ಬದುಕಿನಲ್ಲಿ ಸಿಹಿ, ಕಹಿ ಸಮನಾಗಿ ಸ್ವೀಕರಿಸಬೇಕು: ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ

ಬೇವು ಕಹಿಯನ್ನು ನೆನಪಿಸಿದರೆ ಬೆಲ್ಲ ಸಿಹಿಯನ್ನು ನೆನಪಿಸುವುದು. ಬದುಕು ಸಿಹಿ, ಕಹಿಗಳ ಸಮ್ಮಿಶ್ರಣ. ಸಿಹಿ ಬಂದಾಗ ಹಿಗ್ಗದೆ, ಕಹಿ ಬಂದಾಗ ಕುಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ತಾಲೂಕಿನ ಸಾಣೇಹಳ್ಳಿ ಶ್ರೀಮಠದ ಆವರಣದಲ್ಲಿ ಬುಧವಾರ ಭಕ್ತರೊಂದಿಗೆ ಯುಗಾದಿ ಹಾಗೂ ಅಲ್ಲಮಪ್ರಭು ಜಯಂತಿಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಚಂದ್ರದರ್ಶನ ನಮ್ಮೊಳಗೆ ಆಗಬೇಕು. ವರ್ಷಕ್ಕೊಮ್ಮೆ ಚಂದ್ರದರ್ಶನ ಮಾಡದೇ ಪ್ರತಿದಿನ ಬೆಳಕನ್ನು ಕಾಣಬೇಕು. ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಒಂದೊಂದು ಹಬ್ಬಕ್ಕೆ ಶರಣರ ಜಯಂತಿಯನ್ನು ಜೋಡಿಸಿ ಆಚರಣೆಗೆ ತಂದರು. ಶರಣರು ಗುಡಿ ಗುಂಡಾರಗಳನ್ನು ತಿರಸ್ಕರಿಸಿದರು. ದೇವಸ್ಥಾನ, ಗುಡಿಕಟ್ಟುವವರನ್ನು ನಾಯಕ‌ ನರಕಿಗಳಾಗುವರು ಎಂದು ಕಠೋರವಾಗಿ ಹೇಳಿದರು. ಆದ್ದರಿಂದ ಈ ದೇಹವೇ ದೇವಾಲಯವನ್ನಾಗಿ ಮಾಡಿಕೊಳ್ಳಬೇಕು.

ಭಾರತೀಯರಿಗೆ ಯುಗಾದಿಯೇ ಹೊಸ ವರ್ಷ. ಅಲ್ಲಿಂದಲೇ ನಮ್ಮ ಚಟುವಟಿಕೆಗಳು ಪ್ರಾರಂಭವಾಗುವುದು. ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳನ್ನು ಈ ಸಂದರ್ಭದಲ್ಲಿ ಕಾಣಬಹುದು. ‘ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎನ್ನುವಂತೆ ಗಿಡ ಮರಗಳು ಹಣ್ಣೆಲೆಗಳನ್ನು ಕಳಚಿಕೊಂಡು ಹೊಸ ಚಿಗುರೊಡೆದು ಪ್ರಕೃತಿಮಾತೆಗೆ ಹಸಿರು ಸೀರೆ ಉಡಿಸಿದಂತೆ ಕಾಣುವುದು. ಯುಗಾದಿಯ ಸಂದರ್ಭದಲ್ಲಿ ಬೇವಿನ ಸೊಪ್ಪನ್ನು ನೀರಲ್ಲಿ ಹಾಕಿ ಸ್ನಾನ ಮಾಡುವುದು, ಬೇವು-ಬೆಲ್ಲ ತಿನ್ನುವುದು ಪದ್ಧತಿ. ಬೇವಿನ ನೀರು ಅನೇಕ ಚರ್ಮರೋಗಗಳನ್ನು ವಾಸಿ ಮಾಡುವುದು.

ಭಾರತ ಹಲವು ಧರ್ಮ, ಜಾತಿ, ಭಾಷೆ, ಸಂಸ್ಕೃತಿ, ಜನಾಂಗಗಳ ಶಾಂತಿಯ ತೋಟ. ಇಲ್ಲಿ ಅನೇಕ ಹಬ್ಬ, ಹುಣ್ಣಿಮೆಗಳ ಆಚರಣೆ ಪರಂಪರೆಯಿಂದಲೂ ನಡೆದುಕೊಂಡು ಬಂದಿದೆ. ಇಂಥಹ ಹಬ್ಬಗಳಲ್ಲಿ ಭಾರತೀಯರ ಪಾಲಿಗೆ ತುಂಬಾ ಮಹತ್ವದ ಹಬ್ಬ ಯುಗಾದಿ. ಆ ಪದವೇ ಹೇಳುವಂತೆ ಆ ವರ್ಷದ ಮೊದಲ ದಿನ. ಯುಗ ಯುಗಗಳನ್ನು ಕಳೆದರೂ ಯುಗಾದಿ ಮತ್ತೆ ಮರಳಿ ಬರುತ್ತದೆ.

ನಮ್ಮ ಜನರು ಆಗಾಗ ಬಳಸುವ ಪದಗಳೆಂದರೆ ನಾಗರಿಕತೆ ಮತ್ತು ಸಂಸ್ಕೃತಿ. ಅವೆರಡರ ಸಮ್ಮಿಲನದಿಂದ ಆದರ್ಶ ಬದುಕಿಗೆ ಅಡಿಪಾಯ ಆಗಬೇಕಾಗಿತ್ತು. ಆದರೆ, ಇಂದು ನಾಗರಿಕತೆಯ ಅಬ್ಬರದಲ್ಲಿ ಸಂಸ್ಕೃತಿ ಕಣ್ಮರೆಯಾಗುವ ಪರಿಸ್ಥಿತಿ ಬರುತ್ತಿದೆ. ನಾಗರಿಕತೆ ಬಾಹ್ಯ ಬದುಕಿನ ವೈಭವದ ಪ್ರತೀಕವಾದರೆ ಸಂಸ್ಕೃತಿ ಆಂತರಿಕ ಆದರ್ಶ ಬದುಕಿನ ಕನ್ನಡಿ. ನಾಗರಿಕತೆ ಕೇವಲ ಬುದ್ಧಿಯನ್ನು ಅವಲಂಬಿಸಿದ್ದರೆ ಸಂಸ್ಕೃತಿ ಬುದ್ಧಿ, ಹೃದಯಗಳ ವಿದ್ಯುದಾಲಿಂಗನ. ಬುದ್ಧಿ, ಹೃದಯಗಳ ಸಮ್ಮಿಲನದಿಂದ ಮಾತ್ರ ನೆಮ್ಮದಿಯ ಬದುಕು ಸಾಧ್ಯ.

ಪ್ರಕೃತಿಮಾತೆ ಯಾವಾಗಲೂ ಸಂದೇಶ ಕೊಡುತ್ತಲೇ ಇರುವುದು. ಪ್ರಕೃತಿಯಲ್ಲಿ ಮಾನವನಂತೆ ದ್ವೇಷ, ಮತ್ಸರ, ಅಸೂಯೆ ಇತ್ಯಾದಿ ಇಲ್ಲ. ಅಲ್ಲಿ ಕೊಡುವುದು ಮಾತ್ರ ಇದೆ. ಕೊಟ್ಟೆನೆಂಬ ಅಹಂಭಾವ ಇಲ್ಲ. ಪ್ರಕೃತಿಮಾತೆ ಎಷ್ಟೆಲ್ಲ ಒಳಿತನ್ನು ಮಾಡಿದರೂ ನಾನು ಮಾಡಿದೆ ಎಂದು ಜಂಬ ಕೊಚ್ಚಿಕೊಳ್ಳುವುದಿಲ್ಲ. ಅದರಿಂದ ಮಾನವ ಪಾಠ ಕಲಿತರೆ ಮಾತ್ರ ನಮ್ಮ ಹಬ್ಬ ಹುಣ್ಣಿಮೆಗಳಿಗೆ ವಿಶೇಷ ಮೆರಗು, ಅರ್ಥ ಬರುವುದು. ಇಲ್ಲವಾದರೆ ಅವು ಸಹ ಸಾಂಪ್ರದಾಯಕ ಆಚರಣೆಗಳಾಗಿ ಕೊನೆಗೆ ಮನುಷ್ಯರನ್ನು ಮೂಢರನ್ನಾಗಿ, ಕಂದಾಚಾರಿಗಳನ್ನಾಗಿ ಮಾಡಬಹುದು.

ಮನುಷ್ಯ ಹಬ್ಬಗಳ ನೆಪದಲ್ಲಾದರೂ ದ್ವೇಷವನ್ನು ದೂರ ತಳ್ಳಿ ಪ್ರೀತಿ, ವಿಶ್ವಾಸ, ದಯೆ, ಕೃತಜ್ಞತಾ ಭಾವವನ್ನು ಅಳವಡಿಸಿಕೊಳ್ಳುವ ಸಂಕಲ್ಪ ತಳೆಯಬೇಕು. ಈ ಗುಣಗಳು ಹೊರಗಿನಿಂದ ಹಣ ಕೊಟ್ಟು ಕೊಳ್ಳುವಂತಹವುಗಳಲ್ಲ. ನಮ್ಮೊಳಗೇ ಇರುವ ಅಪಾರ ಸಂಪತ್ತು. ಆ ಸಂಪತ್ತನ್ನು ಸದ್ವಿನಿಯೋಗ ಮಾಡಿಕೊಂಡಾಗ ಬದುಕು ಹರ್ಷದಾಯಕವಾಗಲು ಸಾಧ್ಯ. ಯುಗಾದಿ ಹಬ್ಬದಲ್ಲಿ ಮೈ ಕೈಗಳಿಗೆಲ್ಲ ಎಣ್ಣೆ ಬಳಿದುಕೊಂಡು ಆಟ ಆಡಿ, ಸ್ನಾನ ಮಾಡುವರು. ನಂತರ ಹೊಸ ಬಟ್ಟೆಗಳನ್ನು ಧರಿಸಿ, ವಿವಿಧ ರೀತಿಯ ಆಹಾರ ಸ್ವೀಕರಿಸುವರು.

ಮಾನವ ಜಗಳ, ದ್ವೇಷ, ಅನುಮಾನ ಇನ್ನೇನೇನೋ ಕಾರಣದಿಂದ ಬಹುದಿನಗಳಿಂದ ಒಬ್ಬರ ಮುಖ ಒಬ್ಬರು ನೋಡದಿದ್ದರೂ ಚಂದ್ರದರ್ಶನ ಪಡೆದ ನಂತರ ಪರಸ್ಪರ ಕೈ ಕುಲುಕಿ, ಕೈ ಮುಗಿದು ಇಲ್ಲವೇ ಪಾದ ನಮಸ್ಕಾರ ಮಾಡಿ ವಿಶ್ವಾಸದಿಂದ ಬಾಳೋಣ ಎನ್ನುವ ಭಾವನೆ ಬೆಳೆಸಿಕೊಳ್ಳುವರು. ಯುಗಾದಿ ಹಬ್ಬ ಎಲ್ಲರ ಮನಸ್ಸುಗಳನ್ನು ಹಸನು ಮಾಡುವ, ಒಟ್ಟುಗೂಡಿಸುವ ಕಾರ್ಯ ಮಾಡುವುದು ಎಂದರು.

ಈ ಸಂದರ್ಭದಲ್ಲಿ ಎಸ್.ಆರ್. ಚಂದ್ರಶೇಖರಯ್ಯ, ಶಶಾಂಕ ಮಾತನಾಡಿದರು. ಎಸ್.ಎಸ್. ಪ್ರಕಾಶ್ , ಎಸ್. ಷಡಾಕ್ಷರಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *