೇವೆ. ಮೌಡ್ಯಕ್ಕೆ ದುಡ್ಡು ಮತ್ತು ಸಮಯ ವ್ಯರ್ಥವಾಗುತ್ತಿವೆ. ಲಿಂಬೆ, ಕ್ಯಾರು, ಮೆಣಸಿನಕಾಯಿ, ಕರಿಬಟ್ಟೆಗಳು ನಮ್ಮನ್ನು ಆಳುತ್ತಿವೆ. ಇವುಗಳಿಂದ ನಾವು ಹೊರ ಬಂದು ಶರಣರ ವಿಚಾರ ಧಾರೆಯನ್ನು ಅರಿತು ಬದುಕಬೇಕು ಎಂದವರು ನುಡಿದರು.

ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡುತ್ತ, ರಾಜಕಾರಣಿ ಮತ್ತು ಧಾರ್ಮಿಕ ನಾಯಕರು ಒಂದು ನಾಣ್ಯದ ಎರಡು ಮುಖವಿದ್ದಂತೆ. ಇವರೀರ್ವರ ಕೌಲುಕೂಟವನ್ನು ಇಂದಿನ ಯುವಕರು ಭೇದಿಸಬೇಕಾಗಿದೆ.
ರಾಜಕಾರಣಿ ಒಂದು ಚುನಾವಣೆಯನ್ನು ಗೆಲ್ಲುತ್ತಲೆ ಇನ್ನೊಂದು ಚುನಾವಣೆಗೆ ಹೋದಾಗ ಆತನ ಆಸ್ತಿ ನೂರು ಪಟ್ಟು ಹೆಚ್ಚಾಗುತ್ತದೆ. ರಾಜಕಾರಣವೆಂದರೆ ಅದೊಂದು ಹಣ ಕಮಾಯಿಸುವ ವ್ಯವಹಾರವೋ ಅಥವಾ ಸಮಾಜ ಸೇವೆಯೊ ಎಂದು ಖಾರವಾಗಿ ಕೇಳಿದರು.
ಭ್ರಷ್ಟ ರಾಜಕಾರಣಿಗಳ ಪ್ರಲೋಭನೆಗೆ ಒಳಗಾಗಿರುವ ಮತದಾರ ಸಹ ತಾತ್ಕಾಲಿಕ ಆಮಿಷಕ್ಕೆ ಒಳಗಾಗಿ ದೇಶವನ್ನು ಕಡೆಗಣಿಸಿದ್ದಾನೆ. ಈಗ ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ, ಮೌಡ್ಯ, ಭ್ರಷ್ಟಾಚಾರ ಇತ್ಯಾದಿಗಳಿಗೆ ಬಗ್ಗಡಗೊಂಡ ರಾಜಕೀಯವೆ ಕಾರಣವಾಗಿದೆ. ವಾಸ್ತವವನ್ನು ಮರೆಮಾಚಿ ದೇಶದ ಭವಿಷ್ಯವನ್ನು ರಾಜಕಾರಣಿಗಳು ಹದಗೆಡಿಸುತ್ತಿದ್ದಾರೆ. ಇದರ ಅರಿವಿಲ್ಲದ ಯುವಕರು ಬಾರ್ ಪಬ್ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿರುವುದು ವಿಷಾದದ ಸಂಗತಿ. ಶರಣರ ವಚನಗಳ ಓದು ನಮ್ಮನ್ನು ಪ್ರಜ್ಞಾವಂತ ನಾಗರಿಕನನ್ನಾಗಿ, ನಿಜವಾದ ದೇಶ ಪ್ರೇಮಿಯಾಗಿ ರೂಪಿಸುತ್ತದೆ ಎಂದವರು ತಿಳಿಸಿದರು.
ಯಾವುದೆ ಸಾಹಿತಿ, ಲೇಖಕ, ಪತ್ರಕರ್ತರಾದವರು ಸಾಮಾಜಿಕ ಚಿಂತನೆ ಉಳ್ಳವರಾಗಿರಬೇಕು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಮಾಜಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡರು, ರಾಜ ವೈಭೋಗದಲ್ಲಿದ್ದರೂ ಸಹ ಬಸವಣ್ಣನವರು ಸಮ ಸಮಾಜ ಕಟ್ಟಬೇಕೆಂದು ತಹತಹಿಸಿದರು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಸಿದ್ಧರಾಮ ಹೊನ್ಕಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಕಿರಾಣಾ ಅಸೋಷಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಆನೇಗುಂದಿ ಅವರನ್ನು ಸತ್ಕರಿಸಲಾಯಿತು. ಜಿಲ್ಲಾ ಲಿಂಗಾಯತ ನೌಕರರ ಸಂಘ ಪ್ರಕಟಿಸಿರುವ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ವೇದಿಕೆಯ ಮೇಲೆ ಸಂಗನಬಸವ ಶಾಬಾದಿ, ಸಿದ್ಧಲಿಂಗಪ್ಪ ಆನೇಗುಂದಿ ಇದ್ದರು. ಅಕ್ಕಮಹಾದೇವಿ ಶಾಬಾದಿ ವಚನ ಪ್ರಾರ್ಥನೆ ಮಾಡಿದರು. ಚೇತನ ಪಾಟೀಲ ಮಳಗ ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಶಿವಕುಮಾರ ಕರದಳ್ಳಿ, ದೇವಿಂದ್ರಪ್ಪ ವಿಶ್ವಕರ್ಮ, ಶಿವು ಆವಂಟಿ, ಷಣ್ಮುಖ ಅಣಬಿ, ಗಂಗಮ್ಮ ತುಂಬಗಿ, ಕಾವೇರಿ ಲಾಳಸೇರಿ, ಶರಣಬಸವ ಹೆಸರೂರು, ಸಂಗಣ್ಣಗೌಡ ವಡಿಗೇರಿ, ಡಾ.ಗುರು ಹರನೂರ, ಶರಣಮ್ಮ ಪಾಟೀಲ, ಸುವರ್ಣ ಸಗರ, ಸೂಗಮ್ಮ ಹಿರೇಮಠ, ಚಂದ್ರಶೇಖರ ಮಸ್ಕಿ, ಡಾ. ಬಸವರಾಜ ಇಜೇರಿ, ಕಮಲಮ್ಮ ಸತ್ಯಂಪೇಟೆ, ಬಸವರಾಜ ಹುಣಸಗಿ, ಜ್ಯೋತಿ, ಗೀತಾ ವಾಗಾ, ಇತರರು ಭಾಗವಹಿಸಿದ್ದರು. ಕೊನೆಯದಾಗಿ ಅಮೋಘ ಸತ್ಯಂಪೇಟೆ ಶರಣು ಸಮರ್ಪಿಸಿದರು.
