ಸಂಗಮನಾಥನ ಬಂಗಾರ ಕಳಸದ ದರ್ಶನ ಪಡೆದ ಭಕ್ತರು

ಕೂಡಲಸಂಗಮ:

ವರ್ಷಕ್ಕೆ ಮೂರು ದಿನ ಮಾತ್ರ ಭಕ್ತರ ದರ್ಶನಕ್ಕೆ ದೊರೆಯುವ ಸಂಗಮನಾಥನ ಕಳಸಕ್ಕೆ ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸಿ ದರ್ಶನ ಪಡೆದರು. ಕೆಲವು ಭಕ್ತರು ಬಂಗಾರದ ಕಳಸ ಹೊತ್ತು ನಡೆದರೆ ಇನ್ನೂ ಕೆಲವರು ಸ್ಪರ್ಶಿಸಿ ಸಂಭ್ರಮ ಪಟ್ಟರು.

ಬಾಗಲಕೋಟೆ ಜಿಲ್ಲಾ ಖಜಾನೆಯಲ್ಲಿ ವರ್ಷವಿಡಿ ಭದ್ರತೆಯಲ್ಲಿರುವ ಸಂಗಮೇಶ್ವರ ಬಂಗಾರ ಕಳಸವು ಜಾತ್ರೆಯ ನಿಮಿತ್ಯ ೩ ದಿನ ಮಾತ್ರ ಭಕ್ತರ ದರ್ಶನಕ್ಕೆ ದೊರೆಯುವುದು. ಉಳಿದ ಅವಧಿಯಲ್ಲಿ ಜಿಲ್ಲಾ ಖಜಾನೆಯ ಭದ್ರತೆಯಲ್ಲಿ ಇರುವುದು. ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಬಾಗಲಕೋಟೆ ತಾಲ್ಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಕಳಸದ ಬಾಬುದಾರರು ೭೨ ಗಂಟೆಯಲ್ಲಿ ಕಳಸವನ್ನು ಮರಳಿ ತಲ್ಲುಪಿಸುತ್ತೆವೆ ಎಂಬ ಷರತ್ತುಬದ್ದ ಮುಚ್ಚಳಿಕೆ ಪತ್ರಕೊಟ್ಟು ಪೊಲೀಸ್ ಭದ್ರತೆಯಲ್ಲಿ ರಾತ್ರಿ ಇಡೀ ಪಾದಯಾತ್ರೆಯ ಮೂಲಕ ಹಳೆಮಲ್ಲಾಪೂರ, ಕಿರಸೂರ, ಭಗವತಿ, ಹಳ್ಳೂರ, ಬೇವೂರ ಮಾರ್ಗದ ಮೂಲಕ ಶುಕ್ರವಾರ ಬೆಳಗ್ಗೆ ಕೂಡಲಸಂಗಮಕ್ಕೆ ಆಗಮಿಸಿತು.

೪೭ ಕಿ. ಮೀ ದೂರದ ಮಾರ್ಗದುದ್ದಕ್ಕೂ ವಿವಿಧ ಗ್ರಾಮದ ಭಕ್ತರು ಸಂಭ್ರಮದಿಂದ ಬಂಗಾರದ ಕಳಸ ಸ್ವಾಗತಿಸಿ, ಪೂಜೆ, ಮೆರವಣಿಗೆ ಮಾಡಿ ಮುಂದಿನ ಗ್ರಾಮಕ್ಕೆ ಕಳುಹಿಸಿದರು. ಮಾರ್ಗದುದ್ದಕ್ಕೂ ಅನೇಕ ಭಕ್ತರು ಪ್ರಸಾದ, ತಂಪುಪಾನಿಯ, ಹಣ್ಣುಗಳನ್ನು ವಿತರಿಸಿದರು.

ಪಾದಯಾತ್ರೆಯಲ್ಲಿ ಸುಮಾರು ೨೫ ಸಾವಿರಕ್ಕೂ ಅಧಿಕ ಪುರುಷರು, ೫ ಸಾವಿರಕ್ಕೂ ಅಧಿಕ ಮಹಿಳೆಯರು ಇದ್ದರು. ೧೦ ಗಂಟೆಗೆ ಕೂಡಲಸಂಗಮಕ್ಕೆ ಆಗಮಿಸುತ್ತಿದ್ದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಕಲಾ ತಂಡಗಳು ನೃತ್ಯ ಪ್ರದರ್ಶನ ಮಾಡುತ್ತ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದರು.

ವಿವಿಧ ಗ್ರಾಮದ ಮಹಿಳೆಯರು ಆರತಿಯೊಂದಿಗೆ ಕಳಸದ ಹಿಂದೆ ಸಂಗಮನಾಥನ ದೇವಾಲಯದಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಿ ಸಂಗಮೇಶ್ವರ ದೇವಾಲಯದ ಮುಂದೆ ಪೂಜೆ ಸಲ್ಲಿಸಿ ದೇವಾಲಯದಿಂದ ಬಸವೇಶ್ವರ ವೃತ್ತದ ಮೂಲಕ ಗ್ರಾಮದ ಕಳಸದ ಕಟ್ಟೆಯವರೆಗೆ ಮೇರವಣಿಗೆಯ ಮೂಲಕ ತಂದರು. ನಂತರ ಗ್ರಾಮಸ್ಥರು ಕಳಸಕ್ಕೆ ದೀಡ ನಮಸ್ಕಾರ ಹಾಕುವ ಮೂಲಕ ಭಕ್ತಿಯನ್ನು ತೊರ್ಪಡಿಸಿದರು.

ಸಂಗಮೇಶ್ವರ ಜಾತ್ರೆಯಂದು ಮಾತ್ರ ಕೂಡಲಸಂಗಮಕ್ಕೆ ಬರುವ ಬಂಗಾರದ ಕಳಸವನ್ನು ನೋಡುವುದು ಬಾಗ್ಯ, ನಮ್ಮ ಬಯಕೆಗಳು ಈಡೇರಿರುವುದಕ್ಕಾಗಿ ನಾವು ಕಳಸದ ಜೊತೆ ಪಾದಯಾತ್ರೆಯ ಮೂಲಕ ಬರುತ್ತೇವೆ ಎಂದು ಪಾದಯಾತ್ರೆಯಲ್ಲಿ ಇದ್ದ ಭಕ್ತರು ಹೇಳಿದರು. ಹಿಂದೂ, ಮುಸ್ಲಿಂ, ಬೌದ್ಧರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *