ದಾವಣಗೆರೆ
ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.
ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.
ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.
ಇಂದು ಸನಾತನ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ಶರಣ ಉರಿಲಿಂಗ ಪೆದ್ದಿ ಅವರ ಕೆಲವು ವಚನಗಳು:
ಆಧ್ಯಾತ್ಮಿಕ ಸಾಧನೆಗೆ ಹೆಣ್ಣು ಹೊನ್ನು ಮಣ್ಣು ಬಿಟ್ಟು ಬ್ರಹ್ಮಚಾರಿ ಆಗಬೇಕು ಎಂಬುದು ಸನಾತನ ಧರ್ಮದ ಮುಖ್ಯ ವಾದ. ಉರಿಲಿಂಗ ಪೆದ್ದಿ ಅವರು ಇದನ್ನು ತಿರಸ್ಕರಿಸುತ್ತಾರೆ.
ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು,
ಬ್ರಹ್ಮಚಾರಿಗಳಾಗಬೇಕೆಂದು
ಬಣ್ಣುವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ.
ಹೆಣ್ಣು ಬಿಟ್ಟಡೆಯೂ ಹೊನ್ನ ಬಿಡರಿ,
ಹೊನ್ನ ಬಿಟ್ಟಡೆಯೂ ಮಣ್ಣ ಬಿಡರಿ.
ಒಂದ ಬಿಟ್ಟಡೆಯೂ ಒಂದ ಬಿಡರಿ.
ಬ್ರಹ್ಮಚಾರಿಗಳೆಂತಪ್ಪಿರಿ ಹೇಳಿರಣ್ಣಾ?
ಹೆಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು,
ಅವರೆಂತು ಹೇಳಿದರು? ನೀವೆಂತು ಕೇಳಿದಿರಿ?
ಹೆಣ್ಣನು ಹೆಣ್ಣೆಂದರಿವಿರಿ, ಹೊನ್ನನು ಹೊನ್ನೆಂದರಿವಿರಿ.
ಮಣ್ಣನು ಮಣ್ಣೆಂದರಿವಿರಿ, ಬ್ರಹ್ಮಚಾರಿಗಳೆಂತಪ್ಪಿರಣ್ಣಾ?
ಬಿಟ್ಟಡೆ, ಹೆಣ್ಣು ಹೊನ್ನು ಮಣ್ಣು ಈ ಮೂರನು ಬಿಟ್ಟು
ಜ್ಞಾನದಲ್ಲಿ ಸುಳಿಯಲ್ಲಡೆ, ಭವಂ ನಾಸ್ತಿ ತಪ್ಪದು.
ಹಿಡಿದಡೆ ಹೆಣ್ಣು ಮಣ್ಣು ಹೊನ್ನು ಈ ಮೂರನು ಹಿಡಿದು,
ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ,
ಭವಂ ನಾಸ್ತಿ ತಪ್ಪದು.
ಅದೆಂತೆಂದಡೆ: ವೀರಾಗಮೇ
‘ಮಾತರಃ ಪಿತರಶ್ಚೈವ ಸ್ವಪತ್ನೀ ಬಾಲಕಾಸ್ತಥಾ
ಹೇಮ ಭೂಮಿರ್ನಬಂಧಾಕಾಃ ಪ್ರಾಜ್ಞಾನಂ ಬ್ರಹ್ಮಚಾರಿಣಾಂ’
ಎಂದುದಾಗಿ,
ಹೆಣ್ಣು, ಹೊನ್ನು, ಮಣ್ಣು ಈ ಮೂರನು ಹಿಡಿದು
ಸದ್ಭಕ್ತಿಯಿಂ ದಾಸೋಹವ ಮಾಡಬಲ್ಲಡೆ ಭವಂ ನಾಸ್ತಿ.
ಅಲ್ಲಿ ಇದ್ದಡೆಯೂ ನೀರ ತಾವರೆಯಂತಿಪ್ಪರು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರು.
ಸನಾತನ ಧರ್ಮದಲ್ಲಿ ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಓದಿದವರು ಸರ್ವಶ್ರೇಷ್ಟ. ಅವುಗಳನ್ನು ಮೀರಿದವರು ಲಿಂಗವಂತರು, ಎನ್ನುತ್ತಾರೆ ಉರಿಲಿಂಗ ಪೆದ್ದಿ.
ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು,
ಆ ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ.
ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು.
ಆ ಲಿಂಗವಂತರ ಮಹಾಶಾಸ್ತ್ರಮಾರ್ಗವ ಲಿಂಗವೇ ಬಲ್ಲನಯ್ಯಾ.
ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು,
ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ.
ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು,
ಆ ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ.
ದೇವ ದಾನವಮಾನವರಿಗೆಯೂ ಅರಿಯಬಾರದು.
‘ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ
ಯಾ ಪುನಶ್ಶಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ’ ಎಂದುದಾಗಿ,
ಆರಿಗೆಯೂ ಅರಿಯಬಾರದು.
ಲಿಂಗವಂತರು ಉಪಮಾತೀತರು, ವಾಙ್ಮನೋತೀತರು, ಆರ ಪರಿಯೂ ಇಲ್ಲ.
ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾಃ
ಶಿವೇನ ಸಹ ತೇ ಭುಙ್ತ್ವಾ ಭಕ್ತಾ ಯಾಂತಿ ಶಿವಂ ಪದಂ’
ಲೋಕಾಚಾರನಿಬಂಧೇನ ಲೋಕಾಲೋಕವಿವರ್ಜಿತಾಃ
ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನಃ’ ಎಂದುದಾಗಿ,
ಈ ಲೋಕದ ಮಾರ್ಗವ ನಡೆಯರು,
ಲೋಕದ ಮಾರ್ಗವ ನುಡಿಯರು.
ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ
ಬೇರೆ ಕಾಣಿರಣ್ಣಾ.
ಶ್ರೀಗುರುಲಿಂಗದಿಂದಲುದಯಿಸಿ ಪ್ರಾಣಲಿಂಗಸಂಬಂಧಿಗಳಾದ
ಮಹಾಲಿಂಗವಂತರಿಗೆ ಪ್ರಾಣಲಿಂಗ, ಕಾಯಲಿಂಗ
ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ. ಇದು ಕಾರಣ,
ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ.
ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದೆಲ್ಲಾ ಪ್ರಸಾದ.
ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ವೇದ ಶಾಸ್ತ್ರ ಆಗಮ ಪುರಾಣಗಳನ್ನು ಮೀರಿದವನು ದೇವರು.
ವೇದಶಾಸ್ತ್ರಾಗಮಪುರಾಣಿಯಾದವರಿಂದತ್ತತ್ತ ನೀನು.
ನಾದ ಬಿಂದು ಕಳಾತೀತ ಮೂರು
ದೇವರರುವಿಂಗತ್ತತ್ತಗೋಚರ.
ಭೇದಿಸುವ ಭೇದಕರಿಗಭೇದ್ಯನು,
ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ.
ವೇದವನ್ನು ಓದಿದವನು ವೈಧಿಕನಾಗಬಹುದೇ ವಿನಃ ಭಕ್ತನಾಗಲು ಸಾಧ್ಯವಿಲ್ಲ. ಪುರಾಣಗಳನ್ನು ಓದಿದವರು ಪೌರಾಣಿಕ ಆಗಬಹುದೇ ವಿನಃ ಭಕ್ತನಾಗಲು ಸಾಧ್ಯವಿಲ್ಲ. ಶಾಸ್ತ್ರ ಓದಿದವರು ಶಾಸ್ತ್ರಜ್ಞನಾಗಬಹುದೇ ವಿನಃ ಭಕ್ತನಾಗಲು ಸಾಧ್ಯವಿಲ್ಲ.
ವೇದವನೋದಿ ಕೇಳಿದಡೇನು?
ವೇದಜ್ಞನಪ್ಪನಲ್ಲದೆ ಭಕ್ತನಲ್ಲ.
ಶಾಸ್ತ್ರಗಳನೋದಿ ಕೇಳಿದಡೇನು?
ಮಹಾಶಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲ.
ಪುರಾಣವನೋದಿ ಕೇಳಿದಡೇನು?
ಪುರಾಣಿಕನಪ್ಪನಲ್ಲದೆ ಭಕ್ತನಲ್ಲ.
ಆಗಮಂಗಳನೋದಿ ಕೇಳಿದಡೇನು?
ಆಗಮಿಕನಪ್ಪನಲ್ಲದೆ ಭಕ್ತನಲ್ಲ.
ಇಂತೀ ಸರ್ವವಿದ್ಯೆಂಗಳನೋದಿ ಕೇಳಿದಡೇನು?
ಇದಿರ ಬೋಧಿಸಿ ಉದರವ ಹೊರೆವ
ಉದರಪೋಷಕನಪ್ಪನಲ್ಲದೆ ಭಕ್ತನಲ್ಲ.
ಯಮಬಾಧೆಗಂಜಿ ಧರ್ಮವ ಮಾಡಿದಡೆ
ಧರ್ಮಿಯಪ್ಪನಲ್ಲದೆ ಭಕ್ತನಲ್ಲ.
ಸ್ವರ್ಗಭೋಗಿಯಪ್ಪನಲ್ಲದೆ ಭಕ್ತನಲ್ಲ.
ಇದು ಕಾರಣ,
ಶ್ರೀಗುರು ಲಿಂಗ ಜಂಗಮಕ್ಕೆ
ತನು ಮನ ಧನವನರ್ಪಿಸುವ ಭಕ್ತಿವುಳ್ಳಡೆ
ಭಕ್ತದೇಹಿಕ ದೇವ ಪರಶಿವನು,ಭಕ್ತಕಾಯ ಮಮಕಾಯ' ಎಂದುದಾಗಿ. ಲಿಂಗಾಲಿಂಗೀ ಮಹಾಜೀವೀ’ ಎಂದುದಾಗಿ
ಇಂತಪ್ಪ ಮಹಾಭಕ್ತಿಯುಳ್ಳ ಭಕ್ತನ
ಸತ್ಯನೆಂಬೆ, ಮುಕ್ತನೆಂಬೆ,
ಜಂಗಮವೆಂಬೆ, ಪ್ರಸಾದಿಯೆಂಬೆ, ಪರಮಸುಖಿಯೆಂಬೆನು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ಓದಿದವರನ್ನು ಹಿರಿಯರು ಅನ್ನಲು ಸಾಧ್ಯವೇ? ಇವು ಹೊಟ್ಟೆಪಾಡಿನ ಉದ್ಯೋಗ.
ವೇದಶಾಸ್ತ್ರಪುರಾಣಾಗಮಗ್ರಂಥಂಗಳ
ನೋಡಿದವರೆಲ್ಲರೇನು ಹಿರಿಯರೆಂಬೆನೆ?
ಅಲ್ಲಲ್ಲ, ನಿಲ್ಲು, ಮಾಣು.
ಅವರೇ ಹಿರಿಯರಾದಡೆ, ನಟ್ಟು[ವೆ], ಗಳೆಯಾಟ,
ಮಿಣಿಯಾಟ, ಅದೃಶ್ಯಕರಣ, ಅಗ್ನಿಸ್ತಂಭ, ಆಕರ್ಷಣ,
ಚೌಷಷ್ಠಿಕಲಾವಿದ್ಯೆಯ ಸಾಧಿಸಿದ ಡೊಂಬನೇನು ಕಿರಿಯನೇ?
ಇದು ಹಿರಿದು ಕಿರಿದಿನ ಪರಿಯಲ್ಲ.
ಹಿರಿದು ಕಿರಿದಿನ ಪರಿ ಬೇರೆ ಕಾಣಿರಣ್ಣಾ.
ಇದು ಉದರಪೋಷಣವಿದ್ಯೆ ಎನಿಸುವುದು.
ಅವರನೆಂತು ಸರಿ ಎಂಬೆನಯ್ಯ, ಲಿಂಗವಂತಂಗೆ?
ಇದು ಕಾರಣ, ಗುಣ, ಜ್ಞಾನ, ಧರ್ಮ, ಆಚಾರ,
ಶೀಲ ಸಾಧಿಸಿದಾತನೇ ಹಿರಿಯ ಕಾಣಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
