ಅಂತರ್ಮುಖಿಯಾಗಿ ದೇವನ ಸ್ವರೂಪ ಕಾಣಬೇಕು
ಗುಳೇದಗುಡ್ಡ:
ಈಶ್ವರ ಶಿವರಾತ್ರಿ ಅವರ ಮನೆಯಲ್ಲಿ ಶನಿವಾರ ಬಸವಕೇಂದ್ರದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ನಡೆಯಿತು.
ಬಸವ ತಂದೆಗಳ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು.
ಮರದ ಹೂವ ಕೊಯಿದು ಮರಕ್ಕೇರಿಸಿ
ನದಿಯುದಕವ ನದಿಗರ್ಪಿತವ ಮಾಡಿ
ಕರುವನಗಲಿಸಿ ತಾಯ ಮರುಗಿಸಿ
ಮೊಲೆವಾಲ ಕರೆದುಣಬೇಡವೋ!
ಕೂಡಲಸಂಗಮದೇವ ಮಾಡಿದ ಮಾಯೆ
ಹಲಬರಬಾಯ ಟೊಣದೇ ಹೋಯಿತ್ತು.
ಪ್ರೊ. ಶ್ರೀಕಾಂತ ಗಡೇದ ಅವರು ಈ ವಚನವನ್ನು ನಿರ್ವಚನ ಮಾಡುತ್ತ–ಬಾಹ್ಯಾಡಂಬರದ ಪೂಜೆಯನ್ನು ಗೇಲಿ ಮಾಡುತ್ತ ಹೇಳಿದ ವಚನವಿದು. ಬಸವ ತಂದೆಗಳ ವಿಚಾರ ಅಂದಿನ ಕಾಲದಲ್ಲಿ ಹೇಳಬೇಕಾದ ಮಾತುಗಳನ್ನು ಅತ್ಯಂತ ನಯವಾಗಿ ಹೇಳುತ್ತಿದ್ದರು.
ಹೇಳಿದ ಮಾತು ವ್ಯರ್ಥವಾಗಿರಬಾರದು ಸದುಪಯೋಗವಾಗಬೇಕು. ಪೂಜೆ ಎಂಬುದು ತನು ಮನ ಶುದ್ಧಿಗಾಗಿಯೇ ವಿನಃ ತೋರಿಕೆಗಾಗಿ ಅಲ್ಲ. ಅಲ್ಲದೆ ಎಲ್ಲರ ಹೊಟ್ಟೆಯನ್ನು ತುಂಬಿಸುವುದು ಮುಖ್ಯವೇ ವಿನಃ ತನ್ನ ಹೊಟ್ಟೆಯನ್ನು ಹೊರೆಯವದು ಮುಖ್ಯವಲ್ಲ. ಕರುವನ್ನು ಮರುಗಿಸಿ ತಾನು ಹಾಲು ಸವಿಯುವದು ಸ್ವಾರ್ಥ. ಆದುದರಿಂದ ಎಲ್ಲರಿಗೂ ಉಪಯೋಗವಾಗುವಂಥ ಕಾರ್ಯವನ್ನು ನಾವು ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಮಹಾಲಿಂಗ ಕರನಂದಿ ಅವರು ಈ ವಚನ ಚಿಂತನೆಯನ್ನು ಮುಂದುವರೆಸುತ್ತ–ವ್ಯರ್ಥವಾಗಿ ಸಮಯ ಕಳೆಯದೆ ಕಾಯಕದಲ್ಲಿ ತೊಡಗಬೇಕು. ಅದೇ ನಮಗೆ ಕಾಯಕ ಪೂಜೆಯಾಗಬೇಕು. ನಾವು ಮಾಡುವ ಪೂಜೆಗೊಂದು ಅರ್ಥವಿರಬೇಕು. ಅದೇ ರೀತಿ ಕರುವನ್ನು ಅಗಲಿಸಿ ನಾವು ಹಾಲನ್ನು ಕುಡಿಯುವದು ಕೂಡಾ ಸರಿಯಲ್ಲ. ಅಥವಾ ಅದನ್ನು ಪೂಜೆಯಲ್ಲಿ ಬಳಸಿಕೊಳ್ಳುವದು ಕೂಡಾ ಯೋಗ್ಯವಲ್ಲ. ಮೊದಲು ಕರುವಿಗೆ ನೀಡಿ ಹೆಚ್ಚಿನ ಹಾಲನ್ನು ನಾವು ಬಳಸಿಕೊಳ್ಳಬಹುದು. ಇವೆಲ್ಲ ಕೂಡಲ ಸಂಗಮದೇವರು ಮಾಡಿದ ಮಾಯೆ. ಅದನ್ನು ಗೆಲ್ಲಬೇಕು ಎಂದು ಸೂಚಿಸಿದರು.
ನಂತರದಲ್ಲಿ ಪ್ರೊ. ಸುರೇಶ ರಾಜನಾಳ ಅವರು ಈ ವಚನದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತ, ಕೂಡಲಸಂಗಮದೇವರು ಮಾಡಿದ ಈ ಮಾಯೆಯಿಂದ ಹೊರಬರಬೇಕಾಗಿದ್ದರೆ ನಾವೆಲ್ಲರೂ ಪೂಜೆಯ ಮಹತ್ವವನ್ನರಿಯಬೇಕು. ಪೂಜೆ ಎಂಬುದು ಕೇವಲ ತೋರಿಕೆಗಲ್ಲ ತನು-ಮನಗಳನ್ನು ಶುಚಿಯಾಗಿಸಿಕೊಂಡು ಶುದ್ಧ ಮನಸ್ಕರಾಗಲಿಕ್ಕೆ ಹೂಗಳನ್ನು, ನೀರನ್ನು ಉಪಯೋಗಿಸಿ ಮಾಡಿದ ಪೂಜೆ ನಮ್ಮದಲ್ಲದ ವಸ್ತುವನ್ನು ಭಗವಂತನಿಗೆ ಅರ್ಪಿಸಿದಂತಾಗುತ್ತದೆ. ಈ ಅರ್ಪಣೆ ಎಷ್ಟರಮಟ್ಟಿಗೆ ಸರಿ? ಹೀಗಾಗಿ ಕೂಡಲಸಂಗಮದೇವನನ್ನು ಅರಿಯಲು ಆಂತರ್ಮುಖಿಯಾಗಿ ಸ್ವರೂಪವನ್ನು ಕಾಣಬೇಕೇ ವಿನಃ ಬಹಿರ್ಮುಖವಾಗಿ ಅಲ್ಲ. ಅದಕ್ಕೆ ನಾವು ಕೂಡಲಸಂಗಯ್ಯನಲ್ಲಿಯೇ ಬೆರೆಯಬೇಕು ಎಂದರು.

ಸ್ಥಳೀಯ ಉದ್ಯಮಿ ಶರಣ ಮಹಾಂತೇಶ ಸಿಂದಗಿಯವರು ಭಾಗವಹಿಸಿ ಮಾತನಾಡುತ್ತಾ, ಇಲ್ಲಿಯದನ್ನೇ ಸ್ವೀಕರಿಸಿ ಇಲ್ಲಿಯೇ ಅರ್ಪಿಸುವುದೇನೂ ದೊಡ್ಡದಲ್ಲ. ಮರದ ಹೂವನ್ನು ಮರಕ್ಕೇರಿಸುವುದು, ನದಿಯ ನೀರನ್ನು ನದಿಗರ್ಪಿಸುವುದೇನು ದೊಡ್ಡದಲ್ಲ. ನಮ್ಮಲ್ಲಿಯ ಅರಿವು, ಆಚಾರಗಳನ್ನು ಅರ್ಥಮಾಡಿಕೊಳ್ಳಬೇಕು.
ಲಿಂಗಯ್ಯನಿಗೆ ಅರ್ಪಿಸಬೇಕಾದದ್ದು ನಮ್ಮೊಳಗಿನ ಮಾನವೀಯತೆ ಹಾಗೂ ದಯೆಗಳನ್ನು ಬಸವ ನಾಮ ಹಿಡಿದು ಭವಗೆಡಬೇಕು. ಸ್ವಾಭಿಮಾನದಿಂದ ಬದುಕನ್ನು ಅರಳಿಸಬೇಕು. ಇತರರ ಪಾಲಿನ ಹಕ್ಕನ್ನು ನಾವು ಕಸಿಯಬಾರದು. ಅರಿವು, ಆಚಾರ, ಅನುಭಾವಗಳು ನಮ್ಮ ಬದುಕಾದರೆ ಮಾತ್ರ ಅದಕ್ಕೊಂದು ಅರ್ಥವಿದೆ. ಇಲ್ಲದಿದ್ದರೆ ಇತರರ ಬಾಯಿಗೆ ನಾವು ಈಡಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊನೆಯಲ್ಲಿ ಸಮಾರೋಪಗೈದ ಡಾ. ಗಿರೀಶ ನೀಲಕಂಠಮಠ ಅವರು, ಈ ವಚನವು ಮನುಷ್ಯನ ಬಾಹ್ಯಡಂಬರವನ್ನು ತಿರಸ್ಕರಿಸುತ್ತಾ ಅದೇ ವೇಳೆಗೆ ನಾವು ಹೇಗೆ ನಮ್ಮ ಅಂತರಕ್ಕಿಳಿದು ಶಿವಯೋಗವನ್ನು ಸಾಧಿಸಬೇಕೆಂಬುದನ್ನು ತಿಳಿಸುತ್ತದೆ.
ಬತ್ತುವ ಜಲವನ್ನು, ಒಣಗುವ ಮರವನ್ನು ಅದರದೇ ಅಂಗವಾದ ಹೂವು ಮತ್ತು ಜಲಗಳಿಂದ ಪೂಜಿಸಿ ಮುಕ್ತರಾದೆವೆಂಬುದು ಮೂಢತನ. ಅಂತೆಯೇ ಹಸುವಿನ ಹಾಲನ್ನು ಒಂದಿಷ್ಟು ಕರುವಿಗೆ ಬಿಡದೆ ನಾವೇ ಕುಡಿದು ಪ್ರಸಾದ ಸ್ವೀಕರಿಸಿದೆ ಎಂಬುದು ಸಹ ಮೂಢತನವೇ. ಮರದ ಹೂವನ್ನು ಮರಕ್ಕೆ ಅರ್ಪಿಸುವುದಕ್ಕಿಂತ ತನು ಕರಗಬೇಕು, ಹಮ್ಮು ಹರಿಯಬೇಕು. ಹಾಗೆಯೇ ಮನ ಮರುಗಬೇಕು (ಇತರರ ಕಷ್ಟ ಸುಖಕ್ಕೆ) ಅದು ಜಲವನ್ನು ಸಮರ್ಪಿಸುವ ರೀತಿ.
ತನ್ನೆಡೆಗೆ ಬಂದುದ ಸ್ವೀಕರಿಸಿ, ಪ್ರಸನ್ನವಾಗಿರುವುದು ಪ್ರಸಾದ ಭಾವ. ಇತರರಿಗೆ ಇಲ್ಲದಂತೆ ಮಾಡಿ ತಾನೊಬ್ಬನೇ ಸ್ವೀಕರಿಸಿ, ಪ್ರಸಾದ ಪಡೆದೆನೆಂಬುದು ಮೂರ್ಖತನ. ಇದೆಲ್ಲ ಕೂಡಲಸಂಗಮದೇವರ ಮಾಯೆ, ವಿಧಿ. ಇದನ್ನು ಶಿವಯೋಗ ಮಾರ್ಗದಿಂದ ಗೆಲ್ಲಬೇಕು. ನಮ್ಮಲ್ಲಿರುವುದನ್ನೆಲ್ಲ ಲಿಂಗಕ್ಕೆ ಅರ್ಪಿಸಿ ಲಿಂಗವಾಗಬೇಕು. ಆ ಲಿಂಗವಾಗುವ ಪರಿಯೇ ಶಿವಯೋಗ.

ಇಂದ್ರಿಯ ಮುಖದಿಂದ ಪಡೆಯುವ ಭೋಗೋಪಭೋಗಗಳೆಲ್ಲವೂ ಶಿವನಿಗರ್ಪಿತವಾಗಬೇಕು. ನಮ್ಮ ಬೇಕು ಬೇಡಗಳನ್ನೆಲ್ಲ ಲಿಂಗಯ್ಯಗೆ ಅರ್ಪಿಸಿ ಲಿಂಗಭಾವ ತಳೆದು ಲಿಂಗಯ್ಯನೇ ಆಗಬೇಕು. ಇದೆಲ್ಲವೂ ಆ ಪರಶಿವನ ಮಾಯೆಯೇ ಆಗಿರುವುವಾಗ ಇದನ್ನು ಮೀರಿ ಲಿಂಗ ಸುಖದಲ್ಲಿ ಜಾಲಾಡಬೇಕು. ಅದೇ ಶಿವಯೋಗವೆಂದು ವಿಧ ವಿಧವಾದ ಉದಾಹರಣೆಗಳೊಂದಿಗೆ ಮನತುಂಬುವಂತೆ ವಿವರಿಸಿದರು.
ಮಹಾಮನೆಯಲ್ಲಿ ಚಿಂತನೆಯ ಕೊನೆಗೆ ಅನೇಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದು ಮಹಾಮನೆಯವರಿಗೆಲ್ಲ ಬಹಳ ಖುಷಿ ತಂದಿತು. ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನುಗೈದರು.
ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ರೇವಣಸಿದ್ದೇಶ್ವರ ಮಠ, ಬಸಯ್ಯ ಕಂಬಾಳಿಮಠ, ಕುಮಾರ ಅರುಟಗಿ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಶ್ರೀದೇವಿ ಶೇಖಾ, ದಾಕ್ಷಾಯಣಿ ತೆಗ್ಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
