ಸಿರಿಗೆರೆ
ನಾವು ಬಸವ ಧರ್ಮೀಯರು, ಬಸವ ಪಂಥೀಯರು ಹಾಗೂ ಬಸವ ತತ್ವದವರು ಎಂದು ಹೇಳಿಕೊಳ್ಳುವವರು ಮೀಸಲಾತಿ ಕೇಳಬಾರದು ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ಆಯೋಜಿಸಲಾಗಿರುವ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಕೊನೆಯ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಾತಿಯ ಕಾರಣಕ್ಕಾಗಿ ಮೀಸಲಾತಿ ಕೇಳುವುದರಲ್ಲಿ ಅಭ್ಯಂತರವಿಲ್ಲ. ಆದರೆ, ಬಸವಧರ್ಮೀಯರು ಎಂದು ಹೇಳಿಕೊಳ್ಳುವವರಾದರೆ ಮೀಸಲಾತಿ ಕೇಳಬಾರದು. ಒಂದು ವೇಳೆ ಸರ್ಕಾರ ಮೀಸಲಾತಿ ಕೊಟ್ಟರೂ ಸಹ, ಉದಾರವಾಗಿ ಕೆಳ ವರ್ಗದ ಜನರಿಗೆ ಹಂಚಿಕೆ ಮಾಡಿ ಎಂದು ಹೇಳಬೇಕು ಎಂದು ಶ್ರೀಗಳು ಅಭಿಪ್ರಾಯ ಪಟ್ಟರು
ಜಾತಿ ಗಣತಿ
ರಾಜ್ಯ ಸರ್ಕಾರ ಜಾತಿ ಹಾಗೂ ಉಪಜಾತಿಗಳ ಗಣತಿ ಮಾಡುವುದು ರಾಜ್ಯದ ಜನತೆಯ ಮಾನಸಿಕ ಆರೋಗ್ಯಕ್ಕೆ ಬಹುದೊಡ್ಡ ಕುಠಾರಾಘಾತ. ಇಡೀ ರಾಜ್ಯದ ಜನತೆಯ ಜಾತಿ ಉಪಜಾತಿ ಕೇಳುವುದು ಮುಂದೆ ದೊಡ್ಡ ಜಾತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅಗತ್ಯ ಸೌಲಭ್ಯ ಕೊಡಿ. ಆದರೆ, ಅವರನ್ನು ಹೊರತು ಪಡಿಸಿ ಇತರೆ ಹಿಂದುಳಿದ ವರ್ಗದವರ ಜಾತಿ ಗಣತಿ ಮಾಡಲೇ ಬಾರದು. ಈ ಸಮುದಾಯದಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದವರನ್ನು ಗುರುತಿಸಿ ನೆರವು ನೀಡಬೇಕು. ಹಿಂದುಳಿದ ವರ್ಗದವರನ್ನು ಬಡತನ ಹಾಗೂ ಆದಾಯದ ಆಧಾರದ ಮೇಲೆ ವರ್ಗೀಕರಿಸಿ ಮೀಸಲಾತಿ ನೀಡಬೇಕು. ಅದೇ ನಿಜವಾದ ಬಸವ ತತ್ವ ಆಚರಣೆ ಎಂದು ಶ್ರೀಗಳು ಹೇಳಿದರು.
ಸಮಾಜದಲ್ಲಿ ನಾವು ಬೇರೆಯವರ ಜಾತಿಯನ್ನು ಕೇಳುವುದೇ ಅಸಭ್ಯತನ. ಹೀಗಿರುವಾಗ ಇಡೀ ರಾಜ್ಯದ ಜನತೆಯ ಜಾತಿ – ಉಪಜಾತಿ ಕೇಳುವುದು ಸರಿಯಲ್ಲ. ಜಾತಿ ಗುರುತಿಸಿ ಜಾತಿ ಸಂಘರ್ಷ ಮಾಡಿದರೆ ದೇವರು ಕ್ಷಮಿಸುವುದಿಲ್ಲ ಎಂದು ತರಳಬಾಳು ಜಗದ್ಗುರುಗಳು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಮಠಗಳು ತಮ್ಮ ಪರಂಪರೆ – ಸಂಸ್ಕಾರವನ್ನು ಭಕ್ತರಿಗೆ ನೀಡುತ್ತವೆ. ಗುರುಗಳು ಪರಂಪರೆ – ಸಂಸ್ಕಾರ ಕಲಿಸುವ ಜೊತೆಗೆ ವರ್ತಮಾನದ ಸವಾಲಿಗೆ ಸ್ಪಂದಿಸುವ ಎರಡು ಪಟ್ಟಿನ ಹೊಣೆ ಹೊಂದಿರುತ್ತಾರೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ – ಸಂಸ್ಕಾರ ಕೊಡುವ ಮಹತ್ಕಾರ್ಯ ಮಠಗಳಿಂದ ಆಗಿದೆ. ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಮಠಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ. ಬಸವ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಸಮಾಜಕ್ಕೆ ಧರ್ಮ – ಜ್ಞಾನ ಅರ್ಪಿಸಿದ್ದರು. ಹಿಂದುಳಿದವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದರು. ಮಠವನ್ನು ಶಿಕ್ಷಣ, ಕಲೆ, ಸಂಸ್ಕೃತಿ ಹಾಗೂ ಜನ ಜಾಗೃತಿಯ ಕೇಂದ್ರವಾಗಿ ರೂಪಿಸಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ವಹಿಸಿದ್ದರು.
ಸಮಾರಂಭದಲ್ಲಿ ಶಾಸಕರಾದ ಯು.ಬಿ. ಬಣಕಾರ್, ಎಂ. ಚಂದ್ರಪ್ಪ, ಹೆಚ್.ಡಿ. ತಮ್ಮಯ್ಯ, ಶಿವಗಂಗಾ ಬಸವರಾಜ್, ಪ್ರಕಾಶ್ ಕೋಳಿವಾಡ, ಟಿ. ರಘುಮೂರ್ತಿ ಹಾಗೂ ಮುಖಂಡರಾದ ಪ್ರದೀಪ್ ಶಾಂತನಗೌಡ, ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ, ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಪ್ರಾಚಾರ್ಯ ನಾ. ಲೋಕೇಶ್ ಒಡೆಯರ್ ನಿವೃತ್ತ, ಮಾಜಿ ಸಚಿವ ಹೆಚ್. ಆಂಜನೇಯ, ಸಾಹಿತಿ ಬಿ.ಟಿ. ಶಶಿಕಲಾ ದೇವಿ, ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಹೆಚ್.ವಿ. ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.