ಮುರಗೋಡ (ಬೈಲಹೊಂಗಲ)
ಷಟಸ್ಥಲ ಚಕ್ರವರ್ತಿ, ಅವಿರಳ ಜ್ಞಾನಿ ಚೆನ್ನಬಸವಣ್ಣನವರ ಜಯಂತಿಯನ್ನು ಶನಿವಾರ ಮಲ್ಲೂರು, ಚಿಕ್ಕೊಪ್ಪ, ಹೊಸೂರು, ಮಾಟೊಳ್ಳಿ ಹಾಗೂ ಕೋರಿಕೊಪ್ಪ ಗ್ರಾಮಸ್ಥರು ಅರ್ಥಪೂರ್ಣವಾಗಿ ಆಚರಿಸಿದರು.
ಈ ಎಲ್ಲ ಗ್ರಾಮಗಳವರು ತಮ್ಮ ತಮ್ಮ ಗ್ರಾಮಗಳಲ್ಲಿ ತಲೆಯ ಮೇಲೆ ಚೆನ್ನಬಸವಣ್ಣನವರ ಹಾಗೂ ಬಸವಾದಿ ಶರಣರ ವಚನ ಸಾಹಿತ್ಯವನ್ನು ಹೊತ್ತುಕೊಂಡು, ಶರಣರ ಭಾವಚಿತ್ರಗಳನ್ನು ಹಿಡಿದುಕೊಂಡು ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
770 ಅಮರಗಣಂಗಳಿಗೆ ಜಯವಾಗಲಿ, ಚಿನ್ಮಯಜ್ಞಾನಿ ಚೆನ್ನಬಸವಣ್ಣನವರಿಗೆ ಜಯವಾಗಲಿ, ಬಸವಾದಿ ಶರಣರಿಗೆ ಜಯವಾಗಲಿ ಎಂದು ಜಯಘೋಷಗಳನ್ನು ಹಾಕುತ್ತಾ, ವಚನಗಳನ್ನು ಹಾಡುತ್ತಾ ಸಾಗಿದರು. ಮಲ್ಲೂರು ಗ್ರಾಮಸ್ಥರು ಮೆರವಣಿಗೆಗೆ ಮುನ್ನ ಚೆನ್ನಬಸವಣ್ಣನವರ ದೇವಸ್ಥಾನದಲ್ಲಿ ನೆರೆದು ಚೆನ್ನಬಸವಣ್ಣ ಹಾಗೂ ಬಸವಾದಿ ಶರಣರ ವಚನ ಪ್ರಾರ್ಥನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯ ನಂತರ ಎಲ್ಲ ಗ್ರಾಮಸ್ಥರು ಸೇರಿಕೊಂಡು ವಾಹನದ ಮುಖಾಂತರ 10ಕಿ.ಮೀ ದೂರವಿರುವ, ಉಳಿವಿಯ ಹೆಬ್ಬಾಗಿಲು ಎಂದು ಹೆಸರು ಪಡೆದ ಮಹಾಂತಜ್ಜನ ಮುರಗೋಡು ಗ್ರಾಮಕ್ಕೆ ಬಂದು ಸೇರಿದರು. ಅಲ್ಲಿ ಉಳಿವಿಯ ಹೆಬ್ಬಾಗಿಲು (ದ್ವಾರ ಬಾಗಿಲು) ಸ್ಥಳದಲ್ಲಿ ಸಮಾವೇಶ ನಡೆಸಿದರು. ಸಮಾವೇಶದ ಮೊದಲಿಗೆ ಶರಣ ಮಹದೇವಪ್ಪ ವಾಲಿ ಅವರು ಷಟಸ್ಥಲ ಧ್ವಜಾರೋಹಣ ಗೈದರು.
ಶರಣರಾದ ಶಿವಾನಂದ ಅರಬಾವಿ, ಎಂ.ಎಂ. ಸಂಗೊಳ್ಳಿ, ಪುಂಡಲೀಕ ಇಂಗಳಗಿ, ರಾಯಪ್ಪ ಸಣ್ಣಮನಿ, ಈರಣ್ಣ ಬಾನಿ, ಗೌರವ್ವ ಪಟಾತ ಮತ್ತೀತರರು ಅನುಭಾವ ಗೈದು, ಚನ್ನಬಸವಣ್ಣನವರ ಹಾಗೂ ಬಸವಾದಿ ಶರಣರ ವಿಚಾರಗಳ ಚಿಂತನೆಗೈದರು.
ನಂತರದಲ್ಲಿ ಎಲ್ಲಾ ಗ್ರಾಮಗಳ ಶರಣ, ಶರಣೆಯರು ಸೇರಿಕೊಂಡು ಮುರಗೋಡದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ವಾಲಿಯವರ ತೋಟದ ಮನೆಯವರೆಗೂ ನಡೆಯಿತು. ಅಲ್ಲಿಯೇ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರಸಾದ ಸ್ವೀಕರಿಸಿದ ಶರಣ, ಶರಣೆಯರು ಮರಳಿ ತಮ್ಮತಮ್ಮ ಗ್ರಾಮಗಳಿಗೆ ತೆರಳಿದರು.