ಧಾರವಾಡ
ಮಾನವನ ಬದುಕು ಅವನ ಮನಸ್ಸಿನ ತಳಹದಿ ಮೇಲೆ ಕಟ್ಟಲ್ಪಟ್ಟಿದೆ, ಅವನ ಎಲ್ಲ ಬಗೆಯ ಚಟುವಟಿಕೆಗಳಿಗೆ ಮನಸ್ಸೇ ಪ್ರೇರಕ, ತಾರಕ, ಮಾರಕ ಅದು ಮನುಷ್ಯನ ಅಸ್ತಿತ್ವದ ಮೂಲವಾಗಿದೆ ಎಂದು ಮೈಸೂರಿನ ಶ್ರೀ ಕುಂದೂರಮಠದ ಡಾ. ಶರತಚ್ಚಂದ್ರ ಸ್ವಾಮಿಜಿ ಅಭಿಪ್ರಾಯಪಟ್ಟರು.
ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಸವ ಕೇಂದ್ರದ ನಿತ್ಯ ವಚನೋತ್ಸವದ ಮಂಗಲೋತ್ಸವ ಸಮಾರಂಭದಲ್ಲಿ ವಚನ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಸಾನಿಧ್ಯವಹಿಸಿ ಮಾತನಾಡಿದರು.

ಮನಸ್ಸಿನ ಸ್ವರೂಪ ಕಾರ್ಯ ಅದರ ಚಂಚಲತೆ ವಿಕಾರ ಒಳಿತು ಕೆಡಕು ಸುಗುಣ ದುರ್ಗುಣ ಹಿರಿಮೆ ಗರಿಮೆಗಳೆಲ್ಲ ಲೋಕವ್ಯವಹಾರಕ್ಕೆ ಮಾತ್ರ. ದೇಹ ಶುಚಿತ್ವಗೊಂಡರೆ ಸಾಲದು, ಮನಸ್ಸು ಪವಿತ್ರವಾಗುವಂತೆ ಮಾಡಲು ಆಧ್ಯಾತ್ಮದ ಸ್ಪರ್ಶ ನೀಡಬೇಕು. ದೇಹ ಮತ್ತು ಮನಸ್ಸು ಚೆನ್ನಾಗಿದ್ದರೆ ಸದೃಢ ಸಶಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ಮಕ್ಕಳಿಗೆ ಬಸವ ಸಂಸ್ಕಾರದ ಅರಿವು ಮೂಡಿಸುವ ಕೆಲಸ ಮಾಡೋಣ ಎಂದರು.
ಸಂಶೋದಕ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿ ಕ್ರೀಯಾಮೂರ್ತಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಮಾತು ಜಗತ್ತಿನ ಅದ್ಭುತಗಳಲ್ಲಿ ಒಂದಾಗಿದ್ದು, ಅದು ಮನುಷ್ಯನಿಗೆ ಮಾತ್ರ ದೊರೆತ ಅಮೂಲ್ಯ ವರವಾಗಿದೆ. ಹೀಗಾಗಿ ತನ್ನೆಲ್ಲ ವಿಚಾರಗಳ ಪ್ರಚಾರಕ್ಕೆ ಪ್ರಸಾರಕ್ಕೆ ಅದನ್ನು ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾನೆ. ಬಸವಾದಿ ಶರಣರ ಆಶಯದಂತೆ ನಮ್ಮ ಮಾತು ಕೃತಿ ಒಂದಾಗಬೇಕು, ನಡೆ ನುಡಿ ಸಾಮರಸ್ಯಗೊಳ್ಳಬೇಕು, ಸತ್ಯವೇ ನಮ್ಮ ತಂದೆ ತಾಯಿ, ವಚನ ಸಾಹಿತ್ಯವೇ ನಮ್ಮ ಬಂಧು ಬಳಗ ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮ ಎಂಬುದನ್ನು ಅರಿತು ನಾವೆಲ್ಲರೂ ಬಾಳಿದಾಗ ಮಾತ್ರ ಈ ನಾಡು ಕಲ್ಯಾಣ ರಾಜ್ಯವಾಗುತ್ತದೆ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ. ಕೊಂಗವಾಡ, ಸಾಹಿತಿ ಜಿ.ಎ. ತಿಗಡಿ, ಡಾ. ಎಸ್.ಆರ್. ಜಂಬಗಿ, ರವಿಕುಮಾರ ಕಗ್ಗಣ್ಣವರ, ಕಾಂತಿಲಾಲ ಮೆಹತಾ, ಗಿರಿಜಾ ನರೆಗಲ್ ವೇದಿಕೆಯಲ್ಲಿದ್ದರು.
ಬಸವ ಕೇಂದ್ರ ಅಧ್ಯಕ್ಷ ಸಿದ್ರಾಮಣ್ಣ ನಡಕಟ್ಟಿ ಆಶಯ ನುಡಿಯನ್ನಾಡಿದರು. ಸಂಗೀತಾ ಮಠಪತಿ ನಿರೂಪಿಸಿದರು, ಬಸವಂತ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿವರುದ್ರಗೌಡ ಪಾಟೀಲ ಸ್ವಾಗತಿಸಿ, ವಂದಿಸಿದರು.
ಸಮಾರಂಭದಲ್ಲಿ ಡಾ. ಶರತಚ್ಚಂದ್ರ ಸ್ವಾಮಿಜಿ ಅವರು ವಚನ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಕ್ರಿಯಾ ಯಮೂರ್ತಿಗಳಿಗೆ ಪ್ರಮಾಣ ಪತ್ರ, ಮತ್ತು ದಾಸೋಹಿಗಳಿಗೆ, ಸಂಚಾಲಕರಿಗೆ ಗೌರವ ಸತ್ಕಾರ ನೆರವೇರಿಸಿದರು.
ಶರಶ್ಚಂದ್ರ ಶ್ರೀಗಳು ಶರಣ ತತ್ವಸಿದ್ದಾಂತಗಳ ಅದ್ಯಯನಕಾರರೂ ಹೌದು..ಅವರಿಗೆ ಶರಣಾರ್ಥಿಗಳು