ಬೈಲಹೊಂಗಲದಿಂದ ಉಳವಿಗೆ 160 ಕಿಮೀ ಪಾದಯಾತ್ರೆ ಮುಗಿಸಿದ ಶರಣ ತಂಡ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಉಳವಿ

ಬೈಲಹೊಂಗಲ ತಾಲೂಕಿನ ನೇಗಿ‌ನಹಾಳ ಹಾಗೂ ಹಾಗೂ ಪಟ್ಟಿಹಾಳ ಕೆ.ಎಸ್. ಗ್ರಾಮದ ಶರಣ ಬಳಗ ಪ್ರತಿ ವರ್ಷದಂತೆ ಈ ಭಾರಿಯೂ ಉಳಿವಿಗೆ ಪಾದಯಾತ್ರೆ ನಡೆಸಿದರು.

ಇವರ ಪಾದಯಾತ್ರೆ ನೇಗಿನಾಳ ಗ್ರಾಮದ ಚೆನ್ನಬಸವೇಶ್ವರ ಜ್ಞಾನ ಮಂಟಪದಿಂದ ಆಗಸ್ಟ್ 22 ಪ್ರಾರಂಭಗೊಂಡು, ಸುಮಾರು 160 ಕಿ.ಮೀ. ನಡಿಗೆ ಮಾಡಿ ಆಗಸ್ಟ್ 25 ರಾತ್ರಿ ಉಳಿವಿಗೆ ಬಂದು ತಲುಪಿತು.

ಮರುದಿನ ಶ್ರಾವಣ ಸೋಮವಾರದಂದು ಉಳವಿ ಪವಿತ್ರ ಕ್ಷೇತ್ರದಲ್ಲಿ ಎಲ್ಲರೂ ಸಾಮೂಹಿಕ ಇಷ್ಟಲಿಂಗ ಪೂಜೆ, ಅನುಭಾವ ಮಾಡಿ ಹಾಗೂ ಮಹಾಪ್ರಸಾದ ಸೇವಿಸಿ, ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.

ಪಾದಯಾತ್ರೆ ಮಾಡುವ ಸಮಯದಲ್ಲಿ ಪ್ರತಿಯೊಬ್ಬರೂ ವಚನಗಳ ಹಾಡುವುದು, ವಚನಗಳ ವಿಶ್ಲೇಷಣೆ ಮಾಡುವುದು, ಇಷ್ಟಲಿಂಗ ಪೂಜೆ, ಶಿವಯೋಗ, ಬಸವತತ್ವ ಸಂಸ್ಕಾರ ಮಾಡಿದೆವು. ಇದರಿಂದ ಬಸವಾದಿ ಶರಣರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತೆಂದು ಪಾದಯಾತ್ರೆಯಲ್ಲಿ ಭಾಗವಹಿಸಿದ ಶರಣ ಮಡಿವಾಳಪ್ಪ ಮಡಿವಾಳರ ಅಭಿಪ್ರಾಯಪಟ್ಟರು.

ತಂಡದ ನೇತೃತ್ವ ವಹಿಸಿದ್ದ ಪತ್ರಕರ್ತ ಶರಣ ಶಿವಾನಂದ ಮೆಟ್ಯಾಲ ಪಾದಯಾತ್ರೆ ಧೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕಾರಿಯಾಗುತ್ತದೆ. “ಪಾದಯಾತ್ರೆಯ ಸಂದರ್ಭದಲ್ಲಿ ನಾವೆಲ್ಲ ಚನ್ನಬಸವಣ್ಣನವರ ಷಟಸ್ಥಲ, ಅಷ್ಟಾವರಣ, ಪಂಚಾಚಾರ ಮಾರ್ಗಗಳ ಕುರಿತು ಚರ್ಚಿಸುತ್ತ ಸಾಗಿದ್ದೆವು. ಇದು ನಮ್ಮೊಳಗೆ ಲಿಂಗಾಯತ ಧರ್ಮ, ಶರಣರ ಬಗ್ಗೆ ಹೆಚ್ಚು ಅರಿಯಲು ಸಾಧ್ಯವಾಗುತ್ತದೆ. ಬಸವತತ್ವ ಹಾಗೂ ಲಿಂಗಾಯತ ಧರ್ಮದ ಪ್ರಸಾರ ಮಾಡುವ ಮಾರ್ಗಗಳಲ್ಲಿ ಇದು ಸಹ ಒಂದೆಂದು,” ಹೇಳಿದರು.

ಪಾದಯಾತ್ರೆ ತಂಡದಲ್ಲಿ ಬಸವರಾಜ ಮೆಟ್ಯಾಲ, ಚಂದ್ರಶೇಖರ ಘಂಟೆ, ರುದ್ರಪ್ಪ ಬಡಿಗೇರ, ಈರಪ್ಪ ಗಂಗಣ್ಣವರ, ನಾಗಪ್ಪ ದಾನಣ್ಣವರ, ಬಸವರಾಜ ಚಳಕೊಪ್ಪ, ಗುರುಶಾಂತ ಚಳಕೊಪ್ಪ, ಬಸವರಾಜ ಗಂಗಣ್ಣವರ, ಸಿದ್ದಪ್ಪ ಗರಗದ, ಸಿದ್ದಪ್ಪ ಮರಿತಮ್ಮನವರ ಹಾಗೂ ನೇಗಿನಹಾಳ, ಪಟ್ಟಿಹಾಳ ಗ್ರಾಮದ ಹಲವಾರು ಶರಣರು ಇದ್ದರು.

ಬಸವಾದಿ ಶರಣರಲ್ಲಿ ಪ್ರಮುಖರಾದ ಅವಿರಳಜ್ಞಾನಿ ಶ್ರೀ ಚನ್ನಬಸವಣ್ಣನವರ ಪವಿತ್ರ ಉಳವಿ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ವರ್ಷದಂತೆ ಈ ವರ್ಷವೂ ನಾಡಿನ ಸಾವಿರಾರು ಜನ ನಡೆಸುತ್ತಿದ್ದಾರೆ.

ಸಾಮಾನ್ಯವಾಗಿ ಉಳವಿ ಚೆನ್ನಬಸವಣ್ಣನವರ ಕ್ಷೇತ್ರಕ್ಕೆ ಪ್ರತಿವರ್ಷದ ಶ್ರಾವಣ, ಕಾರ್ತಿಕ, ಹಾಗೂ ಭಾರತ ಹುಣ್ಣಿಮೆಯಂದು ಲಕ್ಷಾಂತರ ಜನ ಪಾದಯಾತ್ರೆ ಕೈಗೊಳ್ಳುವ ಮೂಲಕ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಾರೆ.

Share This Article
2 Comments
  • ಬಸವ ಮೀಡಿಯ ಅಂತಜಾ೯ಲ ಸುದ್ದಿ ಚೆನ್ನಾಗಿ ಬರುತ್ತಿದೆ. ಒಳಿತಾಗಲಿ ಶರಣು ಶರಣಾಥಿ೯ಗಳು ಸರ್ 🙏🙏

Leave a Reply

Your email address will not be published. Required fields are marked *