ಡಾ ಕಲಬುರ್ಗಿ ಸ್ಮರಣೆಯಲ್ಲಿ ʼಅರಿವು-ಆಚಾರ-ಅನುಭಾವʼ ಕೃತಿ ಲೋಕಾರ್ಪಣೆ

ಗುಳೇದಗುಡ್ಡ

ಬಸವ ಕೇಂದ್ರದ ವಾರದ ಮಹಾಮನೆ ಕಾರ್ಯಕ್ರಮವು ಶನಿವಾರ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಮನೆಯಲ್ಲಿ ಜರುಗಿತು.

ಸಾಪ್ತಾಹಿಕ ಮಹಾಮನೆ ಕಾರ್ಯಕ್ರಮದಲ್ಲಿ ಸತ್ಯ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಶರಣರ ಸ್ಮರಣೋತ್ಸವ ಮತ್ತು ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ಅರಿವು-ಆಚಾರ-ಅನುಭಾವ ಗ್ರಂಥ ಬಿಡುಗಡೆಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

“ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರು ಶಿಕ್ಷಣ, ಸಂಪಾದನೆ, ಜಾನಪದ, ನಾಮಶಾಸ್ತ್ರ, ಗ್ರಂಥ ಸಂಪಾದನೆ ಮೊದಲಾದ ಕ್ಷೇತ್ರಗಳಲ್ಲಿ ಬಲ್ಲಿದರಾಗಿದ್ದರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅವರು ಬಲ್ಲಿದವರಾಗಿದ್ದರು. ಪಂಪನನ್ನು ಆಳವಾಗಿ ಅಭ್ಯಸಿಸಿದ ಅವರು ವಚನಕಾರರನ್ನು ಅಷ್ಟೇ ಗೌರವದಿಂದ ಕಂಡಿದ್ದರು. ಕಾರಣ ಕಲಬುರ್ಗಿಯವರಿಗೆ ಕಲಬುರ್ಗಿಯವರೇ ಸಾಟಿ”ಯೆಂದು ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು ಹೇಳಿದರು.

ಹುತಾತ್ಮ ಡಾ. ಎಂ. ಎಂ. ಕಲಬುರ್ಗಿ ಅವರ ಸ್ಮರಣಾರ್ಥ ಸ್ಥಳೀಯ ಬಸವಕೇಂದ್ರದ ವತಿಯಿಂದ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರ ನಿವಾಸ ‘ತೊಗಲುಗೊಂಬೆ’ ಯಲ್ಲಿ ಏರ್ಪಡಿಸಿದ ಸಾಪ್ತಾಹಿಕ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಡಾ. ಸಣ್ಣವೀರಣ್ಣ ಅವರ ಅರಿವು-ಆಚಾರ-ಅನುಭಾವ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಕೃತಿಯನ್ನು ಬಿಡುಗಡೆಗೊಳಿಸಿ ಈ ಗ್ರಂಥವನ್ನು ನಾನು ಅತೀ ಸಂತೋಷದಿಂದ ಬಿಡುಗಡೆಗೊಳಿಸುತ್ತೇನೆ. ಕಲಬುರ್ಗಿಯವರ ಕಟ್ಟಾ ಅಭಿಮಾನಿ ಡಾ. ಸಣ್ಣವೀರಣ್ಣನವರ ಈ ಕೃತಿ ಅಧ್ಯಯನಕ್ಕೆ ಯೋಗ್ಯವಾಗಿದ್ದು, ಕೈತೊಳೆದುಕೊಂಡು ಓದುವ ಗ್ರಂಥವಾಗಿದೆ ಎಂದು ಬಣ್ಣಿಸಿದರು. ಅಲ್ಲದೆ ಕಲಬುರ್ಗಿಯವರ ಸ್ಮರಣೋತ್ಸವದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರು ಮಾತನಾಡುತ್ತ, “ಡಾ. ಕಲಬುರ್ಗಿಯವರು ಗುರುಗಳ ಗುರುಗಳಾಗಿದ್ದರು. ಅವರು ಹುತಾತ್ಮರಾದ ಹತ್ತನೆಯ ವರ್ಷದ ಸ್ಮರಣೋತ್ಸವ ನನ್ನ ಮನೆಯಲ್ಲಿ ಆಗುತ್ತಿರುವುದು ಅದೂ ಸಹ ಬಸವಕೇಂದ್ರದ ವತಿಯಿಂದ ಜರುಗುತ್ತಿರುವುದು ನನ್ನ ಭಾಗ್ಯ ಡಾ. ಕಲಬುರ್ಗಿಯವರು, ಡಾ. ಬಿ. ವ್ಹಿ. ಶಿರೂರ ಅವರನ್ನು ಡಾ. ವೀರಣ್ಣ ರಾಜೂರ ಅವರನ್ನು ಹಾಗೂ ಡಾ. ಗುರುಲಿಂಗ ಕಾಪಸೆಯವರನ್ನು” ನೆನೆಸಿಕೊಂಡರು. ಅದರಲ್ಲೂ ಡಾ. ಕಲಬುರ್ಗಿಯವರನ್ನು ನೆನಸಿಕೊಳ್ಳುವಾಗ ಅತ್ಯಂತ ಭಾವುಕರಾಗಿ ಮಾತನಾಡಿದರು.

ಕೃತಿಯನ್ನು ಕುರಿತು ಮಾತನಾಡಿದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು “ಡಾ. ಸಣ್ಣವೀರಣ್ಣ ದೊಡ್ಡಮನಿಯವರ ಕೃತಿ’ ‘ಅರಿವು ಆಚಾರ ಅನುಭಾವ’ ಎಂಬ ಗ್ರಂಥವು ವಚನಕಾರರ ಗುರು ಲಿಂಗ ಜಂಗಮ ಎನ್ನುವದಕ್ಕೆ ಸಂವಾದಿಯಾಗಿ ವರ್ತಮಾನಕ್ಕೆ ತೆರೆದುಕೊಂಡಿದೆ. ಈ ಗ್ರಂಥವನ್ನು ಓದುವಾಗ ಆಧುನಿಕ ಪರಸ್ಥಿತಿಯ ಅರಿವೂ ಇರಬೇಕಾಗುತ್ತದೆ. ಇಲ್ಲಿ ಅರಿವು ಎಂದರೆ ಕೇವಲ ಗುರುವಲ್ಲ, ಆತ ವ್ಯಕ್ತಿಯಲ್ಲ, ಅದೊಂದು ತತ್ವ ಹಾಗೂ ಮೌಲ್ಯವಾಗಿದೆ. ಈ ಅರಿವನ್ನು ಕೇವಲ ಲಿಂಗದ ಮೂಲಕ ನೋಡುವುದಲ್ಲ, ಸಮಾಜದ ದೀನದಲಿತರನ್ನು ಸಮಭಾವದಿಂದ ನೋಡುವದು ಹಾಗೂ ಅವರ ಸ್ಥಿತಿಗತಿಗಳನ್ನು ಮಹಾನ್ ದಾರ್ಶನಿಕ ಅಪ್ಪ ಬಸವಣ್ಣನವರಂತೆ ಅಪ್ಪಿಕೊಳ್ಳುವದಾಗಿದೆ. ಇಲ್ಲದಿದ್ದರೆ ಇದಕ್ಕೆ ಯಾವ ಬೆಲೆಯೂ ಇಲ್ಲ ಎಂಬುದನ್ನು ಎರಡು ಲೇಖನಗಳ ಮೂಲಕ ಸಿದ್ಧಪಡಿಸಿದ್ದಾರೆ. ಹಾಗೆಯೇ ಗಳಿಸಿಕೊಂಡ ಸಮಭಾವದ ಆ ಅರಿವನ್ನು ಕ್ರಿಯೆಗೆ ತರುವುದೇ ಆಚಾರ ಎಂಬುದನ್ನು ಒಂಬತ್ತು ಲೇಖನಗಳಲ್ಲಿ ಆಧುನಿಕ ಸಮಸ್ಯೆಗಳೊಂದಿಗೆ ಶರಣರ ವಚನಗಳನ್ನು ತಿಳಿಸಿ ಬರೆದಿದ್ದಾರೆ. ಅಲ್ಲದೆ ಮೂರನೆಯ ಭಾಗದಲ್ಲಿ ಅನುಭಾವ ಎಂದರೆ ಜಂಗಮ. ಈ ಜಂಗಮರಲ್ಲಿ ಜಾತಿ ಜಂಗಮ, ಜ್ಞಾತಿ ಜಂಗಮರೆಂಬ ಡಾ. ಕಲಬುರ್ಗಿಯವರ ವಿಚಾರಗಳನ್ನು ಬದುಕಿದ ಡಾ. ಕಲಬುರ್ಗಿ, ಡಾ. ಶಿರೂರ, ಡಾ. ರಾಜೂರ ಹಾಗೂ ಡಾ. ಗುರುಲಿಂಗ ಕಾಪಸೆ ಅವರನ್ನು ಕುರಿತು ಬರೆಯಲಾಗಿದೆ” ಎಂದು ವಿವರವಾಗಿ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ಗ್ರಂಥವನ್ನು ಪರಿಚಯಿಸಿದರು.

ಆರಂಭದಲ್ಲಿ ಶರಣೆಯರಾದ ಕು. ದಾನಮ್ಮ, ಶ್ರೀಮತಿ ಜಯಶ್ರೀ ಬರಗುಂಡಿ, ಶ್ರೀಮತಿ ಶ್ರೀದೇವಿ ಶೇಖಾ ಅವರಿಂದ ಸಾಮೂಹಿಕ ವಚನ ಪ್ರಾರ್ಥನೆಯಾಯಿತು. ಬಸವತಂದೆಗಳ ಹಾಗೂ ಡಾ. ಎಂ. ಎಂ. ಕಲಬುರ್ಗಿಯವರ ಭಾವಚಿತ್ರಕ್ಕೆ ಪುಷ್ಪದಳಗಳ ಸಮರ್ಪಣೆಯಾಯಿತು. ಕೊನೆಯಲ್ಲಿ ಜಯಶ್ರೀ ಬರಗುಂಡಿ ಅವರಿಂದ ವಚನ ಮಂಗಲ ಮತ್ತು ಶರಣ ಡಾ. ಚಿದಾನಂದ ನಂದಾರ ಅವರು ಶರಣು ಸಮರ್ಪಣೆಯಾಯಿತು.

ಕಾರ್ಯಕ್ರಮದಲ್ಲಿ ಚಂದ್ರಕಾಂತ ಶೇಖಾ, ಪ್ರೊ. ಶ್ರೀಕಾಂತ ಗಡೇದ, ಪ್ರೊ. ಗಾಯತ್ರಿ ಕಲ್ಯಾಣಿ, ಮಹಾಲಿಂಗಪ್ಪ ಕರನಂದಿ, ವಿಜಯಾನಂದ ಆಧ್ಯಾತ್ಮಿಕ ಕೇಂದ್ರ ಕಾರ್ಯದರ್ಶಿಗಳಾದ ಚಿದಾನಂದ ಕಾಟವಾ, ಡಾ. ಗೀರಿಶ ನೀಲಕಂಠಮಠ, ಬಸವರಾಜ ಖಂಡಿ ದಂಪತಿಗಳು, ಕೃಷ್ಣಾಜಿ ಮಹೀಂದ್ರಕರ, ಪಾಂಡಪ್ಪ ಕಳಸಾ, ಚಂದ್ರಶೇಖರ ತೆಗ್ಗಿ, ಹುಚ್ಚಪ್ಪ ಯಂಡಿಗೇರಿ, ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಪ್ರೊ. ಸುರೇಶ ರಾಜನಾಳ, ಶಿವಾನಂದ ಸಿಂದಗಿ, ಮಹಾಂತೇಶ ಸಿಂದಗಿ, ಜಾಗತಿಕ ಲಿಂಗಾಯತ ಮಹಾಸಭಾ ಗುಳೇದಗುಡ್ಡ ತಾಲೂಕಾ ಘಟಕದ ಅಧ್ಯಕ್ಷ ರಾಚಣ್ಣ ಕೆರೂರ, ಉಪಾಧ್ಯಕ್ಷ ಮೋಹನ ಕರನಂದಿ, ಗುಳೇದಗುಡ್ಡ ತಾಲೂಕಾ ಮಹಿಳಾ ಘಟಕ ಜಾ.ಲಿಂ.ಮ.ದ ಅಧ್ಯಕ್ಷೆ ಗೀತಾ ತಿಪ್ಪಾ , ಶರಣೆಯರಾದ ವಿಶಾಲಾಕ್ಷಿ ಗಾಳಿ, ಚನ್ನಮ್ಮ ಜವಳಿ, ದಾಕ್ಷಾಯಣಿ ತೆಗ್ಗಿ, ನಿರ್ಮಲಾ ಬರಗುಂಡಿ, ಸವಿತಾ ಬರಗುಂಡಿ, ಸರೋಜಾ ಸಾರಂಗಿ, ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು, ಬಂಧುಬಳಗದವರು ಮೊದಲಾದವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *