ಬಸವ ಜಯಂತಿ: ಎರಡು ಸಾವಿರ ಶರಣ, ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ತಾಯಂದಿರು ತಮ್ಮ ಮೇಲಿನ ಶೋಷಣೆ ತಡೆಯಲು ಮುಂದಾಗಬೇಕು

ಬೆಳಗಾವಿ :

ನಾಗನೂರ ರುದ್ರಾಕ್ಷಿಮಠದಲ್ಲಿ ಬಸವ ಜಯಂತಿ ಅಂಗವಾಗಿ ಎರಡು ಸಾವಿರ ಶರಣ ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಸಲಾಗುವುದು ಎಂದು ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸೋಮವಾರ ಹೇಳಿದರು.

ಅವರು ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದಿಂದ ಏರ್ಪಡಿಸಿದ ಮಾಸಿಕ ಅನುಭಾವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದರು.

ಇಂದಿಲ್ಲ ನಾಳೇ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಸಿಕ್ಕೇಸಿಗುತ್ತದೆ. ಸಮಾಜ ಬಾಂಧವರು ಲಿಂಗಾಯತ ಆಚರಣೆಗಳನ್ನು ಉಳಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳಿಗೆ ಸಮಾಜದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಾಲ್ಯದಿಂದಲೇ ನೀಡಬೇಕು. ಇದು ತಾಯಂದಿರು ಮಾಡಬೇಕಾದ ಮಹತ್ತರವಾದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

“ಶರಣರು ಹಾಗೂ ಮಹಿಳಾ ಸಬಲೀಕರಣ” ವಿಷಯ ಕುರಿತು ಉಪನ್ಯಾಸ ನೀಡಿದ ಡಾ. ಸ್ಪೂರ್ತಿ ಮಾಸ್ತಿಹೊಳಿ ಮಹಿಳೆ ತನ್ನ ಸ್ವಾತಂತ್ರ್ಯದ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ಯಾವ ಕಾರಣಕ್ಕೂ ಸ್ವಾತಂತ್ರ್ಯದಿಂದ ಕೌಟುಂಬಿಕ ವ್ಯವಸ್ಥೆ ಕೆಡಬಾರದು ಎಂದು ಅಭಿಪ್ರಾಯಪಟ್ಟರು.

ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ಬಸವಣ್ಣನವರು ಪುರುಷರಷ್ಟೆ ಸಮಾನವಾಗಿ ಮಹಿಳೆಯರಿಗೆ ಸ್ಥಾನಮಾನ ಕೊಟ್ಟಿದ್ದಾರೆ.  ಸಂಪೂರ್ಣ ಕುಟುಂಬದ ಮಾನಸಿಕ ಹಾಗೂ ಶಾರೀರಕ ಆರೋಗ್ಯವನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ ತನ್ನ ಮೇಲಿದೆ ಎಂಬುದನ್ನು ಮಹಿಳೆ ಎಂದಿಗೂ ಮರೆಯಬಾರದು.

ಹೆಣ್ಣುಮಕ್ಕಳಾಗಲಿ, ಗಂಡುಮಕ್ಕಳಾಗಲಿ ಪಾಲಕರು ಅವರಿಗೆ ಅವರವರ ಜವಾಬ್ದಾರಿ ಕುರಿತು ಸರಿಯಾಗಿ ಕಲಿಸಿಕೊಡಬೇಕು. ಸಂಸಾರದಲ್ಲಿ ಹೊಂದಾಣಿಕೆ ಮಹತ್ವವನ್ನು ತಿಳಿಸಿಕೊಡಬೇಕು. ಮಗಳು ಹಾಗೂ ಸೊಸೆ ಇಬ್ಬರನ್ನೂ ಒಂದೇ ರೀತಿಯಲ್ಲಿ ಕಾಣುವ ಗುಣವನ್ನು ಹಿರಿಯರು ಬೆಳೆಸಿಕೊಳ್ಳಬೇಕು.

ಇಂದು ಅತ್ಯಂತ ಕ್ಷುಲ್ಲಕ ಕಾರಣಗಳಿಂದ ವಿಚ್ಛೇದನ ನಡೆಯುತ್ತಿರುವುದು ದುರ್ದೈವ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಒಳ್ಳೆಯದನ್ನು ಬಯಸುವುದಾದರೆ ಒಳ್ಳೆಯದನ್ನು ನೀಡಬೇಕಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಅವರು ಸಂಕ್ಷಿಪ್ತವಾಗಿ ಮಾತನಾಡಿ, ಮಹಿಳೆಯರು ಮೂಢನಂಬಿಕೆಗಳಿಂದ ದೂರವಿದ್ದು ಸ್ತ್ರಿಶೋಷಣೆ ಆಗದಂತೆ ನೋಡಿಕೊಳ್ಳಬೇಕು. ಮೂವತ್ತು ನಲವತ್ತು ವರ್ಷ ಜೊತೆಯಾಗಿದ್ದು ಗಂಡ ಹೆಂಡತಿ ಸಂಸಾರ ನಡೆಸಿರುತ್ತಾರೆ. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿರುತ್ತಾರೆ. ಗಂಡ ಲಿಂಗೈಕ್ಯರಾದಾಗ ಜನರ ಸಮ್ಮುಖದಲ್ಲಿ ಹೆಂಡತಿಯ ತಾಳಿಯನ್ನು ಹರಿದು ಹಾಕಿ, ಬಳೆಗಳನ್ನು ಒಡೆದು ಕುಂಕುಮವನ್ನು ಅಳಿಸಿಹಾಕುತ್ತಾರೆ. ಇದು ಹೆಣ್ಣು ಮಕ್ಕಳ ಶೋಷನೆ ಅಲ್ಲವೇ? ತಾಯಂದಿರು ಇಂತಹ ನೋವು ನೀಡುವ ಪದ್ಧತಿಗಳನ್ನು ತಡೆಯುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ರೊಟ್ಟಿ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶರಣೆ ಸುನಿತಾ ಹಾಗೂ ಶರಣ ಮಹಾಂತೇಶ ತೋರಣಗಟ್ಟಿ ದಂಪತಿ  ಸಂಪಾದಿಸಿದ ಬಸವಣ್ಣನವರ ಐದುನೂರ ವಚನಗಳುಳ್ಳ ವಚನ ಜ್ಯೋತಿ ಕೃತಿಯ ನಾಲ್ಕನೆಯ ಆವೃತ್ತಿಯನ್ನು ಪೂಜ್ಯರು ಬಿಡುಗಡೆ ಮಾಡಿದರು.

2025- 26ನೇ ಸಾಲಿನಲ್ಲಿ  ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಮಹಾನಗರ ಹಾಗೂ ತಾಲೂಕ ಘಟಕಗಳು ನಡೆಸಿದ ತಾಲೂಕ ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ವಿಜೇತ ಆರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಉಪನ್ಯಾಸ ನೀಡಿದ ಡಾ. ಸ್ಪೂರ್ತಿ ಮಾಸ್ತಿಹೊಳಿ ಅವರನ್ನು, ಪ್ರಸಾದ ದಾಸೋಹಿಗಳಾದ ಸುಧಾ ಹಾಗೂ ಮಲ್ಲಿಕಾರ್ಜುನ ರೊಟ್ಟಿ ದಂಪತಿ ಮತ್ತು ವಚನ ಕಂಠಪಾಠ ಸ್ಪರ್ಧೆಯ ಪ್ರಾಯೋಜಕರಾದ ಶ್ರೀದೇವಿ ಹಾಗೂ ಸುರೇಶ ನರಗುಂದ ದಂಪತಿ ಮತ್ತು ತೋರಣಗಟ್ಟಿ ದಂಪತಿಗಳನ್ನು ಗೌರವಿಸಲಾಯಿತು.

ಪ್ರಾರಂಭದಲ್ಲಿ ಮಹಾಸಭಾ ಮಹಿಳಾ ಘಟಕದ ಶರಣೆಯರು ವಚನ ಪ್ರಾರ್ಥನೆ ಮಾಡಿದರು. ನೈನಾ ಗಿರಿಗೌಡರ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಿವಲೀಲಾ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸರೋಜಿನಿ ನಡುವಿನಹಳ್ಳಿ ಶರಣು ಸಮರ್ಪಣೆ ಸಲ್ಲಿಸಿದರು.

ಮಹಾನಗರ ಘಟಕದ ಅಧ್ಯಕ್ಷ ಎಸ್. ಜಿ. ಸಿದ್ನಾಳ, ತಾಲೂಕು ಘಟಕದ ಅಧ್ಯಕ್ಷ ಬಿ. ಜಿ. ವಾಲಿಇಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಮಹಾನಗರ ಪ್ರಧಾನ ಕಾರ್ಯದರ್ಶಿ ಸಿ. ಎಂ. ಬೂದಿಹಾಳ, ತಾಲೂಕ ಕಾರ್ಯದರ್ಶಿ ಆನಂದ ಕೊಂಡಗುರಿ, ಉಪಾಧ್ಯಕ್ಷ ಮುರಗೇಶ ಶಿವಪೂಜಿ, ಬಜಾಂಚಿ ಮುರಿಗೆಪ್ಪ ಬಾಳಿ, ಪ್ರವೀಣ ಚಿಕಲಿ, ಅರವಿಂದ ಪರುಶೆಟ್ಟಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಸುಜಾತಾ ಮತ್ತಿಕಟ್ಟಿ, ರತ್ನಾ ಬೆಣಚನಮರಡಿ ಸೇರಿದಂತೆ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಬಸವಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *