ಬಸವತತ್ವ ಕೇವಲ ಧರ್ಮವಲ್ಲ, ಸಂಘಟಿತ ರಾಷ್ಟ್ರೀಯವಾದಿ ಚಳುವಳಿ: ಜೆ. ಎಸ್. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಜಗಳೂರು:

‘ವೈದಿಕ ಶಕ್ತಿಗಳ ಹುನ್ನಾರದಿಂದ ಜಗತ್ತಿನಲ್ಲೇ ಜಾತ್ಯಾತೀತ ಹಾಗೂ ವೈಚಾರಿಕ ಶರಣತತ್ವ ಚಿಂತನೆಗಳು ವಿನಾಶಗೊಳ್ಳುತ್ತಿವೆ’ ಎಂದು ವಿಜಯಪುರದ ಶರಣತತ್ವ ಚಿಂತಕ ಡಾ. ಜೆ.ಎಸ್.ಪಾಟೀಲ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದಲ್ಲಿ ಈಚೆಗೆ ಮೂರು ದಿನ ಆಯೋಜಿಸಿದ್ದ ‘ದಾಸೋಹ ಸಂಸ್ಕೃತಿ ಉತ್ಸವ’ವದ ಉದ್ಘಾಟನಾ ಸಮಾರಂಭದಲ್ಲಿ ‘ಕಲ್ಯಾಣ ನಾಡು ಕಟ್ಟುವಲ್ಲಿ ಶರಣ ತತ್ವಗಳ ಚಿಂತನೆಗಳು’ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು.

ಮಠ-ಪೀಠಗಳು ಮತ್ತು ರಾಜಕಾರಣಿಗಳನ್ನು ಎಚ್ಚರಿಸುವ ಗಣಾಚಾರಿಗಳು ಹುಟ್ಟದ ಹೊರತು ಲಿಂಗಾಯತ ಧರ್ಮದ ಮೂಲ ತತ್ವಗಳನ್ನು ಉಳಿಸಲು ಸಾಧ್ಯವಿಲ್ಲ. ಬಸವತತ್ವದ ಮೊದಲ ಅನುಷ್ಠಾನವೇ ಮನುವಾದ ಮತ್ತು ಚಾತುವರ್ಣ ವ್ಯವಸ್ಥೆಯನ್ನು ಧಿಕ್ಕರಿಸುವುದಾಗಿದೆ.

ವೈದಿಕ ವ್ಯವಸ್ಥೆಯು ಪುರಾಣಗಳ ಕಾಲದಿಂದಲೂ ನಮಗೆ ಶತ್ರುಗಳನ್ನು ಹುಟ್ಟುಹಾಕುತ್ತಾ ಬಂದಿದೆ. ಆದರೆ 12ನೇ ಶತಮಾನದ ಕ್ರಾಂತಿಯಲ್ಲಿ ಅಂತಹ ಶಕ್ತಿಗಳಿಗೆ ಮನ್ನಣೆ ಸಿಗಲಿಲ್ಲ. ಬಸವತತ್ವ ಎನ್ನುವುದು ಕೇವಲ ಧರ್ಮವಲ್ಲ, ಅದು 18 ಜಾತಿಗಳನ್ನು ಸಂಘಟಿಸಿ ರೂಪಿಸಿದ ಒಂದು ಮಹಾನ್ ರಾಷ್ಟ್ರೀಯವಾದಿ ಚಳವಳಿ ಎಂದು ವಿಶ್ಲೇಷಿಸಿದರು.

ನಕಲಿ ರಾಷ್ಟ್ರವಾದಿಗಳು ಧರ್ಮ ಮತ್ತು ಭಕ್ತಿಯ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಸಂವಿಧಾನಬದ್ಧ ಸೌಲಭ್ಯಗಳಿಂದ ಅವರನ್ನು ವಂಚಿತರನ್ನಾಗಿ ಮಾಡಿ, ಅಪರಾಧ ಚಟುವಟಿಕೆಗಳತ್ತ ತಳ್ಳುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರಾಷ್ಟ್ರದ ರಕ್ಷಣೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಎಚ್ಚರಿಸಿದರು.

ದಾಸೋಹ ಮಠದ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ,
‘ಮೂರನೇ ವರ್ಷದ ದಾಸೋಹ ಸಂಸ್ಕೃತಿ ಉತ್ಸವದೊಂದಿಗೆ ಬಸವ ಬದ್ದತೆಯ ಬೀಜಗಳನ್ನು ಬಿತ್ತಲಾಗುತ್ತಿದೆ. ಮಧ್ಯಕರ್ನಾಟಕ ಭಾಗದಲ್ಲಿ ಸಾಂಸ್ಕೃತಿಕ ಬಸವ ಕೇಂದ್ರವನ್ನಾಗಿಸಲಾಗುವುದು.
12ನೇ ಶತಮಾನದಲ್ಲಿ ಹಚ್ಚಿದ ಸಮತಾ ಜ್ಯೋತಿಯು ನಂದಿ ಹೋಗದಂತೆ ಕಾಪಾಡುವ ಹೊಣೆಗಾರಿಕೆ ನಮ್ಮದಾಗಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಸಂಗಿ ಮಠದ ಬಸವ ಮಹಾಂತ ಸ್ವಾಮೀಜಿ, ಚಿತ್ರದುರ್ಗ ಮುರುಘಾಮಠದ ಮುರುಘೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನ ನಡೆಯಿತು.

‌ಕಾನಾಮಡಗು ದಾಸೋಹ ಮಠದ ಐಮಡಿ ಶರಣಾರ್ಯರು, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ನಂದೀಶ, ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ವೀರೇಶ, ಬಸವ ಬಳಗದ ಅಧ್ಯಕ್ಷ ನರೇಶಪ್ಪ, ಸರ್ವಮಂಗಳಮ್ಮ, ಶೈಲಜಾಬಾನು, ಮಂದಾಕಿನಿ, ಹುಚ್ಚಪ್ಪ, ರಾಘವೇಂದ್ರ, ಹಲಸಂಗಿ ಮತ್ತಿತರರು ಇದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *