ಕಲಬುರಗಿಯು ಬಸವಕಲ್ಯಾಣದ ಹೆಬ್ಬಾಗಿಲು. ಸಂಸ್ಕೃತಿ ಉತ್ಸವದ ನೆಪದಲ್ಲಿ ಇಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ.
ಬೆಂಗಳೂರು
ಇವನಾರವ, ಇವನಾರವ, ಇವನಾರವವೆಂದಿನಿಸದಿರಯ್ಯ,ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ.ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ.
(ಬಸವಣ್ಣನವರು)
ಪರಧರ್ಮ ಮತ್ತು ಪರವಿಚಾರಗಳನ್ನು ಸಹಿಸುವುದೆ ನಿಜವಾದ ಬಂಗಾರ.
(ಶ್ರೀವಿಜಯ)
ಧರ್ಮ ಇರಬೇಕಾದುದು ತತ್ವವಾಗಿ ಹೊರತು ನಿಯಮಾವಳಿಯಾಗಿ ಅಲ್ಲ. ಅದು ಕಡ್ಡಾಯ ನಿಯಮಗಳಾಗಿ ಮಾರ್ಪಾಡಾದ ಕೂಡಲೇ ಧರ್ಮ ಎನಿಸುವ ಅರ್ಹತೆ ಕಳೆದುಕೊಳ್ಳುತ್ತದೆ.
(ಡಾ ಬಿ.ಆರ್. ಅಂಬೇಡ್ಕರ್)
ಕಲಬುರಗಿಯು ಬಸವಕಲ್ಯಾಣದ ಹೆಬ್ಬಾಗಿಲು. ಶರಣಬಸವಪ್ಪನವರ ಕರ್ಮಭೂಮಿ ಮತ್ತು ಸೂಫಿಸಂತ ಖ್ವಾಜಾ ಬಂದೇನವಾಜ್‌ರ ಪ್ರಯೋಗ ಭೂಮಿ. ಕ್ರಿ.ಶ 1ನೇ ಶತಮಾನದಲ್ಲಿ ಚಿತ್ತಾಪೂರದ ಕನಗವಳ್ಳಿಯಲ್ಲಿ ನಿರ್ಮಿಸಲಾದ ಬೌದ್ಧ ಮಹಾಸ್ತೂಪವು ಸಾಮ್ರಾಟ್ ಅಶೋಕನ ಕಾಲದಲ್ಲಿ ಇದು ಬೌದ್ಧ ಭೂಮಿಯಾಗಿತ್ತು ಎಂಬುದನ್ನು ಸಾಕ್ಷೀಕರಿಸುತ್ತಿದೆ.
ಅತ್ಯಂತ ಪ್ರಾಚೀನ ಕಾಲದಿಂದಲೂ ಹಲವು ಧರ್ಮ, ಜಾತಿ, ಮತ, ಪಂಥ ಮತ್ತು ಭಾಷೆಗಳ ಸಮ್ಮಿಲನಕ್ಕೆ ನೆಲೆಮನೆಯಾಗಿದೆ. ಧಾರ್ಮಿಕ ಸಾಮರಸ್ಯ, ಸಹಬಾಳ್ವೆ, ಮತ ಸಮನ್ವಯತೆಗೆ ಪ್ರಸಿದ್ಧಿಯಾಗಿರುವ ಈ ನಾಡು¸ ಸಾಂಸ್ಕೃತಿಕ ಬಹುತ್ವಕ್ಕೂ ಹೆಸರುವಾಸಿಯಾಗಿದೆ. ಇಂಥ ಕಲ್ಬುರ್ಗಿಯನ್ನು ಇತ್ತೀಚಿಗೆ ಕೋಮುವಾದೀಕರಣಗೊಳಿಸುವ ನಿಷ್ಫಲ ಪ್ರಯತ್ನಗಳು ನಡೆಯುತ್ತಿವೆ.
ಸಂಸ್ಕೃತಿ ಉತ್ಸವದ ನೆಪ
ಉಗ್ರ ಹಿಂದುತ್ವವಾದಿಗಳು ಸಂಸ್ಕೃತಿ ಉತ್ಸವದ ನೆಪದಲ್ಲಿ ಏಕ ಸಂಸ್ಕೃತಿಯನ್ನು ಹೇರುತ್ತಾ ನಮ್ಮ ನಾಡಿನ ಭಾವೈಕ್ಯ ಪರಂಪರೆಯನ್ನು ಹಾಳು ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಉತ್ತರವೆಂಬಂತೆ ಕೆಲವು ಅಲ್ಪಸಂಖ್ಯಾತ ಮೂಲಭೂತವಾದಿಗಳು ಮತಾಂಧತೆಯಲ್ಲಿ ಮುಳುಗುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಕೋಮು ಚಟುವಟಿಕೆಗಳು ಪ್ರಭುತ್ವ ಪ್ರೇರಿತ ಅಧಿಕಾರದ ಮೂಲಕ ನಡೆಯುತ್ತಿವೆ.
ಈ ನಡೆಗಳು ನಮ್ಮ ಬದುಕನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. ಈಗಾಗಲೇ ಬಡತನ, ಅಪೌಷ್ಟಿಕತೆ, ಅನಿಯಂತ್ರಿತ ವಲಸೆ, ನಿರುದ್ಯೋಗ, ಪ್ರಾದೇಶಿಕ ಅಸಮಾನತೆ, ಮೌಢ್ಯಗಳಿಂದ ನಲುಗುತ್ತಿರುವ ಜನಸಮುದಾಯಗಳನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳುತ್ತಿವೆ.
ಕೋಮುವಾದಿಗಳ ಖೆಡ್ಡಾ
ಕೋಮುವಾದಿಗಳ ಆಕರ್ಷಕ ಮಾತುಗಳಿಗೆ ಮರುಳಾದ ನಮ್ಮ ಯುವಜನರು, ವಿಶೇಷವಾಗಿ ದಲಿತ, ಶೂದ್ರ ಮುಂತಾಗಿ ಹಿಂದುಳಿದ ಯುವಜನರು ಅವರು ತೋಡಿದ ಖೆಡ್ಡಾಗಳಿಗೆ ಬೀಳುತ್ತಿದ್ದಾರೆ. ಧಾರ್ಮಿಕ ದ್ವೇಷಗಳಿಂದ ಕೋಮುದಂಗೆಗಳಲ್ಲಿ ನಿರತರಾಗಿ ಕೇಸು ಹಾಕಿಸಿಕೊಂಡು ಒದ್ದಾಡುತ್ತಿದ್ದಾರೆ. ಹಿಂದೂ ನಾವೆಲ್ಲ ಒಂದು ಎನ್ನುತ್ತ ದಲಿತಾದಿ ಶೂದ್ರ ಬಡಮಕ್ಕಳನ್ನು ಮತಾಂಧತೆಯಲ್ಲಿ ಕೆರಳಿಸಿ ಅವರೆಲ್ಲರನ್ನು ಕ್ರಿಮಿನಲ್‌ಗಳಾಗಿಸುತ್ತಿದ್ದಾರೆ. ನಮ್ಮ ತರುಣ ಪೀಳಿಗೆ ಕೋಮುದ್ವೇಷದ ದಳ್ಳುರಿಗೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಸೌಹಾರ್ದ ಸಮಾವೇಶ
ಅದಕ್ಕಾಗಿ ದಿನಾಂಕ 17, 18 ಮತ್ತು 19 ಜನೆವರಿ ೨೦೨೫ರಂದು ಮೂರು ದಿವಸಗಳವರೆಗೆ ಕಲಬುರಗಿಯಲ್ಲಿ ರಾಜ್ಯ ಮಟ್ಟದ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ದಿನಾಂಕ 17-1-2025 ರಂದು ಸೌಹಾರ್ದ ಯಾತ್ರೆ. ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಮಹಾತ್ಮ ಬಸವೇಶ್ವರ ಮತ್ತು ಬಾಬಾಸಾಹೇಬರ ಪುತ್ಥಳಿ ಮಾರ್ಗವಾಗಿ ಖ್ವಾಜಾ ಬಂದೇನವಾಜ್ ದರ್ಗಾದವರೆಗೆ. “ನಮ್ಮ ನಡಿಗೆ ಶರಣ, ಸಂತ, ಸೂಫಿ ಪ್ರಜ್ಞೆಯೆಡೆಗೆ” ಘೋಷಣೆಯಡಿಯಲ್ಲಿ ವಾಹನ ಜಾಥಾ ನಡೆಯುತ್ತದೆ.
ದಿನಾಂಕ 18-1-2025 ರಂದು “ಭಾವೈಕ್ಯದ ಹೊನಲು: ಸಮನ್ವಯದ ಗಾಯನ ಗಮಲು” ಘೋಷಣೆಯಡಿ ದಿನವಿಡೀ ತತ್ವಪದ, ಸೂಫಿಪದ, ವಚನ ಗಾಯನ ಕಾರ್ಯಕ್ರಮ.
ದಿನಾಂಕ 19-1-2025 ರಂದು ದಿನವಿಡೀ “ಬಹುತ್ವ ಭಾರತದ ಜಾಗ್ರತ ಅಭಿಯಾನ” ನಾಡಿನೆಲ್ಲೆಡೆಯಿಂದ ಪರಮಪೂಜ್ಯರು, ಸರ್ವಧರ್ಮಗಳ ನೇತಾರರು, ವಿಚಾರವಾದಿಗಳು, ಸಾಮಾಜಿಕ ಕಾರ್ಯಕರ್ತರು, ಮಾನವಹಕ್ಕುಗಳ ಹೋರಾಟಗಾರರು, ಅಖಿಲ ಕರ್ನಾಟಕದ ದುಡಿಯುವ ಜನರು ಸಮಾವೇಶಗೊಂಡು ಸಮತೆ-ಮಮತೆಗಳ ಸಂದೇಶ ಸಾರಲಿದ್ದಾರೆ.
ನಾಡಿನ ವಿವಿಧ ಜಿಲ್ಲೆಗಳಿಂದ ಜಾಥಾ ಹೊರಟು ದಿನಾಂಕ 19-1-2025 ರಂದು ಕಲಬುರಗಿಯಲ್ಲಿ ಸಮಾವೇಶಗೊಳ್ಳುತ್ತವೆ. ಕಲಬುರಗಿಯನ್ನು ಕೋಮುವಾದಿಗಳ ಅಡ್ಡೆ ಮಾಡಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಲು ನೀವೂ ಬನ್ನಿರಿ. ಇದು ಜನಪರ ನಿಲುವುಳ್ಳ ಎಲ್ಲರ ಅಭಿಯಾನ. ಕಾಯಕಜೀವಿಗಳ ಸ್ವಾಭಿಮಾನದ ನಡಿಗೆ ಸಮತ್ವದೆಡೆಗೆ. ನಮ್ಮ ನಡೆ ಬಹುತ್ವ ಭಾರತ ಉತ್ಸವದೆಡೆಗೆ.

ಭಾಗವಹಿಸುತ್ತಿರುವ ಸಂಘಟನೆಗಳು
ಸೌಹಾರ್ದ ಕರ್ನಾಟಕ – ಜಾಗತಿಕ ಲಿಂಗಾಯತ ಮಹಾಸಭೆ – ಮಾನವ ಬಂಧುತ್ವ ವೇದಿಕೆ – ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ – ದಲಿತ ಹಕ್ಕುಗಳ ಸಮಿತಿ – ಮಾದಿಗ ದಂಡೋರ ಹೋರಾಟ ಸಮಿತಿ – ಕೋಲಿ ಕಬ್ಬಲಿಗ ಹೋರಾಟ ಸಮಿತಿ – ಸಂವಾದ ಕರ್ನಾಟಕ – ಎದ್ದೇಳು ಕರ್ನಾಟಕ – ದಲಿತ ಕಲಾ ಮಂಡಳಿ, ಗದಗ -ರಾಷ್ಟೀಯ ಬಸವದಳ – ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕೆ ಮಹಿಳಾ ಗಣ – ಸಮುದಾಯ, ಕರ್ನಾಟಕ -ಪ್ರಜ್ಞಾ ಕಾನೂನು ಸಲಹಾ ಸಮಿತಿ – ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ – ಮೇ ಸಾಹಿತ್ಯ ಮೇಳ -ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ – ಎಸ್.ಎಫ್.ಐ. – ಡಿ.ವೈ.ಎಫ್.ಐ.- ಸಿ.ಐ.ಟಿ.ಯು.- ಅಭಿಮತ ಮಂಗಳೂರು – ಭಾರತ ಜ್ಞಾನ ವಿಜ್ಞಾನ ಸಮಿತಿ – ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ- ಅಖಿಲ ಭಾರತ ಕಿಸಾನ ಸಭಾ – ಭಾರತೀಯ ಮಹಿಳಾ ಒಕ್ಕೂಟ – ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ -ಅಖಿಲ ಭಾರತ ಯುವಜನ ಒಕ್ಕೂಟ – ಭಾರತ ಖೇತ್ ಮಜ್ದೂರ್ ಯುನಿಯನ್ – ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘಟನೆ – ಕರ್ನಾಟಕ ಪ್ರಾಂತ ರೈತ ಸಂಘ – ಲಡಾಯಿ ಪ್ರಕಾಶನ – ಉದ್ಯೋಗ ಖಾತ್ರಿ ಕಾಯಕಜೀವಿಗಳ ಸಂಘಟನೆ – ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘಟನೆ (ಕೇಂದ್ರಿಯ ವಿಶ್ವವಿದ್ಯಾಲಯ) – ದಲಿತ ಸಂಘಟನೆಗಳ ಒಕ್ಕೂಟ – ಸಂವಿಧಾನಪರ ಸಂಘಟನೆಗಳ ಒಕ್ಕೂಟ – ಸಮಗ್ರ ಬಸವಪರ ಸಂಘಟನೆಗಳ ಒಕ್ಕೂಟ- ಕಾಯಕಜೀವಿಗಳ ಸಮಾಜ ಸಂಘಟನೆಗಳ ಒಕ್ಕೂಟ.