ಪಕ್ಷ ಸಿದ್ಧಾಂತಕ್ಕಿಂತ ಬಸವ ಸಿದ್ಧಾಂತಕ್ಕೆ ಮಾನ್ಯತೆ ಸಿಗಬೇಕು: ಮಲ್ಲೇಶ ರೇಷ್ಮೆರಾಜ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಸಂವಾದದಲ್ಲಿ ಜಾಗತಿಕ ಅಂಗಾಯತ ಮಹಾಸಭಾ ಹೊಸದುರ್ಗ ಘಟಕದ ಅಧ್ಯಕ್ಷ ಜೆ. ಮಲ್ಲೇಶ ರೇಷ್ಮೆರಾಜ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಬೇಕೆ? ಇದರಿಂದ ಅಂಗಾಯತ ಧರ್ಮದ ಹೋರಾಟ ಬಲಗೊಳ್ಳುತದೆಯೇ?

ನಾವು ಇತಿಹಾಸವನ್ನು ಓದಿದಾಗ ತಿಳಿಯುವುದೇನೆಂದರೆ ಯಾವ ಯಾವ ಧರ್ಮಗಳಿಗೆ ರಾಜ ಮನ್ನಣೆ ದೊರೆತಿತ್ತೋ ಅಂತಹ ಧರ್ಮಗಳು ಹೆಚ್ಚು ಪ್ರಚಾರಕ್ಕೆ ಬಂದು ಜಾಗತಿಕ ಮಟ್ಟದಲ್ಲಿ ಬೆಳೆದಿರುವುದನ್ನು ಕಾಣಬಹುದು. ಆದ್ದರಿಂದ ಒಂದು ಧರ್ಮದ ಉನ್ನತಿಗೆ ಆ ಧರ್ಮದಲ್ಲಿರುವ ಜನರ ರಾಜಕೀಯ ಪ್ರಜ್ಞೆ ತುಂಬಾ ಮುಖ್ಯವಾದುದು. ಇಂದು ಕೆಲವು ಲಿಂಗಾಯತ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಬಸವಧರ್ಮವನ್ನೇ ಬಲಿಕೊಡುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಇದರ ಅರಿವನ್ನು ನಮ್ಮ ಲಿಂಗಾಯತ ಸಮಾಜದಲ್ಲಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ.

2) ಎದ್ದೇಳು ಕರ್ನಾಟಕ, ದಲಿತ, ಅಲ್ಪಸಂಖ್ಯಾತ, ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ ಚುನಾವಣೆಗೆ ಸಂಬಂಧಿಸಿದ  ತರಬೇತಿ ನೀಡುತ್ತಿದೆ. ಅದೇ ರೀತಿ ಬಸವ ಸಂಘಟನೆಗಳಿಗೂ ತರಬೇತಿ ನೀಡಬೇಕೆ?

ಬಸವ ಸಂಘಟನೆಗಳಿಗೆ ರಾಜಕೀಯ ತರಬೇತಿ ನೀಡುವುದು ತುಂಬಾ ಅವಶ್ಯಕವಾಗಿದೆ. ಇಂದು ಸ್ವಾರ್ಥ ರಾಜಕಾರಣಿಗಳು ಬಸವತತ್ತ್ವವನ್ನು ತಮ್ಮ ಮೂಗಿನ ನೇರಕ್ಕೆ ಬೇಕಾದಂತೆ ತಿರುಚಿ ಜನರಲ್ಲಿ ಗೊಂದಲವುಂಟು ಮಾಡಿದ್ದಾರೆ. ಇದರಿಂದ ಲಿಂಗಾಯತ ಸಮಾಜ ಬಾಂಧವರಲ್ಲಿ ಸೈದ್ಧಾಂತಿಕ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತದೆ. ಆದ್ದರಿಂದ ಸರಿಯಾದ ರಾಜಕೀಯ ಮಾರ್ಗದರ್ಶಕರಿಂದ ತರಬೇತಿ ನೀಡಿದರೆ ಲಿಂಗಾಯತ ಧರ್ಮದ ಏಕತೆಗೆ ಸಹಾಯವಾಗುತ್ತದೆ.

3) ಈ ನಿಟ್ಟಿನಲ್ಲಿ ಬಸವಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾಧಕಗಳೇನು?

ಪ್ರಸ್ತುತ ಸಂದರ್ಭದಲ್ಲಿ ಲಿಂಗಾಯತ ಧರ್ಮೀಯರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತೊಡಗಿಕೊಂಡಿದ್ದು, ಕೆಲವು ಪಕ್ಷಗಳ ಸಿದ್ಧಾಂತಗಳು ಲಿಂಗಾಯತ ಧರ್ಮಕ್ಕೆ ಧಕ್ಕೆ ತರುವಂತಿವೆ. ಆದ್ದರಿಂದ ಪಕ್ಷ ಸಿದ್ಧಾಂತಗಳಿಗಿಂತಲೂ ಲಿಂಗಾಯತ ಧರ್ಮ ಸಿದ್ಧಾಂತಕ್ಕೆ ಹೆಚ್ಚು ಮಾನ್ಯತೆ ನೀಡುವಂತೆ ಮಾಡಲು ಬಸವಶಕ್ತಿ, ಶಿಬಿರ ಸಮಾವೇಶಗಳನ್ನು ಆಯೋಜಿಸಬೇಕು. ಈ ಶಿಬಿರ ಸಮಾವೇಶಗಳು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿರದಂತೆ ಎಚ್ಚರಿಕೆ ವಹಿಸಿ ಎಲ್ಲಾ ಲಿಂಗಾಯತ ಧರ್ಮಿಯರನ್ನು ಒಗ್ಗೂಡಿಸುವಂತಿರಬೇಕು.

4) ನಿಮ್ಮ ಜಿಲ್ಲೆ, ತಾಲ್ಲೂಕಿನಲ್ಲಿ ಬಸವಶಕ್ತಿ, ಶಿಬಿರ, ಸಮಾವೇಶಗಳನ್ನು ಆಯೋಜಿಸಲು, ನೆರವಾಗಲು ನಿಮಗೆ ಆಸಕ್ತಿಯಿದೆಯೇ?ಹೇಗೆ ಕೈ ಜೋಡಿಸುತ್ತೀರಿ ಎಂದು ತಿಳಿಸುತ್ತೀರಿ?

ಈ ವಿಚಾರದ ಬಗ್ಗೆ ನಮಗೆ ತುಂಬಾ ಆಸಕ್ತಿಯಿದ್ದು ಬಸವ ಧರ್ಮದ ತತ್ತ್ವ ಸಿದ್ಧಾಂತಗಳಿಗಾಗಿ ರಾಜಕೀಯೇತರವಾಗಿ ದುಡಿಯಲು ಸಿದ್ಧರಿದ್ದೇವೆ. ಬಸವ ಧರ್ಮವು ಭಾರತದಾದ್ಯಂತ ಬೆಳೆಯಬೇಕು, ಜಾಗತಿಕ ಮನ್ನಣೆ ಪಡೆಯಬೇಕು, ವಿಶ್ವದಾದ್ಯಂತ ಶಾಂತಿ ನೆಮ್ಮದಿ ನೆಲೆಸಬೇಕು. ಬಸವತತ್ವ ಜನಮಾನಸದಲ್ಲಿ ಆಚರಣೆಗೆ ಬಂದಾಗ ಎಲ್ಲಾ ಸಾಧ್ಯವಾಗುತ್ತದೆ. ಇದಕ್ಕಾಗಿ ನಮ್ಮ ತಾಲ್ಲೂಕಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಎಲ್ಲ ಸದಸ್ಯರುಗಳನ್ನು ಬಸವಶಕ್ತಿ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸದಾ ಶ್ರಮಿಸುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
2 Comments
  • ಅತ್ಯುತ್ತಮವಾದ ಚಿಂತನೆ ಮತ್ತು ಯೋಜನೆ ಆದರೆ ಇದಕ್ಕೆ ಪೂರ್ವಕವಾಗಿ ಇನ್ನಷ್ಟು ಅಂಶಗಳನ್ನು ಸಾಂಗೀಕವಾಗಿ ಚರ್ಚಿಸಿ ತೀರ್ಮಾನಕ್ಕೆ ಬರುವುದು ಸರಿ ಅನಿಸುತ್ತದೆ

  • ಬಸವ ಶಕ್ತಿ ಸಮಾವೇಶದ ಮೂಲಕ ಸಕಲ ಕಾಯಕ ಶರಣರ ಅನುಯಾಯಿಗಳನ್ನು ಒಂದುಗೂಡಿಸಿ ರಾಜಕೀಯ ಪ್ರಜ್ಞೆ ಜಾಗೃತಿ ಮಾಡುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅವಶ್ಯಕತೆ ಇದೆ.
    ಬಸವಣ್ಣ ಪ್ರಧಾನ ಮಂತ್ರಿಯಾಗಿ ಸಕಲ ಹಿಂದುಳಿದ ಜಾತಿಗಳ ಮತ್ತು ದಲಿತರ ಧ್ವನಿಯಾಗಿ ನಿಂತು ಸಮಾಜೋದ್ಧಾರ ಮಾಡಿದಾತ. ಇದನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಇತರ ಬಸವ ಪರ ಸಂಘಟನೆಗಳು ಸಂಕುಚಿತವಾದ ಜಾತಿ ಭ್ರಮೆಯಿಂದ ಮುಕ್ತರಾಗಿ ಎಲ್ಲರನ್ನು ಎಲ್ಲದಕ್ಕೂ ಒಳಗೊಳ್ಳುವಂತೆ ಮಾಡಿ ಶರಣ ಚಳವಳಿ ರೂಪಿಸಬೇಕು.

Leave a Reply

Your email address will not be published. Required fields are marked *