ಬಸವ ಧರ್ಮ ಪೀಠದ ಭಕ್ತರ ಗೊಂದಲ ನಿವಾರಣೆಗೆ ಪ್ರಯತ್ನ: ಅಶೋಕ ಬೆಂಡಿಗೇರಿ

ಕೂಡಲಸಂಗಮ

ಮಾತೆ ಮಹಾದೇವಿ ಲಿಂಗೈಕ್ಯದ ನಂತರ ಇಬ್ಬಾಗವಾದ ಬಸವ ಧರ್ಮ ಪೀಠದ ಭಕ್ತರಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗಾಗಿ ಬಸವ ಧರ್ಮ ಪೀಠ ಸಮನ್ವಯ ಸಮಿತಿ ಸಕಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬೆಳಗಾವಿ ರಾಷ್ಟ್ರೀಯ ಬಸವ ದಳದ ಮುಖಂಡ ಅಶೋಕ ಬೆಂಡಿಗೇರಿ ತಿಳಿಸಿದರು.

ಸೋಮವಾರ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾತ್ರೆ ನಿವಾಸದಲ್ಲಿ ಭಾನುವಾರ ಬಸವ ಧರ್ಮ ಪೀಠದ ಭಕ್ತರ ಸಭೆ ಮಾಡಿ ಚರ್ಚಿಸಲಾಗಿದೆ. ಸಭೆಗೆ ರಾಜ್ಯದ 11 ಜಿಲ್ಲೆಯಿಂದ ನೂರಕ್ಕೂ ಅಧಿಕ ರಾಷ್ಟ್ರೀಯ ಬಸವ ದಳದ ಮುಖಂಡರು ಆಗಮಿಸಿದ್ದರು. ಈ ಸಭೆಯಲ್ಲಿಯೇ ಸಮನ್ವಯ ಸಮಿತಿಯನ್ನು ಹುಟ್ಟುಹಾಕಿದೆ.

ಸಮಿತಿಯಲ್ಲಿ ಧಾರವಾಡದ ಬಸಯ್ಯ ಗಣಾಚಾರಿ, ಗೋಕಾಕಿನ ಸಂಜಯ್ ಪಾಟೀಲ, ಬೀದರನ ಶಿವರಾಜ ಪಾಟೀಲ ಅತಿವಾಳ, ಬಳ್ಳಾರಿಯ ಶಿವಕುಮಾರ ಹಂದ್ರಾಳ, ಕಲಘಟಗಿಯ ಅಶೋಕ ಶೀಲವಂತ, ಬಾಗಲಕೋಟೆಯ ಚಂದ್ರಕಾಂತ್ ಲುಕ್ಕ, ಗಂಗಾವತಿಯ ವಿನಯ ಅಂಗಡಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಕಾನೂನು ಸಲಹೆಗಾರರಾಗಿ ಬೀದರನ ವಕೀಲ ರವಿಕಾಂತ ಬಿರಾದಾರ, ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಸಿದ್ದವೀರ ಸಂಗಮದ, ಬೆಂಗಳೂರಿನ ವಿಶ್ವನಾಥ ಕೋರೆ ಅವರನ್ನು ಆಯ್ಕೆ ಮಾಡಿದೆ.

ಸಭೆಯಲ್ಲಿ ಕೈಗೊಂಡ ಐದು ನಿರ್ಣಯಗಳನ್ನು ತಿಳಿಸಿದರು.

  • ಸಮನ್ವಯ ಸಮಿತಿ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಗೌರವಿಸಿ, ಬಸವಣ್ಣನವರ ಅಂಕಿತನಾಮ ಕೂಡಲಸಂಗಮದೇವ ಎನ್ನುವಂತೆ ನೋಡಿಕೊಳ್ಳುತ್ತದೆ.
  • ಕಳೆದ ನಾಲ್ಕು ವರ್ಷಗಳಿಂದ ಇಬ್ಬಾಗವಾದ ಧರ್ಮ ಪೀಠದ 2 ಬಣಗಳ ಶರಣರನ್ನೂ ಒಗ್ಗೂಡಿಸಿ, ಒಂದೇ ಶರಣ ಮೇಳ, ಕಲ್ಯಾಣ ಪರ್ವ ನಡೆಯುವಂತೆ ನೋಡಿಕೊಳ್ಳುವುದು.
  • ನವೆಂಬರ್ 25ರೊಳಗೆ ಒಂದು ಮಾಡುವ ಗಡುವು.
  • ಎಲ್ಲಾ ರಾಷ್ಟ್ರೀಯ ಬಸವ ದಳಗಳನ್ನು ಪುನರುತ್ಥಾನಗೊಳಿಸುವುದು.
  • ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳನ್ನು ಲೋಕ ಅದಾಲತ್ ಅಥವಾ ಭಕ್ತರ ಸಮ್ಮುಖದಲ್ಲಿ ಪರಿಹರಿಸಿಕೊಳ್ಳಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *