ಬಸವಪರ ಸಂಘಟನೆಗಳಿಂದ ಯೋಧ ಸಿದ್ದಪ್ಪ ಜೀವಣಗಿ ಅವರಿಗೆ ಸನ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ

ಯೋಧ ಸಿದ್ದಪ್ಪ ಎಸ್. ಜೀವಣಗಿ ಅವರು 23 ವರ್ಷಗಳ ಕಾಲ ಗಡಿ ಭದ್ರತಾ ಪಡೆ(BSF)ಯಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ಅವರನ್ನು ಬಸವಪರ ಸಂಘಟನೆಗಳಿಂದ ಶನಿವಾರ ಸತ್ಕರಿಸಲಾಯಿತು.

ಕಲ್ಯಾಣ ಮಹಾಮನೆ, ಗುಣತೀರ್ಥವಾಡಿ, ಬಸವಕಲ್ಯಾಣದ ಪೂಜ್ಯ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಎನ್.ಜೆ. ಕಲ್ಯಾಣ ಮಂಟಪದ ಹತ್ತಿರ, ಸಿದ್ಧರಾಮೇಶ್ವರ ಕಾಲೋನಿಯಲ್ಲಿ ಸಮಾರಂಭ ನಡೆಯಿತು.

ಸಿದ್ದಪ್ಪ ಅವರ ಕುರಿತು, “ನಿಮ್ಮ ಧೈರ್ಯ, ತ್ಯಾಗ ಹಾಗೂ ದೇಶಪ್ರೇಮ ಸದಾ ನಮಗೆ ಮಾರ್ಗದರ್ಶಕವಾಗಲಿ. ನಿಮ್ಮ ಭವಿಷ್ಯ ಉಜ್ವಲವಾಗಿರಲೆಂದು ನಿಮಗೂ, ನಿಮ್ಮ ಕುಟುಂಬಕ್ಕೂ ಗುರು ಬಸವಣ್ಣನವರ ಕೃಪೆ ಸದಾ ಇರಲಿ” ಎಂದು ಪೂಜ್ಯಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು.

ಸನ್ಮಾನ ಸ್ವೀಕರಿಸಿ ಸಿದ್ದಪ್ಪ ಜೀವಣಗಿ ಮಾತನಾಡಿ, ನಾವು ದೇಶಕ್ಕಾಗಿ ತ್ಯಾಗ ಮಾಡುವುದರ ಹಿಂದೆ ತಂದೆ-ತಾಯಿ, ಹೆಂಡತಿ-ಮಕ್ಕಳ, ಕುಟುಂಬಸ್ಥರ ತ್ಯಾಗ ಇದೆ. ದೇಶ ಸೇವೆಗಿಂತ ಮಿಗಿಲು ಮತ್ತಾವುದು ಇಲ್ಲ. ತನ್ನ 23ನೇ ವಯಸ್ಸಿನಲ್ಲಿ ನಗುನಗುತ್ತಾ ಬ್ರಿಟೀಷರ ವಿರುದ್ಧ ನೇಣುಗಂಬವೇರಿದ ಹುತಾತ್ಮ ಭಗತಸಿಂಗ್ ಅವರ ತ್ಯಾಗದ ಮುಂದೆ ನಮ್ಮದೇನೂ ಅಲ್ಲವೆಂದರು. 23 ವರ್ಷ ಕಾಲ ಮಾಡಿದ ಸೇವೆ ನನಗೆ ತೃಪ್ತಿ ತಂದಿದೆ. ಯುವಕರು ದೇಶಾಭಿಮಾನಿಗಳಾಗಬೇಕು, ತಂದೆ ತಾಯಿ ಮಕ್ಕಳಿಗೆ ದೇಶಪ್ರೇಮದ ಉತ್ತಮ ಸಂಸ್ಕಾರ ನೀಡಬೇಕು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದಪ್ಪ ಅವರ ತಾಯಿ ಮಂಗಲ ಜೀವಣಿಗೆ ಮಾಡಿದರು.
ಹರ್ಷಾನಂದ ಗುತ್ತೇದಾರ, ಜಗದೇವಿ ಚಟ್ಟಿ, ಆನಂದ ಪಾಟೀಲ, ಉದಯ ಸಾಲಿ, ಸೈನಿಕ ಸುಭಾಷ, ಮುಲ್ಲಾ ಮಹಮ್ಮದ್, ಕೃಷ್ಣಾ ನಾಯಕ, ರೇವಣಪ್ಪ ಹೆಗ್ಗಣಿ, ನಾಗೇಂದ್ರಪ್ಪ ನಿಂಬರ್ಗಿ, ಜ್ಯೋತಿ ಎಸ್. ಕಟ್ಟಾಳೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಕ್ರಾಂತಿ ಗಂಗೋತ್ರಿ ಮಹಿಳಾ ಸಂಘಟನೆ, ಬಸವಪರ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿ, ಸಿದ್ದಪ್ಪ ಜೀವಣಗಿ ಅವರ ಸೇವೆಯನ್ನು ಶ್ಲಾಘಿಸಿದವು.

ವಿಜಯಲಕ್ಷ್ಮಿ ಎಸ್. ಕೆಂಗನಾಳ ಮತ್ತು ಸಂತೋಷ ಕೋಡ್ಲಿ ವಚನ ಸಂಗೀತ ಪ್ರಾರ್ಥನೆ ನಡೆಸಿಕೊಟ್ಟರು. ಪ್ರೊ. ನಾಗಪ್ಪ ಜೀವಣಿಗಿ ಸ್ವಾಗತಿಸಿದರು. ಶಿವಲಿಂಗಪ್ಪ ನಿರೂಪಿಸಿ, ವಂದಿಸಿದರು.

ಸಿದ್ದಪ್ಪ ಜೀವಣಗಿ ಅವರ ಸೇವಾ ಪರಿಚಯ

ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮುಗನೂರು ಗ್ರಾಮದಲ್ಲಿ ಜನಿಸಿದ ಸಿದ್ದಪ್ಪ ಎಸ್. ಜೀವಣಗಿ ಅವರು ಬಾಲ್ಯದಿಂದಲೇ ಶಿಸ್ತು, ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ಪರಂಪರೆಯನ್ನು ಅನುಸರಿಸಿ, 01-06-2002 ರಂದು ಗಡಿಭದ್ರತಾ ಪಡೆಯಲ್ಲಿ ಸೇರ್ಪಡೆಗೊಂಡರು. 23 ವರ್ಷಗಳ ಸೇವಾ ಅವಧಿಯಲ್ಲಿ ಅವರು ಭಾರತದ ಗಡಿಭಾಗಗಳಲ್ಲಿ ಹಾಗೂ ನಕ್ಸಲ್ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾತ್ರ ವಹಿಸಿದರು.

ಭಾರತದ ಗಡಿಭಾಗಗಳಾದ ಜಮ್ಮು ಮತ್ತು ಕಾಶ್ಮೀರ 3 ವರ್ಷ, ಪಶ್ಚಿಮ ಬಂಗಾಳ (ಭಾರತ-ಬಾಂಗ್ಲಾ ಗಡಿ) 2 ವರ್ಷ, ಮಿಜೋರಾಂ (ಭಾರತ-ಬರ್ಮಾ ಗಡಿ) 2.5 ವರ್ಷ, ಅಸ್ಸಾಂ (ಭಾರತ-ಬಾಂಗ್ಲಾ ಗಡಿ) 5 ವರ್ಷ, ಗುಜರಾತ (ಭಾರತ-ಪಾಕಿಸ್ತಾನ ಗಡಿ) 5 ವರ್ಷ, ಪಂಜಾಬ್ (ಭಾರತ-ಪಾಕಿಸ್ತಾನ ಗಡಿ) 5 ವರ್ಷ ಸೇವೆ ಸಲ್ಲಿಸಿದ್ದಾರೆ.

ಅವರು ಮುಖ್ಯವಾಗಿ ಜಾರ್ಖಂಡನ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ, ದೇಶದ ಭದ್ರತೆಗೆ ಕೊಡುಗೆ ನೀಡಿದ್ದಾರೆ. ಕೊನೆಯದಾಗಿ ಪಿರೋಜಪುರ (ಭಾರತ-ಪಾಕಿಸ್ತಾನ ಗಡಿ)ದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.

Share This Article
Leave a comment

Leave a Reply

Your email address will not be published. Required fields are marked *