ಬೆಂಗಳೂರು
ನಗರದ ರಾಜಾಜಿನಗರದಲ್ಲಿನ ಬಸವ ಮಂಟಪದ ಸುವರ್ಣ ಮಹೋತ್ಸವ ಸಮಾರಂಭ ಹಾಗೂ 830ನೇ ಬಸವ ಪಂಚಮಿ ಆಗಸ್ಟ್ 2 ಹಾಗೂ 3ರಂದು ಸಂಭ್ರಮದಿಂದ ನಡೆಯಿತು.
ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ನಿಜಗುಣಾನಂದ ಮಹಾಸ್ವಾಮಿಗಳು, ಮಾತೆ ಡಾ. ಗಂಗಾದೇವಿ ಮತ್ತಿತರರು ಸಾನಿಧ್ಯ ವಹಿಸಿದ್ದರು.

ಸಚಿವ ಎಂ.ಬಿ. ಪಾಟೀಲ ಮುಖ್ಯ ಅತಿಥಿಯಾಗಿದ್ದ ಎಸ್. ಎಂ. ಜಾಮದಾರ ಅವರೊಂದಿಗೆ ಮಹೋತ್ಸವ ಉದ್ಘಾಟಿಸಿದರು.
ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಪೂಜ್ಯ ಮಾತೆ ಮಹಾದೇವಿ ಅವರು ವಿಶ್ವ ಕಲ್ಯಾಣ ಮಿಷನ್ ಮೂಲಕ ಬಸವ ಮಂಟಪ ಸ್ಥಾಪಿಸಿ, ಬಸವಾದಿ ಶರಣರ ತತ್ವಗಳ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದರು. ನಾಡು ಕಂಡ ಅತ್ಯಂತ ಶ್ರೇಷ್ಠ ಮಹಿಳಾ ಜಗದ್ಗುರುಗಳು ಮಾತಾಜಿ ಅವರು ಆಗಿದ್ದರು. ಅವರ ದೃಢ ಸಂಕಲ್ಪ ಮತ್ತು ಬದ್ಧತೆಯಿಂದಾಗಿ ಸಂಸ್ಥೆ ಇಂದು ಸುವರ್ಣ ಮಹೋತ್ಸವ ಆಚರಿಸುವಂತಾಗಿದ್ದು, ಹೆಮ್ಮೆಯ ಕ್ಷಣವಾಗಿದೆ.
ಬಸವ ಮಂಟಪದ ಈ ಸುವರ್ಣ ಸಾಧನೆ ಶರಣ ತತ್ವದ ಮಹಿಮೆಯನ್ನು ಮುಂದಿನ ತಲೆಮಾರಿಗೆ ಸಾರುವ ದೀಪವಾಗಲಿ ಎಂದು ಎಂ.ಬಿ. ಪಾಟೀಲ ಭಾಷಣದಲ್ಲಿ ಹೇಳಿದರು.
ಖ್ಯಾತ ಸಾಹಿತಿಗಳು, ಜಾನಪದ ವಿದ್ವಾಂಸರು, ನಾಡೋಜ ಶರಣ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ‘ಬಸವ ಕಾಯಕ ರತ್ನ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇದಿಕೆಯ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಮತ್ತು ಗಮನಾರ್ಹ ಸೇವೆ ಸಲ್ಲಿಸಿದ ಸಾಧಕ ಶರಣರನ್ನು ಸನ್ಮಾನಿಸಲಾಯಿತು.
ಶರಣ ವೈದ್ಯರತ್ನ ಪುರಸ್ಕೃತ ಡಾ. ಅಮರೇಶ್ ಮಿಣಜಗಿ, ಡಾ. ಸಿ. ವಿ. ದೇವರಾಜ, ಬೆಂಗಳೂರಿನ ಮಾಜಿ ಉಪಮಹಾಪೌರರಾದ ಬಿ.ಎಸ್. ಪುಟ್ಟರಾಜು, ಮುಖಂಡರಾದ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಇಷ್ಟಲಿಂಗ ಪೂಜೆ, ವಚನ ಗಾಯನ, ವಚನ ವೈಭವ ವಿಶೇಷ ನೃತ್ಯಗಳು ಜರುಗಿದವು. ಸುವರ್ಣ ಮಹೋತ್ಸವ ಸ್ವಾಗತ ಸಮಿತಿ, ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶರಣ-ಶರಣೆಯರು, ಬಸವಭಕ್ತರು ಮಹೋತ್ಸವದಲ್ಲಿ ಉಪಸ್ಥಿತರಿದ್ದರು.