ಸಕಲ ಜೀವಾತ್ಮರಿಗೆ ಲೇಸು ಬಯಸುವ ತತ್ವವನ್ನ ಜಾತಿ ದ್ವೇಷ, ಕೋಮುವಾದ, ನಕಲಿ ದೇಶಭಕ್ತಿಯಿಂದ ಹಾಳು ಮಾಡುತ್ತಿದ್ದಾರೆ.
ಕಲಬುರಗಿ
ವಿಶ್ವಮಾನ್ಯ ಲಿಂಗಾಯತ ವಿಚಾರಧಾರೆ ವಿರುದ್ಧ ಲಿಂಗಾಯತ ಯುವಕರನ್ನೇ, ಅವರ ಶಕ್ತಿಯನ್ನೇ ದುರ್ಬಳಕೆ ಮಾಡಿಕೊಂಡು ಲಿಂಗಾಯತ ಧರ್ಮವನ್ನು ವಿನಾಶ ಮಾಡುವಂಥ ಷಡ್ಯಂತ್ರ ನಡೆಯುತ್ತಿದೆ, ಈ ಬಗ್ಗೆ ಲಿಂಗಾಯತ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದು ಆಳಂದ ತೋಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ಕಲಬುರಗಿಯಲ್ಲಿ ಈಚೆಗೆ ನಡೆದ ಬಹುತ್ವ ಸಂಸ್ಕೃತಿ ಭಾರತೋತ್ಸವದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಅರ್ ಎಸ್ ಎಸ್ ನವರು ಲಿಂಗಾಯತರನ್ನು, ವಿಶೇಷವಾಗಿ ಲಿಂಗಾಯತ ಯುವಕರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ತರಾಗಿದ್ದಾರೆ.
ಲಿಂಗಾಯತ ಇದೊಂದು ಸ್ವತಂತ್ರ ಧರ್ಮ, ಅವೈದಿಕ ಧರ್ಮ ಅನ್ನುವಂತ ಜಾಗೃತಿ ಹೋರಾಟ ನಡೆಯುತ್ತಿರುವಾಗ, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವಾಗ ಸಂಘ ಪರಿವಾರದವರು ಲಿಂಗಾಯತರಿಗೆಂದೇ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಹುನ್ನಾರ ಅವಶ್ಯವಾಗಿ ನಾವು ತಿಳಿದುಕೊಳ್ಳಬೇಕು.
ಸಾಂಸ್ಕೃತಿಕ, ತಾತ್ವಿಕ, ಐತಿಹಾಸಿಕ, ಧಾರ್ಮಿಕ ಅಧ್ಯಾತ್ಮಿಕವಾಗಿ ಎಲ್ಲಾ ರೀತಿಯಿಂದಲೂ ಲಿಂಗಾಯತರನ್ನು ಹಿಂದುತ್ವ ಗೊಳಿಸುವ, ಹಿಂದುತ್ವದ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ರಾಜಾರೋಷವಾಗಿ, ಬಹಿರಂಗವಾಗಿ ನಡೆಯುತ್ತಿದೆ. ಆದರೆ ಬಹಳ ದುಃಖದ ಸಂಗತಿಯೆಂದರೆ, ನಮ್ಮ ಲಿಂಗಾಯತ ಯುವಕರು ಅದಕ್ಕೆ ಬಲಿಯಾಗಿದ್ದಾರೆ. ಯುವಕರು ಅಷ್ಟೇ ಅಲ್ಲ ಅನೇಕ ಲಿಂಗಾಯತ ಮಠಾಧೀಶರು ಕೂಡ ಬಲಿಯಾಗಿದ್ದಾರೆ.
ಒಂದು ಜನಾಂಗ, ಸಮುದಾಯ, ಸಮಾಜವನ್ನು ನಾಶ ಮಾಡಬೇಕಾದರೆ ಶತ್ರುಗಳು ಮೂರು ಅಸ್ತ್ರಗಳನ್ನು ಉಪಯೋಗಿಸುತ್ತಾರೆ …
1 ಆ ಸಮಾಜದ ಇತಿಹಾಸ ತಿರುಚುವುದು.
2 ಆ ಸಮಾಜದ ಮಹಾಪುರುಷರ ಚರಿತ್ರೆ ವಿಕೃತಗೊಳಿಸುವುದು.
3 ಆ ಸಮಾಜದ ಮಹಾಪುರುಷರ ವಿಚಾರಧಾರೆಯಲ್ಲಿ ಕಲಬರಕೆ ಮಾಡುವಂಥದ್ದು.
ಈ ಮೂರು ಪ್ರಯೋಗಗಳು ಲಿಂಗಾಯತರು, ಲಿಂಗಾಯತ ಸಮಾಜ, ಸಮುದಾಯದ ಮೇಲೆ ಆಗಿದೆ ಮತ್ತು ಆಗುತ್ತಿದೆ.
ಸಾಂಸ್ಕೃತಿಕ ಭಯೋತ್ಪಾದಕರಾದ ಈ ಮನುವಾದಿಗಳು ನಮ್ಮ ಸಂಸ್ಕೃತಿಯನ್ನು, ನಮ್ಮ ಸಮಾನತೆಯ ಸ್ವಾತಂತ್ರ್ಯದ ವಿಚಾರಧಾರೆಯನ್ನು, ಸಕಲ ಜೀವಾತ್ಮರಿಗೆ ಲೇಸು ಬಯಸುವ ಮಹಾಮಾನವೀಯತೆಯ ವಿಚಾರವನ್ನು ಜಾತಿದ್ವೇಷ, ಕೋಮುವಾದ, ಸುಳ್ಳು-ನಕಲಿ ದೇಶಭಕ್ತಿ ಸಂಘಟನೆಗಳು ಹಾಗೂ ಅದರ ನಾಯಕರು ಕೂಡಿಕೊಂಡು ನಮ್ಮನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ನಾವೀಗ ಎಚ್ಚರಗೊಳ್ಳಬೇಕು.
ಇಲ್ಲದೆ ಹೋದರೆ ಸಂಘ ಪರಿವಾರದವರ ಶತ್ರುಗಳು ಕೇವಲ ಮುಸಲ್ಮಾನರಷ್ಟೇ ಅಲ್ಲ, ಮನುವಾದವನ್ನು ಒದ್ದು ಹೊರಬಂದ ಲಿಂಗಾಯತರೂ ಸಹ ಆಗಿದ್ದಾರೆ. ಲಿಂಗಾಯತರ ವಿರುದ್ಧವಾಗಿಯೂ ದ್ವೇಷ ಹುಟ್ಟಿಸುವ ಕಾರ್ಯ ನಡೆಯುತ್ತಿದೆ. ವಚನ ದರ್ಶನ ಪುಸ್ತಕದ ಮೂಲಕ ವಚನ ಸಾಹಿತ್ಯದಲ್ಲಿ ಕಲಬೆರಕೆ ಮಾಡುವಂಥದ್ದು ನಡೆದಿದೆ. ವಚನಗಳ ಮಹತ್ವ ಕಡಿಮೆ ಮಾಡುವಂತಹ ಕಾರ್ಯ ನಡೆದಿದೆ. ವಚನಗಳು ಸಂಸ್ಕೃತ-ವೇದಗಳ ಕಾಪಿ ಎಂದು ಅವರು ಹೇಳುತ್ತಿದ್ದಾರೆ.
ಈ ರೀತಿಯಾಗಿ ಇತಿಹಾಸ ತಿರುಚುವವರನ್ನು, ಇತಿಹಾಸ ತಿರುಚಿ ಜನಾಂಗೀಯ ದ್ವೇಷ ಹುಟ್ಟಿಸುವಂಥವರ ಕುರಿತು ಮಹಾಮಾನವತಾವಾದಿ ಜ್ಯೋತಿಬಾ ಫುಲೆ ಅವರು ಒಂದು ಮಾತು ಹೇಳಿದ್ದಾರೆ, ಅಂಥವರನ್ನು “ಕಲಂ ಕಸಾಯಿ”ಗಳು ಎಂದು ಫುಲೆ ಕರೆದಿದ್ದಾರೆ. ಅಂದರೆ “ಪೆನ್ನಿನಿಂದ ಕೊಲ್ಲುವಂತಹ ಕಟುಕರು” ಎಂದಿದರರ್ಥ.
ನಿಜ ಇತಿಹಾಸವನ್ನು ತಿರುಚಿ, ಅಳಿಸಿ ಶಿವಾಜಿ ಮಹಾರಾಜ, ಟಿಪ್ಪು ಸುಲ್ತಾನರ ಇತಿಹಾಸ ಇರಬಹುದು, ಅನೇಕ ಲಿಂಗಾಯತ ಮನೆತನಗಳ ಇತಿಹಾಸ ಇರಬಹುದು, ಸೂಫಿ ಸಂತರ ಇತಿಹಾಸ ಇರಬಹುದು, ಈ ಎಲ್ಲ ಇತಿಹಾಸಗಳಲ್ಲಿ ಕಲಂ ಕಸಾಯಿಗಳು ಕೈ ಆಡಿಸಿ, ಜನಾಂಗದ್ವೇಷ, ಕೋಮುವಾದ ಹುಟ್ಟಿಸಿ, ಹಬ್ಬಿಸಿ ನಾವೇ ನಿಜವಾದ ದೇಶಭಕ್ತರೆಂದು ಸೃಷ್ಟಿಸುತ್ತಿದ್ದಾರೆ, ಬರೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರಿಂದ ನಾವು ಎಚ್ಚರಾಗಬೇಕು, ವಿಶೇಷವಾಗಿ ಲಿಂಗಾಯತರು ಎಂದರು.
ನಾವು ಎಚ್ಚರವಾಗದಿದ್ದರೆ ನಮ್ಮ ಬಸವಾದಿ ಶರಣರ, ಲಿಂಗಾಯತ ಸಂಸ್ಕೃತಿ, ಆಚಾರ, ವಿಚಾರ ಮತ್ತು ಪರಂಪರೆ ಎಲ್ಲವೂ ನಾಶವಾಗುವ ಹಂತ ತಲುಪುತ್ತದೆ ಎಂದು ಕೊರಣೇಶ್ವರ ಶ್ರೀಗಳು ನೆರೆದವರನ್ನು ಕಳಕಳಿಯಿಂದ ಎಚ್ಚರಿಸಿದರು.