‘ನೈತಿಕ ಬದುಕು ರೂಪಿಸುವ ಸರ್ವಜ್ಞ ವಚನಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

ನೈತಿಕ ಬದುಕು ರೂಪಿಸಲು ಸರ್ವಜ್ಞರ ವಚನಗಳು ಅವಶ್ಯಕವಾಗಿವೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಎಚ್.ಜಿ. ತಿಳಿಸಿದರು.

ಇಲ್ಲಿನ ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಅವರು ಲೀಲಾವಿಶ್ರಾಂತಿ ತಾಣದಲ್ಲಿ ಇತ್ತೀಚೆಗೆ ಶಿವಶರಣ ಸರ್ವಜ್ಞರ ಜಯಂತಿಯ ಅಂಗವಾಗಿ ಶರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ನೈತಿಕ ಶಿಕ್ಷಣದ ಕೊರತೆಯಿಂದಾಗಿ ಸಮಾಜದಲ್ಲಿನ ಆತಂಕಕಾರಿ ಘಟನೆಗಳು ಸಂಭವಿಸುತ್ತಿವೆ. ಸಮಾಜದ ಸುಧಾರಣೆಗೆ ಶರಣರ ವಚನಗಳು ಅವಶ್ಯಕವಾಗಿವೆ ಎಂದರು.

೧೨ನೇ ಶತಮಾನದ ವಚನ ಚಳವಳಿಯ ನಂತರ ವಚನಗಳನ್ನು ನಾಡಿನಾದ್ಯಂತ ಪಸರಿಸಿದವರು ಸರ್ವಜ್ಞರು. ಶರಣರ ಆಶಯಗಳನ್ನು ಕನ್ನಡ ಸಾಹಿತ್ಯದಲ್ಲಿ ತಂದು ರೂಪಿಸಿದರು. ೧೬-೧೭ನೇ ಶತಮಾನದ ಅವರು ಮುಖ್ಯ ಕವಿಯಾಗಿದ್ದರು. ಅವರು ಕವಿಯಾಗಿ, ವಾಸ್ತವತಾವಾದಿಯಾಗಿ, ಸಮಾಜ ಸುಧಾರಕರಾಗಿ ಬಹುವಿಶೇಷಣದ ವ್ಯಕ್ತಿಯಾಗಿದ್ದರು ಎಂದರು.

ಬಹುಶಃ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಆಯಾಮಗಳಿಂದ ಗುರುತಿಸಿಕೊಂಡಿವರು ಎಂದರೆ ಅದು ಸರ್ವಜ್ಞರು ಮಾತ್ರ ಎಂದು ಹೇಳಿದರೆ ತಪ್ಪಾಗಲಾರದು. ಅವರ ವಚನಗಳು ಸರಳ ಮತ್ತು ಜನ ಸಾಮಾನ್ಯರಿಗೂ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ರಚನೆಯಾಗಿವೆ. ಅವರ ಕಾಲಾಮಾನದ ಕುರಿತು ಲಿಖಿತ ರೂಪದಲ್ಲಿ ಯಾವುದೇ ದಾಖಲೆಗಳು ಲಭ್ಯವಿಲ್ಲ.

ನಮ್ಮ ಇಂದಿನ ಅನೇಕ ಪ್ರಶ್ನೆಗಳಿಗೆ ಸರ್ವಜ್ಞರ ವಚನಗಳಲ್ಲಿ ಉತ್ತರವನ್ನು ಕಾಣಬಹುದು. ಸರ್ವಜ್ಞರ ವಚನಗಳು ಸಮಾಜವನ್ನು ರೂಪಿಸುವ ನೆಲೆಗಟ್ಟಿನ ಒಳಗಡೆ ನಿರ್ಮಾಣವಾಗಿವೆ. ನಾವು ಮಕ್ಕಳಿಗೆ ನೈತಿಕ ಶಿಕ್ಷಣ, ಸಾಮಾಜಿಕ ಪ್ರಜ್ಞೆ ನೀಡುವಲ್ಲಿ ಹಿಂದೆ ಬಿದ್ದಿದ್ದೇವೆ. ಶರಣರ ವಚನಗಳು ಮಕ್ಕಳಲ್ಲಿ ನೈತಿಕ ಶಿಕ್ಷಣ, ಸಾಮಾಜಿಕ ಪ್ರಜ್ಞೆ ಎರಡನ್ನು ನೀಡುತ್ತವೆ. ನಾವು ಮಕ್ಕಳಿಗೆ ಮೊಬೈಲ್ ನೀಡುವ ಬದಲು ಶರಣರ ವಚನಗಳನ್ನು ನೀಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಾಹಿತ್ಯಿಕ ಹಾಗೂ ಧಾರ್ಮಿಕ ಪರಂಪರೆಗೆ ಒಂದು ಇತಿಹಾಸವಿದೆ. ಕರ್ನಾಟಕದಲ್ಲಿ ಸರ್ವಜ್ಞರು, ಆಂದ್ರಪ್ರದೇಶದಲ್ಲಿ ವೇಮನರು ಹಾಗೂ ತಮಿಳುನಾಡಿನಲ್ಲಿ ತಿರುವಳ್ಳುವರ್ ಈ ಮೂವರು ತ್ರಿಪದಿಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.

ದಾರ್ಶನಿಕರ ತತ್ವಗಳನ್ನು ಮುಖಾ-ಮುಖಿಯಾಗಿ ಮಾಡಿಕೊಳ್ಳದೇ ಮುಖವಾಣಿಯನ್ನಾಗಿ ಮಾಡಿಕೊಂಡರು. ಅವರ ತತ್ವಗಳನ್ನು ಅನುಸಂಧಾನ ಮಾಡಿಕೊಳ್ಳಬೇಕು. ಆರಾಧನ ಮಾರ್ಗ ಮಾಡಿಕೊಳ್ಳಬಾರದು. ಅನುಸಂಧಾನವೆಂದರೆ ಅವರ ತತ್ವಗಳನ್ನು ಅನುಸರಣೆ ಮಾಡಿಕೊಳ್ಳುವುದು. ಅನುಸಂಧಾನ ಮಾಡಿಕೊಂಡಲ್ಲಿ ಸಮಾಜದಲ್ಲಿ ಮೌಲ್ಯಗಳು ಉಳಿಯುತ್ತವೆ. ನಮ್ಮ ಕ್ರಿಯಾಶೀಲತೆಗೆ ಮೌಲ್ಯ ಬರಬೇಕಾದರೆ ತತ್ವಗಳನ್ನು ಅನುಸಂಧಾನ ಮಾಡಿಕೊಳ್ಳಬೇಕು ಎಂದರು.

೧೨ನೇ ಶತಮಾನದಲ್ಲಿ ೭೮೦ ವಚನಕಾರರಿದ್ದು ಅವರಲ್ಲಿ ಬಸವಣ್ಣನವರು, ಅಲ್ಲಮಪ್ರಭುಗಳು, ಅಕ್ಕಮಹಾದೇವಿಯವರು, ಚೆನ್ನಬಸವಣ್ಣನವರನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಆದರೆ ಉಳಿದ ವಚನಕಾರರು ವಿವಿಧ ಕಾಯಕದಲ್ಲಿ ತೊಡಗಿಕೊಂಡು ವಚನ ರಚಿಸಿದ್ದಾರೆ. ಅಂತಹ ವಚನಗಾರರನ್ನು ಅವರ ಕಾಯಕ ಸಮುದಾಯದ ಮೂಲಕ ಮುನ್ನೆಲೆಗೆ ತರುವ ಪ್ರಯತ್ನಗಳಾಗುತ್ತಿವೆ. ಇದು ಸಂಘಟನೆಯ ವಿಚಾರ. ಆದರೆ ಶರಣರನ್ನು ಒಂದು ಸಮುದಾಯ ಸಮಾಜಕ್ಕೆ ಮೀಸಲಾಗಿರಿಸದೇ ಅವರ ತತ್ವ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಡಾ. ವಿಜಯಕುಮಾರ್ ಉಪನ್ಯಾಸ ನೀಡಿದರು.

ಕುಂಬಾರ ಸಮಾಜದ ಮೃತ್ಯುಂಜಯಪ್ಪ ಮಾತನಾಡಿ, ಮುರುಘಾಮಠ ಎಲ್ಲಾ ಸಮುದಾಯದ ಶರಣರ ಜಯಂತಿಗಳನ್ನು ಆಯಾ ಸಮಾಜದವರಿಗೆ ವೇದಿಕೆ ಕಲ್ಪಿಸಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದೆ. ಇದು ಶ್ಲಾಘನೀಯ. ಕುಂಬಾರ ಗುಂಡಯ್ಯ ಜಯಂತಿಯನ್ನು ಸಹ ಈ ಹಿಂದೆ ಆಚರಿಸಲಾಗಿದೆ. ಶ್ರೀಮಠದ ಎಲ್ಲಾ ಸಮಾಜವನ್ನು ಮುನ್ನಲೆಗೆ ತರಲು ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜಾಪುರದ ಶೋಭಾ ತಾಯಿ, ಕುಂಬಾರ ಸಮಾಜದ ಯರಿಸ್ವಾಮಿ, ಡಾ. ಅರವಿಂದ್ ಟಿ.ವಿ., ಚುಟುಕು ಬರಹಗಾರರಾದ ಎಸ್.ಗಂಗಾಧರಪ್ಪ, ಎನ್.ಈಶ್ವರಪ್ಪ, ಜಾಗತಿಕ ಲಿಂಗಾಯಿತ ಮಹಾಸಭಾದ ಬಸವರಾಜ ಕಟ್ಟಿ, ಜಿ.ಸಿ. ಮಹಾಂತಮ್ಮ ಜಯಪ್ಪ, ಬೈಲಮ್ಮ, ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಸಿಬ್ಬಂದಿ, ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದರ್ಶನ್ ದೇವರು ವಚನ ಪ್ರಾರ್ಥನೆ, ಡಾ. ಲೋಕೇಶ್ ಎಚ್.ಜೆ. ನಿರೂಪಿಸಿ ಡಾ. ಚೇತನ್ ಎಸ್. ಸ್ವಾಗತಿಸಿ ವಂದಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *