ದಾವಣಗೆರೆ
ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.
ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.
ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.
ಇಂದು ಸನಾತನ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ಶರಣ ಆದಯ್ಯನವರ ಕೆಲವು ವಚನಗಳು:
ಹಾಲಿನಲ್ಲಿ ಬೆಣ್ಣೆ ಇರುವಂತೆ, ಇಷ್ಟಲಿಂಗದಲ್ಲಿಯೇ ಎಲ್ಲಾ ತೀರ್ಥಕ್ಷೇತ್ರಗಳಿವೆ.
ಹಾಲ ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?
ಲಿಂಗತೀರ್ಥಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇಕೆ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ,
ತಡೆಯದೆ ಹುಟ್ಟಿಸುವ ಶ್ವಾನನ ಗರ್ಭದಲ್ಲಿ.
ಅದೆಂತೆಂದಡೆ:
ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಂ ತು ಯೋ ಭಜೇತ್
ಶುನಾಂ ಯೋನಿಃ ಶತಂ ಗತ್ವಾ ಚಂಡಾಲಗೃಹಮಾವಿಶೇತ್
ಎಂದುದಾಗಿ, ಗುರು ಕೊಟ್ಟ ಲಿಂಗದಲ್ಲಿ
ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು
ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ,
ತೀರ್ಥಲಿಂಗವ ಹಿರಿದುಮಾಡಿ ಹೋದವಂಗೆ
ಅಘೋರನರಕ ತಪ್ಪದು ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
ವೇದ, ಶಾಸ್ತ್ರಗಳು ಬೇರೆ ಬೇರೆ ದೇವರನ್ನು ಗುರುತಿಸುತ್ತವೆ. ಆದರೆ ಇವರಾರು ನಿಜವನ್ನು ತಿಳಿಯದವರು.
ವೇದವಿತ್ತುಗಳು ಅಗ್ನಿಪುರುಷನೆ ದೇವರೆಂಬರಯ್ಯಾ.
ಶಾಸ್ತ್ರವಿತ್ತುಗಳು ಪಾಷಾಣವನೆ ದೇವರೆಂಬರಯ್ಯಾ.
ಆತ್ಮವಿತ್ತುಗಳು ಆತ್ಮನೆ ದೇವರೆಂಬರಯ್ಯಾ.
ಶಬ್ದವಿತ್ತುಗಳು ಸಮಯಂಗಳನೆ ದೇವರೆಂಬರಯ್ಯಾ
ಇವರೆಲ್ಲರೂ ನಮ್ಮ ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವನರಿಯದೆ
ಜವನ ಜಾಡ್ಯಂಗಳಿಂ ಭವಭಾರಿಗಳಾದರಯ್ಯಾ.
ವೇದ, ಶಾಸ್ತ್ರ ಪುರಾಣ, ಆಗಮಗಳ ಹಿಂದೆ ಹೋಗಬೇಡಿ
ವೇದಂಗಳ ಹಿಂದೆ ಹರಿಯದಿರು ಹರಿಯದಿರು.
ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.
ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.
ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.
ವೇದ ಶಾಸ್ತ್ರ ಪುರಾಣ ಆಗಮಗಳು ಉಪನಿಷತ್ತುಗಳು ದೇವರ ನಿಜವನರಿಯದೇ ಹೋದವು.
ನಾಲ್ಕುವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ,
ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ
ಪಂಚಾಕ್ಷರದ ಸ್ವರೂಪವನರಿಯದೆ ನಿಂದವು.
ಏಳುಕೋಟಿ ಮಹಾಮಂತ್ರಂಗಳಿಗೆ ತಾನೆ ಮೂಲಮಂತ್ರವಾಗಿ
ಸುರತಿಗೆ ಅಣಿಮಾದಿಯ ಕೊಟ್ಟುಶರಣರಿಗೆ ತ್ರಿಣಯನ ಕೊಟ್ಟುದು
ಈ ಪಂಚಾಕ್ಷರ ಪ್ರಣವದೊಳಡಕವಾದ ಪಂಚಾಕ್ಷರವನರಿತಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗಸಂಜ್ಞೆಯ
ವರ್ಣವೆನ್ನ ಸರ್ವಾಂಗದಲ್ಲಡಗಿದವಯ್ಯಾ.

💐