ದಾವಣಗೆರೆ
ಜಗತ್ತಿನಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸುಧಾರಕರು, ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಕರು , ಸಮಾನತೆಯ ಹರಿಕಾರು ಆಗಿ ಹೋಗಿದ್ದಾರೆ.
ಅವರಲ್ಲಿ ಪ್ರಮುಖರಾದ ಕಾರ್ಲ್ ಮಾರ್ಕ್ಸ್ ಶ್ರಮಜೀವಿಗಳ ಪರವಾಗಿ ಹೋರಾಟ ಮಾಡಿ ವಿಶ್ವಪ್ರಸಿದ್ಧಿ ಪಡೆದಿದ್ದಾರೆ.
ಸಾಕ್ರೇರ್ಟೀಸ್ ತತ್ವಜ್ಞಾನದಲ್ಲಿ, ಮಾರ್ಟಿನ್ ಲೂಥರಕಿಂಗ್ ಧಾರ್ಮಿಕ ಕ್ಷೇತ್ರದ ಸುಧಾರಣೆಗೆ, ವಿವೇಕಾನಂದರು ವೈಚಾರಿಕ ಕ್ಷೇತ್ರದಲ್ಲಿ, ಅಂಬೇಡ್ಕರ್ ಜ್ಞಾನದ ಕ್ಷಿತಿಜ ಮತ್ತು ಸಮಾನತೆಯ ಕ್ಷೇತ್ರದಲ್ಲಿ , ಮಹಾತ್ಮ ಗಾಂಧಿ ಸ್ವಾತಂತ್ರ್ಯ ಕ್ಷೇತ್ರದಲ್ಲಿ, ಹೀಗೆ ಸಾಕಷ್ಟು ಜನ ವಿವಿಧ ರಂಗಗಳಲ್ಲಿ ಜಗತ್ತಿನಲ್ಲಿ ಸಾಧನೆ ಮಾಡಿ ವಿಶ್ವವಿಖ್ಯಾತಿ ಪಡೆದಿದ್ದಾರೆ.
ಕನ್ನಡದ ಮಣ್ಣಿನಲ್ಲಿ ಹುಟ್ಟಿದ ಮಹಾಮಹಿಮನೊಬ್ಬ ಈ ಎಲ್ಲಾ ಮಹಾನೀಯರು ಹುಟ್ಟುವ ಮೊದಲೇ ಅಂದರೆ ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿ, ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ, ಸಮಾನತೆ, ಆರ್ಥಿಕ, ಕಾರ್ಮಿಕ, ಕಾಯಕ, ದಾಸೋಹ, ಆಧ್ಯಾತ್ಮಿಕ, ತಾತ್ವಿಕ, ಸಾಹಿತ್ಯ, ಸರ್ವೋದಯ, ವೈಚಾರಿಕ, ಲಿಂಗ ಸಮಾನತೆ, ಪ್ರಜಾಪ್ರಭುತ್ವದ ಪರಿಕಲ್ಪನೆ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯವಲ್ಲವೇ …
ಅಂತಹ ಮಹಾಮಹಿಮ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಒಂದು ತಂಡ ಕಲ್ಪನೆಗೂ ಮಿಗಿಲಾಗಿ ಆದರ್ಶದ ಬದುಕಿನ ಕನಸನ್ನು ನನಸು ಮಾಡಿ ಕನ್ನಡದ ಜನತೆಗಾಗಿ ಒಂದು ಸಂಸ್ಕೃತಿ ಕೊಟ್ಟು ಹೋಗಿದ್ದಾರೆ.
ಆ ಸಂಸ್ಕೃತಿಯನ್ನು ನಾವೆಲ್ಲರೂ ತಿಳಿದುಕೊಂಡು ಅದನ್ನು ನಮ್ಮೆಲ್ಲರ ಬಾಳಿನಲ್ಲಿ ಅಳವಡಿಸಿಕೊಂಡದ್ದೇ ಆದರೆ ಕನ್ನಡ ನಾಡು ವಿಶ್ವದಲ್ಲೇ ಆದರ್ಶ ರಾಜ್ಯ ಆಗುವುದರಲ್ಲಿ ಎರಡು ಮಾತಿಲ್ಲ.
ನಮ್ಮ ನಾಡು ವಿಶ್ವದಲ್ಲೇ ಆದರ್ಶ ರಾಜ್ಯ ಆಗಬೇಕಾದರೆ ನಾವು ಬಸವ ಸಂಸ್ಕೃತಿ ಅಥವಾ ಶರಣ ಸಂಸ್ಕೃತಿ ತಿಳಿದು ಅನುಸರಿಸಬೇಕಾಗಿದೆ.
ಇಂಥ ಬಸವ ಸಂಸ್ಕೃತಿ ತಿಳಿಯಲು ಕನ್ನಡಿಗರಿಗೊಂದು ಸುವರ್ಣ ಅವಕಾಶವನ್ನು ಲಿಂಗಾಯತ ಮಠಾಧೀಶರ ಒಕ್ಕೂಟ ನಮಗೆ ಒದಗಿಸಿ ಕೊಟ್ಟಿದೆ.
ಸೆಪ್ಟೆಂಬರ್ ಒಂದರಿಂದ ರಾಜ್ಯಾದ್ಯಂತ ಪ್ರತಿದಿನ ಒಂದೊಂದು ಜಿಲ್ಲಾ ಕೇಂದ್ರಗಳಲ್ಲಿ ಬಸವ ಸಂಸ್ಕೃತಿ ತಿಳಿಯಲು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ನಡೆಯಲಿದೆ.
ಕನ್ನಡಿಗರಾದ ನಾವು ನೀವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವಾದಿ ಶರಣರು ಬದುಕಿದ ಆದರ್ಶ ಬದುಕಿನ ದಾರಿ ತಿಳಿದುಕೊಳ್ಳಬಹುದು, ಶರಣರ ಜ್ಞಾನದ ಬೆಳಕನ್ನು ಕಾಣಬಹುದು, ಶರಣರ ವಿಚಾರದ ಹೊಳೆಯಲ್ಲಿ ಮಿಂದು ಪುನೀತರಾಗಬಹುದು.
ಇಂಥಹ ಅವಕಾಶವನ್ನು ಬಿಡದೆ ನಾವೆಲ್ಲರೂ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಅಥವಾ ನಮಗೆ ಹತ್ತಿರ ಇರುವ ಜಿಲ್ಲಾ ಕೇಂದ್ರಗಳಲ್ಲಿ
ಅಥವಾ ಸಾದ್ಯವಾದರೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭಾಗವಹಿಸಿ ಪುನೀತರಾಗೋಣ.
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ. ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ. ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ನಿನ್ನನಿತ್ತೆ ಕಾಣಾ! ರಾಮನಾಥ.