ವಿವಿಧ ಪಠ್ಯಗಳಲ್ಲಿ ಬಸವಣ್ಣನವರ ಸೇರಿಸಿ: ಭಾಲ್ಕಿ ಶ್ರೀ ಒತ್ತಾಯ

ಕಲಬುರಗಿ

ಬಸವಾಭಿಮಾನಿಯಾಗಿರುವ ಸಿದ್ದರಾಮಯ್ಯನವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈಗ ಆ ನಾಯಕನಿಗೆ ಶಕ್ತಿ ಬರಬೇಕಾದರೆ ವಿವಿಧ ಪಠ್ಯಗಳಲ್ಲಿ ಬಸವಣ್ಣವರ ಪಠ್ಯ ಸೇರಿಸಬೇಕು. ಈ ಕುರಿತು ಸಿಎಂ ಅವರು ಒಂದು ಸಮಿತಿ ರಚನೆ ಮಾಡಿ ಅರ್ಥಶಾಸ್ತ್ರ ಸಮಾಜಶಾಸ್ತ್ರ, ನೀತಿಶಾಸ್ತ್ರ, ತತ್ವಶಾಸ್ತ್ರ ಸೇರಿದಂತೆ ವಿವಿಧ ಪಠ್ಯಗಳನ್ನು ಸೇರಿಸಲು ಕ್ರಮವಹಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಒತ್ತಾಯಿಸಿದರು.

ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮಾರಕ ಭವನದಲ್ಲಿ ಮಂಗಳವಾರ ಸಂಜೆ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಳೆದ ಬಜೆಟ್‌ನಲ್ಲಿಯೇ ಸಿಎಂ ಸಿದ್ದರಾಮಯ್ಯನವರು ವಚನ ವಿಶ್ವವಿದ್ಯಾಲಯ ಘೋಷಣೆ ಮಾಡುವುದಾಗಿ ಹೇಳಿದ್ದರು. ಆದರೆ, ಮಾಡಿಲ್ಲ. ಬರುವ ಬಜೆಟ್‌ನಲ್ಲಿಯಾದರು ಘೋಷಣೆ ಮಾಡಲು ಸಚಿವ ಡಾ. ಶರಣಪ್ರಕಾಶ ಪಾಟೀಲ, ಶಾಸಕ ಬಿ.ಆರ್.ಪಾಟೀಲ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಬಸವ ಸಂಸ್ಕೃತಿ ಅಭಿಯಾನ ಸೆ. ೧ ರಂದು ಬಸವನವಾಗೇವಾಡಿಯಿಂದ ಚಾಲನೆಗೊಂಡಿದ್ದು, ಇದು ರಾಜ್ಯದ ೩೧ ಜಿಲ್ಲೆಗಳಲ್ಲಿ ನಡೆದು ಕೊನೆಗೆ ಅಕ್ಟೋಬರ್ ೫ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪಗೊಳ್ಳಲಿದ್ದು, ಅಂದು ಹೆಚ್ಚಿನ ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕರೆ ಕೊಟ್ಟರು.

ಮೈಸೂರಿನ ಕುಂದೂರಮಠದ ಡಾ. ಶರಶ್ಚಂದ್ರ ಸ್ವಾಮೀಜಿ ಮಾತನಾಡಿ, ಸರ್ಕಾರ ವಚನ ವಿಶ್ವವಿದ್ಯಾಲಯ ಮಾಡಬೇಕು. ಪಠ್ಯಗಳ ಪರಷ್ಕರಣೆ ಆಗಬೇಕು. ವಚನ ಸಾಹಿತ್ಯ ಅಧ್ಯಯನ ಆಗಬೇಕು.
ಸಂಘಟನೆಗಳು ರಾಜಕೀಯರಹಿತವಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

ಬೆಳಗಾವಿಯ ವಿಶ್ವಾಂತ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲ್ಲೇಪ್ಪನವರ ಮಠ ಉಪನ್ಯಾಸ ನೀಡಿದರು.

ಗದಗ-ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಮಹಾಂತ ಮಹಾಸ್ವಾಮಿಗಳು, ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಶಿವಾನಂದ ಮಹಾಸ್ವಾಮೀಜಿ, ಮುರುಘರಾಜೆಂದ್ರ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಕೊರಣೇಶ್ವರ ಸ್ವಾಮೀಜಿ, ಬಸವ ಸಂಸ್ಕೃತಿ ಅಭಿಯಾನ ಸಮಿತಿ ಕಲಬುರಗಿ ಅಧ್ಯಕ್ಷ ಅರುಣಕಮಾರ ಪಾಟೀಲ, ಶ್ರೀಶೈಲ ಘೂಳಿ, ಶರಣು ಪಪ್ಪಾ, ಶರಣಕುಮಾರ ಮೋದಿ, ದೊಡ್ಡಪ್ಪಗೌಡ ಪಾಟೀಲ, ನೀಲಕಂಠರಾವ ಮೂಲಗೆ, ಸಂಗಮೇಶ ನಾಗನಹಳ್ಳಿ, ರಾಜಕುಮಾರ ಕೋಟೆ, ಶಿವಶರಣಪ್ಪ ದೇಗಾಂವ, ಪ್ರಭುಲಿಂಗ ಮಹಾಗಾಂವಕರ, ಆರ್.ಜಿ. ಶೆಟಗಾರ, ಅಮರನಾಥ ಸಾಹು, ಸಂಜೀವಕುಮಾರ ಪಾಟೀಲ, ಜಗನ್ನಾಥ ಪಟ್ಟಣ್ಣಶೆಟ್ಟಿ ಇತರರಿದ್ದರು.

ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮಾರಕಭವನದಲ್ಲಿ ಮಂಗಳವಾರ ಸಂಜೆ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶ ನಡೆಯಿತು.

ಸರ್ಕಾರ ವಚನ ಸಾಹಿತ್ಯ ಪ್ರಕಟಮಾಡಲಿ
ಸಿಎಂ ಸಿದ್ದರಾಮಯ್ಯನವರು ಕಳೆದ ಬಜೆಟ್‌ನಲ್ಲಿ ವಚನ ಸಾಹಿತ್ಯ ಪ್ರಕಟ ಮಾಡಿ ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ೪-೫ ತಿಂಗಳಾದರೂ ಸಹ ಸಾಹಿತ್ಯ ಪ್ರಕಟಗೊಂಡಿಲ್ಲ. ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಈ ಕುರಿತು ಸಿಎಂ ಅವರ ಗಮನಕ್ಕೆ ತಂದು ಆದಷ್ಟು ಬೇಗ ವಚನ ಸಾಹಿತ್ಯ ಪ್ರಕಟಿಸುವಂತೆ ಮಾಡಬೇಕು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಮನವಿ ಮಾಡಿದರು. ಬಸವಣ್ಣ ಅಭಿಮಾನಿಗಳಿಗೆ ಮತ್ತು ಲಿಂಗಧಾರಣೆ ಮಾಡಿದವರನ್ನು ಒಪ್ಪಿಕೊಂಡಾಗ ಮಾತ್ರ ನಮ್ಮ ಧರ್ಮ ಬಲಿಷ್ಠವಾಗಲಿದೆ ಎಂದರು.

ಮಕ್ಕಳಲ್ಲಿ ಬಸವ ತತ್ವದ ಅರಿವು ಮೂಡಿಸೋಣ
ಬಸವ ತತ್ವ ಮತ್ತು ೧೨ನೇ ಶತಮಾನದ ಶರಣರ ತತ್ವ ಸಿದ್ಧಾಂತಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಾವೆಲ್ಲ ಮಾಡಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ನಾವು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದರ ಬಗ್ಗೆ ವಚನ ಸಾಹಿತ್ಯದಲ್ಲಿ ಉಲ್ಲೇಖವಿದೆ. ಎಲ್ಲಾ ಸಮಸ್ಯೆ, ಗೊಂದಲಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ ಸೂಚಿಸಲಾಗಿದೆ. ಹಾಗಾಗಿ ಮಕ್ಕಳಿಗೆ ವಚನ ಸಾಹಿತ್ಯ ಓದಲು ಪ್ರೇರೇಪಿಸಬೇಕು. ಮಕ್ಕಳಿಗೆ ಲಿಂಗಧಾರಣೆ, ಲಿಂಗಪೂಜೆ ಮಾಡುವಂತೆ ಸಲಹೆ, ಮಾರ್ಗದರ್ಶನ ಪಾಲಕರು ನೀಡಬೇಕಾಗಿದೆ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *