ಅಥಣಿ
ಸುಕ್ಷೇತ್ರ ಮೋಟಗಿ ಮಠದ ಶ್ರೀ ಚನ್ನಬಸವ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ, ಸಾಮರಸ್ಯದ ಸಮಾಜೋತ್ಸವ ಮತ್ತು ಬಸವ ಚರಿತಾಮೃತ ಪ್ರವಚನ ಕಾರ್ಯಕ್ರಮಗಳು ಜನವರಿ ೧೧ ರಿಂದ ೧೩ ರವರೆಗೆ ಮೂರುದಿನಗಳ ಕಾಲ ನಡೆಯಲಿವೆ.
ಈ ಸಮಯದಲ್ಲಿ ಪಾಲ್ಗೊಳ್ಳುವಂತೆ ನಾಡಿನ ಹೆಸರಾಂತ ಮಠಾಧೀಶರು, ಸಾಹಿತಿಗಳು , ಚಿಂತಕರು, ಕಲಾವಿದರು ಮತ್ತು ಇತರ ಗಣ್ಯರಿಗೆ ಅಹ್ವಾನ ನೀಡಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಯಶಸ್ವೀಯಾಗಿ ನಡೆಸುವಲ್ಲಿ ಪುರುಷರೊಂದಿಗೆ ಮಹಿಳೆಯರ ಪಾತ್ರವು ಮುಖ್ಯವಾಗಿದೆ ಎಂದು ಮೋಟಗಿಮಠದ ಪೂಜ್ಯ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

ಸ್ಥಳೀಯ ಮೋಟಗಿಮಠದಲ್ಲಿ ಪಟ್ಟಣದ ಮಹಿಳೆಯರಿಗಾಗಿ ಶತಮಾನೋತ್ಸವ ಪೂರ್ವಭಾವಿ ಸಭೆಯನ್ನು ನಡೆಸಿದರು. ಈ ಕಾರ್ಯಕ್ರಮಗಳಲ್ಲಿ ಎಲ್ಲಾ ಬಡಾವಣೆಯ ಹೆಣ್ಣುಮಕ್ಕಳು ಒಂದುಗೂಡಿ ಮಠದ ಕಾರ್ಯವನ್ನು ತಮ್ಮ ತವರಿನ ಕಾರ್ಯಕ್ರಮವೆಂದು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಚನ್ನಬಸವೇಶ್ವರ ಯುವಕ ಸಂಘದ ಸುವರ್ಣ ಮಹೋತ್ಸವ, ಪೂಜ್ಯರ ಸಮಾಜಸೇವಾ
ಕಾಯಕದ ಬೆಳ್ಳಿಹಬ್ಬ, ಗುರುಚನ್ನಬಸವೇಶ್ವರ ಗ್ರಂಥಾಲಯದ ಅಮೃತ ಮಹೋತ್ಸವ, ಗುರು ಬಸವೇಶ್ವರ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಹೇಳಿದರು.

ಹಿರಿಯ ಜೀವಿಗಳ ತುಲಾಭಾರ, ಪೌರಕಾರ್ಮಿಕರ ಗೌರವ, ಗಡಿನಾಡ ಯುವ ಪ್ರತಿಭೆಗಳ ಸನ್ಮಾನ ಹಾಗೂ ಸ್ಪರ್ಧೆಗಳು, ಚಿಂತನ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು ಎಂದು ಹೇಳಿದರು.
ಡಿಸೆಂಬರ್ ೨೭ ರಿಂದ ಮುದಗಲ್ಲದ ಪೂಜ್ಯ ಮಹಾಂತ ಸ್ವಾಮೀಜಿಗಳಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳೂ ವಿಜೃಂಭಣೆ ಅನ್ನುವುದಕ್ಕಿಂತಲೂ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಬೇಕು, ಎಂದು ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.