ಬೀದರ
ಶ್ರೀಮಂತಿಕೆ ಎನ್ನುವುದು ಸಂಪತ್ತಲ್ಲ. ಶ್ರೀಮಂತಿಕೆ ಎಂದರೆ ಜ್ಞಾನ. ಭೂಮಿ, ಹೇಮ, ಕನಕ, ಕಾಮಿನಿಗಾಗಿ ಜಗತ್ತೆಲ್ಲ ಬಡೆದಾಡಿ ಹೊಡೆದಾಡಿ ಸತ್ತಿದೆ. ಆದರೆ ಶರಣರು ನಿಜವಾದ ಸಂಪತ್ತು ಎಂದರೆ ಜ್ಞಾನರತ್ನ ಎಂದು ತಿಳಿಸುತ್ತಾರೆ. ಅಂತಹ ಜ್ಞಾನ ರತ್ನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತಿನಲ್ಲಿ ಅತ್ಯಂತ ಶ್ರೀಮಂತರಾಗುತ್ತೇವೆ ಎಂದು ಅಲ್ಲಮಪ್ರಭುದೇವರು ತಿಳಿಸುತ್ತಾರೆ.
ಲಿಂಗಾಯತ ಮಹಾಮಠ ಗೋರುಟಾ(ಬಿ) ಗ್ರಾಮದಲ್ಲಿ ಬಸವ ಪಂಚಮಿಯ ನಿಮಿತ್ಯ ಮಕ್ಕಳ ಗೋಷ್ಠಿಯ ಉದ್ದೇಶಿಸಿ ಪ್ರಜ್ವಲ ಪತಂಗೆ ಮಾತನಾಡಿದರು.
ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ಹಿರಿಯಪ್ಪ ರಾಜ್ಯವು ನೀಡಿದರು ಬೇಡವೆನ್ನುತ್ತಾರೆ. ಶರಣರ ಅನುಭವ ನುಡಿಗಳು ಸಿಕ್ಕರೆ ದೇವನನ್ನೇ ಬೇಡವೆನ್ನುತ್ತಾರೆ. ಶರಣರ ನುಡಿಗಡಣಗಳು ಬದುಕಿನ ದಾರಿದೀಪಗಳು. ವಚನಗಳು ಓದುತ್ತಾ, ಶರಣರ ತತ್ವವನ್ನು ತಿಳಿದು ಬದುಕಿದರೆ ಜೀವನದಲ್ಲಿ ಪರಮ ಸುಖ ದೊರೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯಶ್ರೀ ಪ್ರಭುದೇವ ಮಹಾಸ್ವಾಮೀಜಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗುತ್ತಾರೆ. ಮಕ್ಕಳಲ್ಲಿ ತತ್ವ ಬಿತ್ತಿದರೆ ಅದು ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ಸತ್ ಪ್ರಜೆಗಳಾಗುತ್ತಾರೆ.
ಗುರು ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಕಟ್ಟಿ ಕಾಯಕ ದಾಸೋಹದ ತಳಹದಿಯ ಮೇಲೆ ಸದೃಢ ಸಮಾಜವನ್ನು ನಿರ್ಮಿಸಿದರು. ಅಂತೆಯೇ ಚೆನ್ನಬಸವಣ್ಣನವರು ಹೇಳುತ್ತಾರೆ, ಹೊಟ್ಟು ಹಾರಿತು ಗಟ್ಟಿ ಉಳಿದಿತ್ತು ಮಿಕ್ಕಿದು ಪಲ್ಲವಿಸಿತ್ತು ಬಸವಣ್ಣನೊಬ್ಬನೇ ಕರ್ತನಾದ ಎನ್ನುತ್ತಾರೆ.
ಜಗತ್ತು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳುವ ದಿನಮಾನಗಳು ಬರುತ್ತವೆ. ಮನುಕುಲಕ್ಕೆ ಮಾರ್ಗದರ್ಶನ ಮಾಡುವ ತತ್ವ ಶರಣರ ವಚನಗಳಲ್ಲಿದೆ.
ದುರ್ದೈವವೆಂದರೆ ಅದೇ ನೆಲದಲ್ಲಿ ಹುಟ್ಟಿರುವ ಅನೇಕರು ಇಂದಿಗೂ ಬಸವ ತತ್ವ ಅರಿತಿಲ್ಲ. ಅರಿತು ಆಚರಿಸುವ ಮಕ್ಕಳಿಗೆ ತತ್ವ ತಿಳಿಸುವ ಕಾರ್ಯ ಭರದಿಂದ ಸಾಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂದಾಕಿನಿ ಕಾದೇಪೂರೆ ಚಿಂತನೆಗೈದರು. ಪ್ರಜ್ವಲ ರಾಜೋಳೆ ವಚನ ಗಾಯನ ಮಾಡಿದರು. ಆಯುಷ್ ಪತಂಗೆ ವಚನ ಪಠಣ ಮಾಡಿದರು. ಶ್ರಾವಣಿ ಭೀಮಣ್ಣ ರಾಜೋಳೆ ನಿರೂಪಣೆ ಮಾಡಿದರು. ಸಿದ್ಧಾರೂಢ ಯರನಾಳೆ ಸ್ವಾಗತಿಸಿದರು. ಪ್ರಾಂಜಲಿ ಕಣಜೆ ವಚನ ನೃತ್ಯ ಮಾಡಿದರು.