ಧಾರವಾಡ:
ಸೋಮವಾರ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಅಂಗಸಂಸ್ಥೆಯಾದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ, ಆವರಣದಲ್ಲಿ ತತ್ವಶಾಸ್ತ್ರದ ಶ್ರೇಷ್ಠ ಪ್ರಾಧ್ಯಾಪಕರಾದ ಡಾ. ಎನ್. ಜಿ. ಮಹಾದೇವಪ್ಪ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮನಗುಂಡಿಯ ಶ್ರೀಗುರುಬಸವ ಮಹಾಮನೆಯ ಪೂಜ್ಯ ಬಸವಾನಂದ ಸ್ವಾಮಿಗಳು ಸಾನಿಧ್ಯ ವಹಿಸಿಕೊಂಡು ‘ಆಹಾರ ತತ್ವ’ದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಮ್ಮ ಶರೀರಕ್ಕೆ ಬೇಕಾದ ಸಮತೋಲನ ಆಹಾರವನ್ನು ನಿರಂತರವಾಗಿ ಸೇವಿಸುತ್ತಾ ಆರೋಗ್ಯಕರವಾದ ಬದುಕನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರತಿದಿನ ಬೆಳಿಗ್ಗೆ ಬೇಗನೆ ಏಳುವುದು ಉತ್ತಮ ಆರೋಗ್ಯದ ಮೊದಲ ಅಂಶವಾಗಿದೆ. ದಿನಾಲು ತಡವಾಗಿ ಎದ್ದು ಎಂತಹ ಪೌಷ್ಠಿಕ ಆಹಾರವನ್ನು ಸೇವಿಸಿದರು ಅದು ದೇಹದ ಆರೋಗ್ಯಕ್ಕೆ ಪ್ರಯೋಜನವಾಗಲಾರದು. ನಾವು ಸೇವಿಸುವ ಪದಾರ್ಥಗಳಲ್ಲಿ ಪ್ರೋಟಿನ್, ಕರ‍್ಬೋಹೈಡ್ರೆಟ್, ಕೊಬ್ಬು, ವಿಟಮಿನ್, ಮಿನರಲ್ಸ್ ಮತ್ತು ಫೈಬರ್ ಮುಂತಾದ ಅಂಶಗಳು ಸಮಪ್ರಮಾಣದಲ್ಲಿ ಇರುವಂತೆ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು.
ಆಹಾರ ತತ್ವದ ತಿಳುವಳಿಕೆ ಇಲ್ಲದೆ ದುರಾಸೆಯ ಬೆನ್ನುಹತ್ತಿದ ಅನೇಕ ವ್ಯಾಪಾರಿಗಳು ಆಹಾರಗಳಲ್ಲಿ ವಿಷಕಾರಿ ಪದಾರ್ಥಗಳನ್ನು ಸೇರಿಸುತ್ತಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.
ಪ್ರಾಚೀನ ಕಾಲದಲ್ಲಿ ಗಡ್ಡೆಗೆಣಸುಗಳನ್ನು ಸೇವಿಸುತ್ತಿದ್ದ ಮಾನವನು ನಂತರದ ಕಾಲಘಟ್ಟದಲ್ಲಿ ರಾಗಿ, ನೆವಣಿ, ಜೋಳ, ಮುಂತಾದ ಧಾನ್ಯಗಳನ್ನು ಬೆಳೆಯಲು ಆರಂಭಿಸಿದನು. ಆಧುನಿಕ ದಿನಗಳಲ್ಲಿ ಅನೇಕರು ತಮ್ಮ ಬಾಯಿ ರುಚಿ ಹೆಚ್ಚಿಸುವ ಪದಾರ್ಥಗಳನ್ನು ಸೇವಿಸಿ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದರ ಕುರಿತು ವಿಷಾದ ವ್ಯಕ್ತಪಡಿಸಿದರು.

‘ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ನಾನ್ನುಡಿಯು ಆಹಾರದ ಮಹತ್ವವನ್ನು ತಿಳಿಸುತ್ತದೆ. ಪ್ರತಿಯೊಬ್ಬರು ತಮ್ಮ ಆಹಾರದಲ್ಲಿ ಹಾಲು, ಮೊಸರು, ತುಪ್ಪ ಮತ್ತು ಎಲ್ಲ ವಿಧದ ಹಣ್ಣು, ತರಕಾರಿಗಳನ್ನು ನಿರಂತರವಾಗಿ ಸೇವಿಸಬೇಕೆಂದು ತಿಳಿಸಿದರು.
ಇನ್ನೋರ್ವ ಅತಿಥಿಗಳಾದ ಪ್ರಕಾಶ ನಾಯ್ಕ ಜನರಲ್ ಮ್ಯಾನೇಜರ್ ಶ್ರೀ ಜಗನ್ನಾಥ ಎಕ್ಸಪ್ರೆಸ್ ಲಿಮಿಟೆಡ್, ಭುವನೇಶ್ವರ ಅವರು ಮಾತನಾಡುತ್ತಾ, ನಾವು ಸೇವಿಸುವ ಆಹಾರವು ಮಿತವಾಗಿದ್ದು ಪೌಷ್ಠಿಕಾಂಶಗಳಿಂದ ಕೂಡಿರಬೇಕು. ದೇಹದ ಸಮತೋಲನವನ್ನು ಕಾಪಾಡಲು ಉಪವಾಸವು ನೇರವಾಗುತ್ತದೆ ಎಂದರು.
ನಾನು ಪೂಜ್ಯರ ಮಾರ್ಗದರ್ಶನದಲ್ಲಿ ಶ್ರೀಮಠದಲ್ಲಿದ್ದು ಕಳೆದ ಹನ್ನೊಂದು ದಿನಗಳಿಂದ ಉಪವಾಸ ಮಾಡಿ ೬ ಕೆ.ಜಿ.ಯಷ್ಟು ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶಶಿಧರ ತೋಡಕರ ಮಾತನಾಡುತ್ತಾ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಹಾರ, ವಿಹಾರ ಮತ್ತು ವ್ಯವಹಾರಗಳಲ್ಲಿ ಪರಿಶುದ್ದತೆಯನ್ನು ಕಾಯ್ದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ತಮ್ಮ ನಾಳೆಗಳ ಬಗ್ಗೆ ಕಾಳಜಿ ಇರಬೇಕು ಮತ್ತು ತಮ್ಮ ಆಸಕ್ತಿಗಳಿಗೆ ತಕ್ಕಂತೆ ಸೂಕ್ತ ಗುರುಗಳನ್ನು ಹುಡುಕಿಕೊಂಡು ಶ್ರೇಷ್ಠ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ವೇದಿಕೆ ಮೇಲೆ ಶಾಂತರಾಜ ವಿಭೂತಿ, ಡಾ. ಈರಣ್ಣ ಇಂಜಗನೇರಿ ಉಪಸ್ಥಿತರಿದ್ದರು. ಗಾಯತ್ರಿ ಸರದೇಶಪಾಂಡೆ ಪ್ರಾರ್ಥಿಸಿದರು. ಕು. ನೀಲಮ್ಮ ಕೋಟಿ ಸ್ವಾಗತಿಸಿದರು. ಆನಂದ ಗೊಣ್ಣಾಗರ ಅತಿಥಿಗಳನ್ನು ಪರಿಚಯಿಸಿದರು. ಮಧ್ವೇಶ ಗುಡಿ ವಂದಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರೊ ಜಿ. ಎ. ಕಲ್ಲೂರ, ಮತ್ತು ಆಮಂತ್ರಿತರು, ಪಾಲಕರು, ಮಹಾವಿದ್ಯಾಲಯದ ಉಪನ್ಯಾಸಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
