ದಾವಣಗೆರೆ
ಆಗಸ್ಟ್ 18ರಂದು ತರಳಬಾಳು ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶ್ರೀಗಳನ್ನು ಭೇಟಿ ಮಾಡಿ ಪೀಠ ತ್ಯಾಗ ಮಾಡಲು ಮನವಿ ಮಾಡಲು ತೀರ್ಮಾನಿಸಲಾಗಿದೆ.
ಶಾಸಕ ಶಾಮನೂರು ಶಿವಶಂಕರಪ್ಪರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಾದರ ಲಿಂಗಾಯತ ಒಕ್ಕೂಟದ ಸಮಾಲೋಚನಾ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಹಿಂದಿನ ಶ್ರೀಗಳು ವಿಲ್ ಮಾಡಿರುವಂತೆ ಹಾಗೂ ಬೈಲಾ ಪ್ರಕಾರ 60 ವರ್ಷ ದಾಟಿರುವ ತರಳಬಾಳು ಮತ್ತು ಸಾಣೇಹಳ್ಳಿ ಪೀಠಗಳಿಗೆ ನೂತನ ಪೀಠಾಧಿಪತಿಗಳ ನೇಮಕ ಆಗಬೇಕು ಎಂದು ಸಾದರ ಲಿಂಗಾಯತ ಸಮಾಜದ ಮುಖಂಡರು ಆಗ್ರಹಿಸಿದರು.
ತರಳಬಾಳು ಮತ್ತು ಸಾಣೇಹಳ್ಳಿಯ ಮಠಗಳಿಗೆ ಉತ್ತರಾಧಿಕಾರಿಗಳ ನೇಮಕವಾಗಬೇಕು ಮತ್ತು ಏಕವ್ಯಕ್ತಿ ದೀಡ್ ರದ್ದಾಗಲೇಬೇಕು. ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಬರೆದಿರುವ ವಿಲ್ ಹಾಗೂ ಅವರು ಇದ್ದಾಗ ಮಾಡಿದ್ದ ಬೈಲಾ ಯಥವಾತ್ತಾಗಿ ಜಾರಿಯಾಗಲೇಬೇಕಿದೆ ಎಂದು ಸದಸ್ಯರು ಒತ್ತಾಯಿಸಿದರು.
ಶಾಮನೂರು ಶಿವಶಂಕರಪ್ಪ ಮಾತನಾಡಿ ಬೆಂಗಳೂರಿನಲ್ಲಿ ಆಗಸ್ಟ್ 18ರಂದು ಸಿರಿಗೆರೆ ಶ್ರೀಗಳನ್ನು ಭೇಟಿ ಮಾಡಿ ಒಕ್ಕೂಟ ತೆಗೆದುಕೊಂಡ ನಿರ್ಣಯ ತಿಳಿಸೋಣ. ಅವುಗಳಿಗೆ ಶ್ರೀಗಳು ಬದ್ಧರಾಗದಿದ್ದರೆ ಮುಂದಿನ ನಡೆ ನಿರ್ಧರಿಸೋಣ ಎಂದು ಹೇಳಿದರು.
ಏಕವ್ಯಕ್ತಿ ಡೀಡ್ ಯಾರೂ ಸಹ ಒಪ್ಪಲ್ಲ. ಯಾರೋ ಒಬ್ಬರು ಮಾಡಿದ್ದನ್ನು ನೋಡಿ, ಉಳಿದವರು ಅದನ್ನು ಆರಂಭಿಸುತ್ತಾರೆ. ಅಂತಹದ್ದೆಲ್ಲಾ ಯಾವುದೇ ಸಮಾಜದಲ್ಲೂ ಆಗಬಾರದು. ಇದೇ ವಿಚಾರವನ್ನುದೊಡ್ಡದು ಮಾಡುವುದೂ ಬೇಡ. ಆ.18ಕ್ಕೆ ಬೆಂಗಳೂರಿನಲ್ಲಿ ಸಮಾಜದ ಪ್ರಮುಖರೆಲ್ಲಾ ಸೇರಿ, ಸ್ವಾಮೀಜಿ ಭೇಟಿ ಮಾಡಿ ಪೀಠ ತ್ಯಾಗ ಮಾಡುವಂತೆ, ಏಕವ್ಯಕ್ತಿ ಡೀಡ್ ರದ್ಧುಪಡಿಸಲು, ಶ್ರೀಮಠಕ್ಕೆ ಮರಿ ಅಥವಾ ಉತ್ತರಾಧಿಕಾರಿ ನೇಮಕ ಮಾಡುವಂತೆ ಮನವಿ ಮಾಡೋಣ ಎಂದು ಅವರು ತಿಳಿಸಿದರು.