ಬೀದರಿನಲ್ಲಿ 250 ಕಿಮಿ ಬಸವ ಪಥ ಯೋಜನೆ ಘೋಷಿಸಿದ ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಹರು ಕ್ರಿಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ 250 ಕಿಲೋಮೀಟರ್ ಉದ್ದದ ‘ಬಸವ ಪಥ’ ರಸ್ತೆ ಯೋಜನೆಯ ಪ್ರಸ್ತಾಪ ಮಾಡಿದರು.

ಬೀದರ ಜಿಲ್ಲೆಯ ಎಲ್ಲಾ ಪ್ರಮುಖ ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ ಉದ್ದೇಶದಿಂದ ಈ ರಸ್ತೆ ಯೋಜನೆಯನ್ನು ರೂಪಿಸಲಾಗಿದ್ದು, ಜಿಲ್ಲೆಯ ಒಳಾಂಗಣ ಸಂಪರ್ಕ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. 12ನೇ ಶತಮಾನದ ಸಮಾಜ ಸುಧಾರಕ, ವಿಶ್ವಗುರು ಬಸವಣ್ಣನವರ ಆದರ್ಶಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ರಸ್ತೆಗೆ ‘ಬಸವ ಪಥ’ ಎಂದು ನಾಮಕರಣ ಮಾಡಲಾಗಿದೆ ಎಂದರು.

ಬಸವ ಪಥ ಯೋಜನೆಯ ಪ್ರಮುಖ ಅಂಶಗಳಲ್ಲಿ ರಸ್ತೆಯ ಒಟ್ಟು 250 ಕಿ.ಮೀ ಉದ್ದ, ಬೀದರ ಜಿಲ್ಲೆಯ ತಾಲ್ಲೂಕು ಮತ್ತು ಪ್ರಮುಖ ಕೇಂದ್ರಗಳ ನಡುವೆ ಸುಗಮ ಸಂಚಾರ ಒದಗಿಸುವ ಮತ್ತು ಗ್ರಾಮೀಣ–ನಗರ ಪ್ರದೇಶಗಳ ಸಂಪರ್ಕ ಬಲವರ್ಧನೆ, ವ್ಯಾಪಾರ-ವಹಿವಾಟು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜಿಸುವ ಉದ್ದೇಶವಿದೆ ಎಂದು ಗಣರಾಜ್ಯೋತ್ಸವ ಭಾಷಣದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಘೋಷಿಸಿದ್ದಾರೆ.

ಬಸವಕಲ್ಯಾಣದಲ್ಲಿ ನಿರ್ಮಾಣಹಂತದಲ್ಲಿರುವ “ಅನುಭವ ಮಂಟಪ”ದ  ಕಾಮಗಾರಿಗೆ ಇದುವರೆಗೆ ₹400 ಕೋಟ  ಖರ್ಚಾಗಿದ್ದು, ಉಳಿದ ಕಾಮಗಾರಿಗೆ  ₹100 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರಿಗೆ  ಮನವಿ ಸಲ್ಲಿಸಲಾಗುವುದು.  ಮತ್ತು ಮಾರ್ಚ್‌ 2027ರ ಒಳಗಾಗಿ ಕಾಮಗಾರಿ ಸಂಪೂರ್ಣ ಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬೀದರ–ಭಾಲ್ಕಿ ರಸ್ತೆಯ ಅತಿವಾಳ ಸಮೀಪ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ನಿರ್ಮಾಣಕ್ಕೆ ಈ ವರ್ಷ ₹5 ಕೋಟಿ ಅನುದಾನವನ್ನು ಮೀಸಲಿಡಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಕಾಮಗಾರಿಯ ಪ್ರಗತಿಗೆ ಅನುಗುಣವಾಗಿ ಅಗತ್ಯ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುವುದು ಎಂದರು.

ಅದೇ ಸಂದರ್ಭದಲ್ಲಿ ಅಂಬೇಡ್ಕರ್ ಭವನದ ನಿರ್ಮಾಣಕ್ಕಾಗಿ ₹3 ಕೋಟಿ ಅನುದಾನವನ್ನು ಒದಗಿಸಲಾಗುವುದು ಎಂದು ಅವರು ಘೋಷಿಸಿದರು. ಅಂಬೇಡ್ಕರ್ ಭವನದ ಮಾದರಿಯಲ್ಲೇ ‘ಬಸವ ಭವನ’ವನ್ನೂ ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು.

ಬಸವ ಪಥ ಯೋಜನೆ ಪೂರ್ಣಗೊಂಡ ಬಳಿಕ ಬೀದರ ಜಿಲ್ಲೆಯ ಜನರಿಗೆ ಸಂಚಾರದ ಸಮಸ್ಯೆ ಕಡಿಮೆಯಾಗಲಿದೆ. ರೈತರು, ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಅನುಕೂಲಕರವಾಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಈ ರಸ್ತೆ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ಮಾನ್ಯ ಸಚಿವರಾದ ಖಂಡ್ರೆಯವರು ಬಸವ ಪಥ ಬಸವ ಉದ್ಯಾನ ಬಸವ ನಗರ ಬಸವ ವಿಮಾನ ಇಂತಹುಗಳನ್ನು ಮಾಡುತ್ತ ಲಿಂಗಾಯತರಿಗೆ ಖುಷಿಪಡಿಸುವುದಕ್ಕಿಂತ ಸ್ವತಂತ್ರ ಧರ್ಮದ ಮಾನ್ಯತೆಗೆ ಶ್ರಮಿಸಿದರೆ ಲಿಂಗಾಯತ ಸಮಾಜಕ್ಕೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ.

Leave a Reply

Your email address will not be published. Required fields are marked *