ಬಸವ ಜಯಂತಿ: ‘ಸರ್ವ ಧರ್ಮ ಸಂಸತ್ತು’ ಯಶಸ್ವಿಗೊಳಿಸೋಣ: ಜಿಲ್ಲಾಧಿಕಾರಿ ಜಾನಕಿ

ಬಾಗಲಕೋಟೆ

ಬಸವ ಜಯಂತಿಯ ಪ್ರಯುಕ್ತ ಕೂಡಲ ಸಂಗಮದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘ಸರ್ವ ಧರ್ಮ ಸಂಸತ್ತು’ ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಕೂಡಲಸಂಗಮದಲ್ಲಿ ‘ಸರ್ವ ಧರ್ಮ ಸಂಸತ್ತು’ ಕಾರ್ಯಕ್ರಮದ ಆಯೋಜನೆಗೆ ಸಮಿತಿಗಳ ರಚಿಸುವ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವಣ್ಣನವರ ಬದುಕು, ಸಂದೇಶ, ಚಿಂತನೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಯಾವುದೇ ಲೋಪಗಳಾಗದಂತೆ ಕಾರ್ಯಗಳಾಗಬೇಕು ಎಂದರು.

ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿ, ಹಣಕಾಸು, ಸಾರಿಗೆ, ವಸತಿ, ಆಹಾರ, ಪ್ರಚಾರ ಮತ್ತು ಜಾಹೀರಾತು ಮಾಧ್ಯಮ ಸಮಿತಿ, ಮೂಲ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಕಾನೂನು ಸುವ್ಯವಸ್ಥೆ ಹಾಗೂ ಅಗ್ನಿಶಾಮಕ ದಳ ವ್ಯವಸ್ಥೆ ಸಮಿತಿ, ಮೆರವಣಿಗೆ ಹಾಗೂ ವೇದಿಕೆ ಸಮಿತಿ ಸೇರಿ 11 ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಕಾರ್ಯಕ್ರಮ ಜರಗುವ ಸ್ಥಳದಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಕಾರ್ಯಕ್ರಮದ ಅಂದಾಜು ಖರ್ಚು ವೆಚ್ಚ, ಅತಿಥಿಗಳ ವಸತಿ ವ್ಯವಸ್ಥೆ, ಕೂಡಲಸಂಗಮ ಸಂಪರ್ಕಿಸುವ ರಸ್ತೆಗಳ ಸ್ಥಿತಿಗತಿ, ಕಾರ್ಯಕ್ರಮದ ಕುರಿತು ಪ್ರಚಾರ ಮತ್ತು ಭದ್ರತೆ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳು ತಹಶೀಲ್ದಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *