ಅಭಿಯಾನದಂತೆ ಬಸವ ಶಕ್ತಿ ಶಿಬಿರಗಳು ಯಶಸ್ವಿಯಾಗಲಿ: ಶರಣಬಸವ ನೀರಮಾನ್ವಿ

ಬಸವ ಮೀಡಿಯಾ
ಬಸವ ಮೀಡಿಯಾ

ಮಾನ್ವಿ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಮಾನ್ವಿ ಬಸವ ಕೇಂದ್ರದ ಮುಖಂಡ ಶರಣಬಸವ ನೀರಮಾನ್ವಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳಸಿಕೊಳ್ಳಬೇಕೆ? ಯಾಕೆ?

ಬಸವ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ ಇರಬೇಕು. ವಿಶ್ವಗುರು ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದರು. ಅವರ ರಾಜಕೀಯಕ್ಕೂ ಈಗಿನ ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಆದರೂ ಈಗಿನ ಪರಿಸ್ಥಿತಿಗೆ ರಾಜಕೀಯ ಪ್ರಜ್ಞೆ ಅತಿ ಮುಖ್ಯವಾಗಿದೆ.

ಎಲ್ಲಾ ರಾಜಕೀಯ ಮುಖಂಡರು ಬಸವತತ್ವದ ಪರವಿದ್ದಾರೆ ಅಂತ ಅಲ್ಲ, ಅದರಲ್ಲಿ ವಿರೋಧಿಗಳು ಇದ್ದಾರೆ. ಅವರ ಮಧ್ಯೆ ಬಸವತತ್ವ ಪ್ರಚಾರ, ನಮ್ಮ ಇತರೆ ಕೆಲಸಗಳು ಮಾಡಿಕೊಳ್ಳುವುದು, ಲಿಂಗಾಯತ ಧರ್ಮ ಹೋರಾಟಕ್ಕೂ ಬಲ ತಂದುಕೊಳ್ಳುವುದು ಅನಿವಾರ್ಯತೆ ಇದೆ.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ಬಸವ ಸಂಘಟನೆಗಳಿಗೆ ತರಬೇತಿಯ ಅವಶ್ಯಕತೆ ಇದೆ. ನಮ್ಮ ಸಂಘಟನೆಗಳಲ್ಲಿ ಪರ ವಿರೋಧ ಮಾಡುವುದು ನಿಲ್ಲಬೇಕು.

ಒಬ್ಬರು ಯಾವುದೇ ಒಂದು ಸರಿಯಾದ ಗುರಿ ಇಟ್ಟುಕೊಂಡಿದ್ದರೆ ಅದನ್ನು ಚರ್ಚಿಸಿ ಬೆಂಬಲಿಸುವ ಕಾರ್ಯವಾಗಬೇಕು. ಅದನ್ನು ಬಿಟ್ಟು ಅವರ ಸಾಧನೆ, ಸಂಘಟನೆಗೆ ಅಡ್ಡಿ, ಅತಂಕ ಉಂಟು ಮಾಡಿದರೆ ಸಂಘಟನೆಗಳು ಒಡೆಯುತ್ತವೆ. ನಮ್ಮ ಬಸವ ಸಂಘಟನೆಗಳಲ್ಲಿ ಇದೇ ಆಗಿದೆ.

ಸ್ವಾಮಿಗಳು, ಬಸವ ಭಕ್ತರು, ಯಾರೇ ಸಂಘಟನೆ ಮಾಡಲಿ ಮೊದಲು ಪ್ರೋತ್ಸಾಹ ನೀಡುವದು ಅತಿ ಮುಖ್ಯವಾಗಿದೆ.

ಇತೀಚೆಗೆ ನಡೆದ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸು ನಮ್ಮ‌ ಕಣ್ಣಮುಂದೆ ಇದೆ. ಲಿಂಗಾಯತ ಮಠಾಧೀಶರು, ಬಸವ ಅನುಯಾಯಿಗಳು ಸಂಘಟಿತರಾಗಿ, ಒಂದಾಗಿ ಮಾಡಿದಕ್ಕೆ ರಾಜ್ಯಮಟ್ಟದಲ್ಲಿ ಯಶಸ್ಸು ಕಂಡಿತು. ಆ ರೀತಿಯ ತರಬೇತಿ ಬಸವ ಸಂಘಟನೆಗಳಿಗೆ ಆಗಬೇಕು.

ನಾವು ಮಾಡುವ ಕಾರ್ಯದ ಗುರಿ, ಹೋರಾಟ ಮಾಡುವ ಕುರಿತು ತರಬೇತಿ ನೀಡುವ 3-4 ಜನ ಸಮರ್ಥರು ಅಪ್ಪಟ ಬಸವ ಭಕ್ತರಾಗಿರಬೇಕು. ಅವರ ತರಬೇತಿ ಎಲ್ಲರ ಮನಕ್ಕೆ ಮುಟ್ಟುವಂತಾದರೆ 100ರಲ್ಲಿ 70 ಜನರು ಸಂಘಟಿತರಾಗುವಲ್ಲಿ ಅನುಮಾನವಿಲ್ಲ.

3) ಬಸವಶಕ್ತಿ ಸಮಾವೇಶದ ರೂಪುರೇಷೆ ಬಗ್ಗೆ ನಿಮ್ಮ ಸಲಹೆ ಏನು?

ಬಸವಶಕ್ತಿ ಶಿಬಿರಗಳು, ಸಮಾವೇಶಗಳು ಹಮ್ಮಿಕೊಳ್ಳುವುದರಿಂದ ಸಂಘಟನೆ ಹೆಚ್ಚುತ್ತದೆ. ನಮ್ಮ ದೇಶ ಮತ್ತು ರಾಜ್ಯದಲ್ಲಿ ಬಸವಣ್ಣ ಯಾರು, ಲಿಂಗಾಯತ ಧರ್ಮ ಯಾಕೆ ಹುಟ್ಟು ಹಾಕಿದರು ಎಂಬುದು ಎಲ್ಲರಿಗೂ ತಿಳಿಯಬೇಕು.

ಬಸವಣ್ಣನವರ ತತ್ವ ಅತಿ ಹೆಚ್ಚು ಜನರ‌ ಮನ ಮುಟ್ಟಿದ್ದು ಮತ್ತು ಪ್ರಚಾರಕ್ಕೆ ಬಂದಿದ್ದು ಲಿಂಗಾಯತ ಧರ್ಮ ಮಾನ್ಯತೆ ಹೋರಾಟದಿಂದ ಅನ್ನುವುದು ಮರೆಯುವಂತಿಲ್ಲ.

ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು, ಕೇರಳ ಇತರೆ ರಾಜ್ಯಗಳಲ್ಲಿ ಲಿಂಗಾಯತ ಧರ್ಮ ಮಾನ್ಯತೆಗೆ ಹೋರಾಟ ನಡೆದವು. ನಮ್ಮ ಜನರಲ್ಲಿ ಸಂಘಟನಾ ಸಾಮರ್ಥ್ಯವಿದೆ ಎಂದು ಅರ್ಥವಾಗಿದ್ದು ಅವಾಗ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.

ಬಸವಣ್ಣನವರ ಮತ್ತು ಬಸವಾದಿ ಶರಣರ ಬಗ್ಗೆ ಯಾರೆ ಹಗುರವಾಗಿ ಮಾತನಾಡಿದರೆ ಸಾಕು ಖಂಡಿಸುವ, ಹೋರಾಡುವ ಕೆಲಸ ಬಸವಭಕ್ತರು ಮಾಡುತ್ತಿರುವುದು ಸಂಘಟನೆಯಿಂದ.

ಬಸವಶಕ್ತಿ ಶಿಬಿರಗಳಿಂದ ಯುವಕರನ್ನು ತಯಾರು ಮಾಡುವ ಕೆಲಸವಾಗಬೇಕು. ಶಿಬಿರ ದೊಡ್ಡ ಪ್ರಮಾಣದಲ್ಲಿ ಬೇಡ, ಜಿಲ್ಲಾ ಮಟ್ಟದಲ್ಲಿ ಇರಬೇಕು. ನಂತರ ರಾಜ್ಯಕ್ಕೆ ವಿಸ್ತರಣೆಯಾಗಲಿ. ಶಿಬಿರ ಅಂದ ಮೇಲೆ ಸಾಧಕ ಬಾಧಕ ಇದ್ದೇ ಇರುತ್ತದೆ. ನಮ್ಮವರೇ ಬೆಂಬಲಿಸುತ್ತಾರೆ, ಕೆಲವರು ವಿರೋಧಿಸಲೂ ಬಹುದು. ಅದಕ್ಕೆ ನಾವು ಹೆದರದೇ ಮುಂದೆ ಸಾಗಿದಾಗ ಶಿಬಿರದ ಮಹತ್ವ ಎಲ್ಲಾರಿಗೂ ಗೊತ್ತಾಗಿ ಬಸವಪರ ಸಂಘಟನೆಗೆ ನಿಲ್ಲುತ್ತಾರೆ. ವಿರೋಧದ ತಲೆಕೆಡೆಸಿಕೊಳ್ಳದೇ ಮುಂದೆ ಸಾಗಿದಾಗ ಭಾದಕಗಳೆಲ್ಲ ಸಾಧಕವಾಗುತ್ತವೆ.

4) ಸಮಾವೇಶ ಸಂಘಟಿಸಲು ನೆರವಾಗಲು ಆಸಕ್ತಿಯಿದೇಯೇ?

ಯಾವುದೇ ಸಂಘಟನೆಗೆ ಎಲ್ಲರೂ ತನು ಮನ ಧನದಿಂದ ಸಹಕರಿಸಬೇಕು. ಆಗಲೇ ಎಲ್ಲವು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಬಸವಣ್ಣನವರ ಕಾರ್ಯಕ್ಕೆ ಯಾವುದೇ ತಾಲೂಕು, ಜಿಲ್ಲೆ ಮತ್ತು ರಾಜ್ಯದಲ್ಲಿ ಯಾವುದೇ ಕಾರ್ಯಕ್ಕೆ ಸಹಕಾರ ನೀಡಲು ಸಾವಿರಾರು ಬಸವಭಕ್ತರು ಇದ್ದಾರೆ. ಆದರೆ ಅದು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು.

ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಧರ್ಮ ಹೋರಾಟಕ್ಕೆ ತನು ಮನ ಧನದಿಂದ ಬಸವಭಕ್ತರು ನೆರವಾಗಿದ್ದಾರೆ. ಎಲ್ಲರೂ ಸಹಕಾರ ನೀಡಿದ್ದರಿಂದ ಹೋರಾಟಗಳು ಯಶಸ್ವಿಯಾಗಿವೆ. ನಾಡಿನಾದ್ಯಂತ ಅಪ್ಪಟ ಬಸವ ಭಕ್ತರು ಇದ್ದಾರೆ, ಅವರನ್ನು ಸಂಘಟಿಸಿ ಮುಖ್ಯ ನೆಲೆಗೆ ತರುವ ಕೆಲಸ ಬಸವಶಕ್ತಿ ಶಿಬಿರದಿಂದ ಆಗಬೇಕು. ಖಂಡಿತ ಆಗುತ್ತದೆ.

ಮಾತಾಜಿ ಸಂಘಟಿಸಿದ ರಾಷ್ಟ್ರೀಯ ಬಸವದಳ, ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ಬಸವ ಕೇಂದ್ರ ಹಾಗೂ ಡಾ. ಜಾಮದಾರ ಅಣ್ಣನವರು ಸಂಘಟಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಇಂತಹ ಅನೇಕ ಪೂಜ್ಯರು, ಬಸವ ಅನುಯಾಯಿಗಳು ನಾನಾ ಸಂಘಟನೆಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಬಸವಣ್ಣ, ಶರಣರ ವಿರುದ್ಧ ಮಾತನಾಡಿದವರನ್ನು ಖಂಡಿಸುವ ಕೆಲಸ ಮಾಡಲು ಬಸವಶಕ್ತಿ ಶಿಬಿರದಿಂದ ಸಾಧ್ಯವಾಗುತ್ತದೆ ಎಂಬ ಆಶಯ ನಮ್ಮದು. ಬಸವಶಕ್ತಿ ಶಿಬಿರದ ಯಾವುದೇ ಕೆಲಸವಿರಲಿ ನಾವು ಕೈ ಜೋಡಿಸುತ್ತೇವೆ. ಜೊತೆಗೆ ಹೊರಾಟಕ್ಕೂ ಸಿದ್ದರಿದ್ದೇವೆ ಎಂದು ಭರವಸೆ ನೀಡುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
1 Comment
  • ಬಸವ ಶಕ್ತಿ ಶಿಬಿರ ಎನ್ನುವ ಬದಲು ಬಸವ ಜನಶಕ್ತಿ ಶಿಬಿರ ಎಂದಾಗಲಿ.

Leave a Reply

Your email address will not be published. Required fields are marked *