ಮುಖ್ಯಮಂತ್ರಿಗಳೇ, ಕಾಂಗ್ರೆಸ್ಸಿಗರೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿಬಿಟ್ಟರೆ ಮುಗಿಯುವುದಿಲ್ಲ, ಬಸವಣ್ಣನವರಿಗೆ ಅವಮಾನಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು
ಬಳ್ಳಾರಿ
ಲಿಂಗಾಯತ ಧರ್ಮ ಸಂಸ್ಥಾಪಕ, ವಿಶ್ವಗುರು ಬಸವಣ್ಣನವರನ್ನು ನಿಂದಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನಡೆ ಖಂಡಿಸಿ, ರಾಷ್ಟ್ರೀಯ ಬಸವದಳ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಬಳ್ಳಾರಿ ಅಂದ್ರಾಳು ಬಸವ ಮಂಟಪದಲ್ಲಿ ಪ್ರತಿಭಟನಾ ಸಭೆ ನಡೆದು ತೀವ್ರ ಆಕ್ರೋಶ ವ್ಯಕ್ತವಾಯಿತು.
ಯತ್ನಾಳ್ ಅವರು ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದುಕೊಂಡು ಬಸವಭಕ್ತರಲ್ಲಿ ಕ್ಷಮೆಯಾಚಿಸಬೇಕು. ಇಲ್ಲದೇ ಹೋದರೆ ವಿಜಯಪುರದ ನಿಮ್ಮ ಮನೆಗೆ ಬಂದು ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಯತ್ನಾಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಲಾಯಿತು.
ಸಭೆಯಲ್ಲಿ ಮಾತನಾಡಿದವರು, ಯತ್ನಾಳರನ್ನು ಸೇರಿಸಿಕೊಂಡ ಪಕ್ಷ ಹಾಗೂ ಅವರನ್ನು ಉಳಿಸಿಕೊಂಡ ಪಕ್ಷ ನೆಲ ಕಚ್ಚಿ ಹೋಗುತ್ತದೆ. ಮುಖ್ಯಮಂತ್ರಿಗಳೇ, ಕಾಂಗ್ರೆಸ್ಸಿಗರೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿಬಿಟ್ಟರೆ ಮುಗಿಯುವುದಿಲ್ಲ, ಬಸವಣ್ಣನವರಿಗೆ ಅವಮಾನಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಅವರ ತತ್ವ ಪ್ರಚಾರ ಮಾಡಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಕಾರೇಕಲ್ಲು ಬಸವನಗೌಡ ಹೇಳಿದರು.
ಪ್ರಪ್ರಥಮ ಪಾರ್ಲಿಮೆಂಟ್ ಹುಟ್ಟಾಕಿದವರು ಬಸವಣ್ಣನವರು. ಬಸವಣ್ಣನವರ ಇತಿಹಾಸ ತಿಳಿಯದ, ವಚನ ಸಾಹಿತ್ಯ ಓದದ ಬುದ್ಧಿಗೇಡಿ ಯತ್ನಾಳ ನೀನು, ಇನ್ನಾದರೂ ತಿಳಿದುಕೋ, ಇಲ್ಲದೇ ಹೋದರೆ ನಿನಗೆ ತಕ್ಕ ಶಾಸ್ತಿಯನ್ನು ಸರಕಾರ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದು ಜೆಎಲ್ಎಂ ಮುಖಂಡ ಹೆಚ್. ಗಾಳೇಶಪ್ಪ ಹೇಳಿದರು.

ಯತ್ನಾಳರೇ ಬಸವಣ್ಣನವರ ಜೀವನ ಚರಿತ್ರೆ ನಿಮಗೆ ಗೊತ್ತಿಲ್ಲದಿದ್ದರೆ ಬಾ ಇಲ್ಲಿ. ನಮ್ಮ ವಿದ್ಯಾಪೀಠದ ಮಕ್ಕಳು ಹೇಳಿಕೊಡುತ್ತಾರೆ, ಅದನ್ನು ಕೇಳಿಯಾದರು ತಿಳಿದುಕೊ ಎಂದು ರಾಷ್ಟ್ರೀಯ ಬಸವದಳದ ಮುಖಂಡ ಸುರೇಶ ಹೇಳಿದರು.
ಮುಖಂಡರಾದ ಶರಣ ಶಿವಕುಮಾರ, ದುರ್ಗಣ್ಣ, ಜೆ. ತಿಪ್ಪೇಸ್ವಾಮಿ, ಎಸ್. ನಾಗಲಿಂಗಪ್ಪ, ಬಂಡೂರು ಬಸವನಗೌಡ, ಶಿವಕುಮಾರ, ಶರಣೆಯರಾದ ಬಂಡೂರು ಸರ್ವಮಂಗಳ, ಹೆಚ್. ಗೌರಿ, ಶಿವಗಂಗಮ್ಮ ಮತ್ತಿತರರು ಮಾತನಾಡುತ್ತ, ಯತ್ನಾಳ್ ಅವರೇ ಮಾತು ವಾಪಸ್ ಪಡೆದುಕೊಂಡು, ನಾಡಿನ ಜನತೆಯ ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ನಾವೆಲ್ಲ ನಿಮ್ಮ ಮನೆಗೆ ಬಂದು, ಮನೆಯ ಬುನಾದಿ ಕಲ್ಲುಗಳನ್ನೇ ಕಿತ್ತು ಹಾಕಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳನ್ನು ಆಡಿದರು.
ರಾಷ್ಟ್ರೀಯ ಬಸವದಳದ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯರು ಮತ್ತು ಬಸವ ಧರ್ಮಜ್ಞಾನ ವಿದ್ಯಾಪೀಠದ ಶಿಕ್ಷಕ ವೃಂದದ ಹಲವಾರು ಶರಣ, ಶರಣೆಯರು ಸಭೆಯಲ್ಲಿ ಭಾಗವಹಿಸಿದ್ದರು.