ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮ
ವಿಜಯನಗರ:
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕಗಳ ಸಹಯೋಗದಲ್ಲಿ 893ನೇ ಬಸವ ಜಯಂತಿ ಪ್ರಯುಕ್ತ ವಿಜಯನಗರ ಜಿಲ್ಲೆಯ ಪದವಿ ಮಹಾವಿದ್ಯಾಲಯಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅದರ ಭಾಗವಾಗಿ ಸೋಮವಾರ ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು,
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಕೆ. ರವೀಂದ್ರನಾಥ, ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಣೆ ಮಾಡಿದೆ, ಯಾಕೆ ಬಸವಣ್ಣ ಸಾಂಸ್ಕೃತಿಕ ನಾಯಕ ಎನ್ನುವ ವಿಚಾರವನ್ನು ಪದವಿ ವಿದ್ಯಾರ್ಥಿಗಳಿಗೆ ತಿಳಿಸುವುದಕ್ಕಾಗಿ ವಿಜಯನಗರ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆಯನ್ನು ರೂಪಿಸಲಾಗಿದೆ. ಅದರ ಭಾಗವಾಗಿ ಈ ದಿನ ಕಾರ್ಯಕ್ರಮದ ಉದ್ಘಾಟನೆಯ ಜೊತೆಗೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಚಿಂತಕ ಡಾ. ಟಿ. ಆರ್. ಚಂದ್ರಶೇಖರ, ಜನರ ನೈತಿಕತೆಗಾಗಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಹೋರಾಟ ಮಾಡಿದ ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಲ್ಲ, ಅವರ ತತ್ವಗಳು ಜಾಗತಿಕ ಮನ್ನಣೆಯನ್ನು ಪಡೆದಿವೆ, ಹಾಗಾಗಿ ಅವರು ಜಾಗತಿಕ ಮಟ್ಟದ ಸಾಂಸ್ಕೃತಿಕ ನಾಯಕ ಎಂದು ಅಭಿಪ್ರಾಯಪಟ್ಟರು.

ಡಾ. ಟಿ. ಎಚ್. ಬಸವರಾಜ ಮಾತನಾಡುತ್ತ, ಬಸವಣ್ಣನವರ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಶ್ರೇಷ್ಠವಾದವುಗಳಾಗಿವೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಶ್ರೇಷ್ಠವಾದವುಗಳಾಗಿವೆ.

12ನೇ ಶತಮಾನದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಲಿಂಗ ಅಸಮಾನತೆಗೆ, ಒಳಗಾಗಿದ್ದ ಸಮಾಜವನ್ನು ಹಾಗೂ ಅದರಲ್ಲಿಯೂ ಸಮಾಜದ ಕಟ್ಟಕಡೆಯ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಯಸಿದ ಈ ನಾಡಿನ ಏಕೈಕ ವ್ಯಕ್ತಿ ಹಾಗೂ ಈ ನಾಡಿನ ನೆಲಮೂಲ ಸಂಸ್ಕೃತಿಯ ವಾರಸುದಾರ ಎಂದರೆ ಅವರು ಸಾಂಸ್ಕೃತಿಕ ನಾಯಕ ಬಸವಣ್ಣ.
ಈ ಕನ್ನಡ ನಾಡಿನ ಪ್ರಥಮ ಧರ್ಮ ಎಂದರೆ ಅದು ಬಸವಣ್ಣನವರ ನಾಯಕತ್ವದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಾಯತ ಧರ್ಮವಾಗಿದೆ. ಲಿಂಗಾಯತ ಎನ್ನುವುದು ಜಾತಿಯಲ್ಲ, ಲಿಂಗಾಯತ ಎನ್ನುವುದು ಧರ್ಮವಾಗಿದೆ. ಲಿಂಗಾಯತ ತತ್ವ ಸಿದ್ಧಾಂತಗಳು ಅತ್ಯಂತ ಸರಳವಾಗಿದ್ದು ಸರ್ವರು ಅನುಸರಿಸಬಹುದಾಗಿದೆ. ಇವು ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನ ಪಡೆದಿವೆ.

ಭಾರತ ಸಂವಿಧಾನದ ಪ್ರಕಾರ ಈ ಧರ್ಮದ ಅನುಯಾಯಿಗಳಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಲಭಿಸುವುದು ಅವಶ್ಯಕವಾಗಿದೆ, ಎಂದು ಅಭಿಪ್ರಾಯಪಟ್ಟರು.
ಪ್ರಪಂಚದಲ್ಲಿಯೇ ಸ್ತ್ರೀ ಸಮಾನತೆ ಬಗ್ಗೆ ಪ್ರತಿಪಾದನೆ ಮಾಡಿದ ಏಕೈಕ ವ್ಯಕ್ತಿ ಬಸವಣ್ಣನವರು. ಈ ಕಾರಣಕ್ಕಾಗಿ ಇಂದು ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ತತ್ವ ವಿಚಾರಗಳು ಪ್ರಜ್ವಲ ಗೊಳ್ಳುತ್ತಿವೆ. ಆದರೆ ಕರ್ನಾಟಕದಲ್ಲಿ ಬಸವಣ್ಣನವರನ್ನು ಸ್ಥಾವರವನ್ನಾಗಿ ಮಾಡಿ ಆಚರಣೆ ಮಾಡುತ್ತಿರುವುದು ದುರಂತದ ಸಂಗಾತಿಯಾಗಿದೆ.

ವಿದ್ಯಾರ್ಥಿಗಳು ಈ ಸೂಕ್ಷ್ಮ ವಿಚಾರವನ್ನು ಅರ್ಥ ಮಾಡಿಕೊಂಡು ಬಸವಾದಿ ಶರಣರು ಪ್ರತಿಪಾದಿಸಿದ ತತ್ವಗಳನ್ನು ಅನುಸರಿಸಿದ್ದೆ ಆದರೆ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಾಬು ರಾಜೇಂದ್ರ ಪ್ರಸಾದ್ ವಹಿಸಿಕೊಂಡಿದ್ದರು. ಬಿ.ಜಿ. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್. ಬಸವರಾಜ ಮಾವಿನಹಳ್ಳಿ, ಗುರುರಾಜ ಅವರಾದಿ, ಅಮರೇಶ ಅಂಗಡಿ, ಡಾ. ಮಹಾಬಲೇಶ್ವರ ರೆಡ್ಡಿ, ಸೌಭಾಗ್ಯ ಲಕ್ಷ್ಮಿ ಇತರರು ಉಪಸ್ಥಿತರಿದ್ದರು. ಅಕ್ಕಿ ಮಲ್ಲಿಕಾರ್ಜುನ ಸ್ವಾಗತಿಸಿದರು. ಉಪನ್ಯಾಸಕ ಶಿವರಾಮ ಕಾರ್ಯಕ್ರಮ ನಿರೂಪಿಸಿದರು.

ಅತ್ಯವಶ್ಯಕವಾದ ಅತ್ಯಮೂಲ್ಯವಾದ ಮತ್ತು ಅರ್ಥಪೂರ್ಣವಾದ ಯೋಚನೆ ಹಾಗು ಯೋಜನೆ ಹಾಕಿಕೊಂಡಿರುವುದಕ್ಕೆ ಅನಂತ ವಂದನೆಗಳು ಮತ್ತು ಅಭಿನಂದನೆಗಳು.
ಶರಣು ಶರಣಾರ್ಥಿ