ಬೆಳಗಾವಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಸಂವಾದದಲ್ಲಿ ಲಿಂಗಾಯತ ಸಂಘಟನೆಯ ಶಂಕರ ಗುಡಾಸ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳಸಿಕೊಳ್ಳಬೇಕೆ? ಇದರಿಂದ ಲಿಂಗಾಯತ ಧರ್ಮದ ಹೋರಾಟ ಬಲವಾಗುತ್ತದೆಯೇ?
ನಾವು ಸಂಘಟಿತರಾಗಿಲ್ಲ. ಇದರಿಂದಲೇ ರಾಜಕೀಯ ಪಕ್ಷಗಳು ನಮ್ಮನ್ನು ಕ್ಯಾರೇ ಅನ್ನುತ್ತಿಲ್ಲ. ನಮ್ಮ ಹತ್ತಿರ ಸಾವಿರ, ಎರಡು ಸಾವಿರ ಓಟುಗಳು ಇವೆ ಎಂದರೆ ರಾಜಕಾರಣಿಗಳು ತಮ್ಮಷ್ಟಕ ತಾವೇ ನಮ್ಮ ಹತ್ರ ಓಡಿ ಬರ್ತಾರೆ.
ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಲೇಬೇಕು. ಇದರಿಂದ ನೂರಕ್ಕೆ ನೂರರಷ್ಟು ಲಿಂಗಾಯತ ಧರ್ಮದ ಹೋರಾಟ ಬಲಗೊಳ್ಳುತ್ತದೆ.
ಬೇರೆ ಸಮಾಜದ ರಾಜಕಾರಣಿಗಳು ಅವರ ಸಮಾಜಕ್ಕೆ ಬೇಕಾದುದನ್ನು ಮಾಡುತ್ತಾರೆ. ಆದರೆ ನಮ್ಮ ಸಮಾಜದ ರಾಜಕಾರಣಿಗಳು, ನಮಗೆ ಎಲ್ಲರು ಬೇಕೆಂದು ಹೇಳಿ, ನಮ್ಮ ಸಮಾಜವನ್ನೇ ದೂರ ಇಡುತ್ತಿದ್ದಾರೆ.
ಇವರಿಗೆ ಎಂಎಲ್ಎ, ಎಂಪಿ ಟಿಕೆಟ್ ಬೇಕೆಂದಾಗ, ಮಂತ್ರಿ ಪದವಿ ಬಯಸಿದಾಗ ‘ಲಿಂಗಾಯತ’ ಹೆಸರಿನ ಕೋಟಾ ಬೇಕು. ಆಯ್ಕೆಯಾದ ಮೇಲೆ ಸಮಾಜದ ಕೆಲಸ ಮಾಡುವುದು ಮಾತ್ರ ಬೇಡವಾಗಿದೆ.
ಇದರ ಜೊತೆಗೆ ಬಸವ ಸಂಘಟನೆಗಳೂ ಸಬಲವಾಗಬೇಕು.
ಇದರ ಜೊತೆಗೆ ಬಸವ ಸಂಘಟನೆಗಳೂ ಸಬಲವಾಗಬೇಕು.
ನಮ್ಮ ಪ್ರತಿಯೊಂದು ಸಂಘಟನೆಗಳಲ್ಲಿ ನಾಯಕತ್ವದ ಚುಕ್ಕಾಣಿ ಹಿಡಿದುಕೊಂಡು ಕೂತಿರುವವರೇ ಕೆಲಸ ಮಾಡುತ್ತಾರೆ, ಉಳಿದವರಿಗೆ ಅವಕಾಶ ಸಿಗುತ್ತಿಲ್ಲ. ಮುಖ್ಯವಾಗಿ ಇದು ಬದಲಾಗಬೇಕು.
ಆಮೇಲೆ ನಿವೃತ್ತರಾದವರು ಬಂದು ಸಂಘಟನೆಗಳ ಮುಖ್ಯ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ. ಅವರಿಗೆ ಸಂಘಟನೆ ಕೆಲಸ ಮಾಡಲು ಗೊತ್ತಿರುವುದಿಲ್ಲ. ದಾಖಲೆ ಇಡುವುದು, ಮೇಲ್ಮಟ್ಟದಲ್ಲಿ ನಡೆಯುವ ವಿಷಯಗಳು ಮಾತ್ರ ಅವರಿಗೆ ಗೊತ್ತಿರುತ್ತೆ. ತಳಹಂತದಲ್ಲಿ ಏನು ನಡೆಯುತ್ತಿದೆ, ಸಂಘಟನೆಯ ಶಕ್ತಿ ಸಾಮರ್ಥ್ಯ, ಇತಿಮಿತಿ ಅವರಿಗೆ ಗೊತ್ತಿರುವುದೇ ಇಲ್ಲ. ಕೆಳಹಂತದಲ್ಲಿ ನಮ್ಮ ಸಂಘಟನೆಗಳು ಶೂನ್ಯವಾಗಿವೆ, ಅದರ ಕಡೆ ಮೊದಲು ಗಮನಹರಿಸುವುದಾಗಬೇಕು.
2) ಎದ್ದೇಳು ಕರ್ನಾಟಕ ಪ್ರಗತಿಪರ ಸಂಘಟನೆಗಳಿಗೆ ರಾಜಕೀಯ ತರಬೇತಿ ನೀಡುತ್ತಿದೆ. ಇದೇ ರೀತಿ ಬಸವ ಸಂಘಟನೆಗಳಿಗೂ ತರಬೇತಿ ನೀಡಬೇಕೆ?
ನೂರಕ್ಕೆ ನೂರು ತರಬೇತಿಯ ಅವಶ್ಯಕತೆ ಇದೆ. ನಾವು ಎಷ್ಟೆಲ್ಲ ಕೆಲಸ ಕಾರ್ಯ ಮಾಡಿದರೂ ರಾಜಕೀಯವಾಗಿ ಹಿಂದುಳಿದರೆ, ರಾಜಕೀಯ ಪ್ರಜ್ಞೆ ಇರದಿದ್ದರೆ ನಮಗೆ ಬೆಳೆಯಲು ಸಾಧ್ಯವಾಗುವುದಿಲ್ಲ. ನಾವು ರಾಜಕೀಯವಾಗಿ, ಸಾಮಾಜಿಕವಾಗಿ ಸಂಘಟಿತರಾಗದೇ ಹೋದರೆ ಯಾವ ಪಕ್ಷದವರೂ ನಮ್ಮನ್ನು ಪರಿಗಣಿಸುವುದೇ ಇಲ್ಲ.
ರಾಜಕೀಯವಾಗಿ ಸಂಘಟಿತರಾಗದೇ ಹೋದರೆ ಯಾವ
ಪಕ್ಷದವರೂ ನಮ್ಮನ್ನು ಪರಿಗಣಿಸುವುದಿಲ್ಲ
3) ಈ ನಿಟ್ಟಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಬೇಕೆ? ಇದರ ಸಾಧಕ ಬಾಧಕಗಳೇನು?
ಖಂಡಿತವಾಗಿ ಆಯೋಜಿಸಬೇಕು. ನಾವೀಗಾಗಲೇ ಇಂಥ ಕಾರ್ಯಗಳನ್ನು ಗ್ರಾಮ ಗ್ರಾಮಗಳಲ್ಲಿ ಮಾಡುತ್ತಿದ್ದೇವೆ. ಎರಡು ಮೂರು ಶಿಬಿರ ಆಗಿದ್ದಾವೆ. ಸಮಯ ಸಿಕ್ಕಾಗಲೆಲ್ಲ ಇಂಥ ಕೆಲಸ ಮಾಡುತ್ತಾ ಇರುತ್ತೇವೆ. ಎಲ್ಲರೂ ಸೇರಿ ಮಾಡಿದರೆ ಇನ್ನಷ್ಟು ಮಹತ್ವ ಮತ್ತು ಬಲ ಬರುತ್ತದೆ.
ಇದನ್ನು ಮಾಡುವುದರಿಂದ ಎಲ್ಲಾ ಸಾಧಕವೇ ಇದೆ. ಬಾಧಕ ಇಲ್ಲವೇ ಇಲ್ಲ.
ಧಾರ್ಮಿಕ, ಸಾಮಾಜಿಕ ಚಿಂತನೆಯೊಂದಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕು.
ನಮ್ಮ ಉನ್ನತವಾದ ಲಿಂಗಾಯತ ಧರ್ಮ, ಅದರ ಇತಿಹಾಸ ಜನರಿಗೆ ತಿಳಿಯಿತು ಅಂದರೆ ಅವರಲ್ಲಿ ಧರ್ಮದ ಬಗ್ಗೆ ಆಸಕ್ತಿ, ಅಭಿಮಾನ ಹುಟ್ಟುತ್ತದೆ.
ನಮ್ಮಲ್ಲಿಗೆ ಬರುವ ಜನರಿಗೆ ಮೊದಲೇ ವೀರಶೈವ ಬೇರೆ, ಲಿಂಗಾಯತ ಬೇರೆ, ನಮ್ಮದು ಏಕದೇವೋಪಾಸನೆ ಎಂದು ಹೇಳಿಬಿಡಬಾರದು. ಮೊದಲೇ ಹೇಳಿದರೆ ಅವರು ನಮ್ಮಿಂದ ದೂರವಾಗಬಹುದು. ಹಂತ ಹಂತವಾಗಿ ಅವರಿಗೆ ತಿಳಿವಳಿಕೆ ಕೊಡುತ್ತಾ ಅದರ ಬಗ್ಗೆ ತಿಳಿಸಬೇಕು.
ಧಾರ್ಮಿಕ, ಸಾಮಾಜಿಕ ಚಿಂತನೆಯೊಂದಿಗೆ ರಾಜಕೀಯ
ಪ್ರಜ್ಞೆ ಮೂಡಿಸಬೇಕು.
ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ನಾವು ಹೇಗೆ ಮುನ್ನುಗ್ಗಬೇಕು ಎಂಬುದರ ಬಗ್ಗೆ ನಾವು ಶಿಬಿರದಲ್ಲಿ ಹೇಳಿಕೊಡಬೇಕು. ಮಾನಸಿಕವಾಗಿ ಅವರನ್ನು ಗಟ್ಟಿ ಮಾಡಬೇಕು.
ನಮ್ಮದು ಯಮಕನಮರಡಿ ಕ್ಷೇತ್ರ. ಇಲ್ಲಿ ಸತೀಶ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಸಂಘಟನೆ ವತಿಯಿಂದ ಅದ್ಭುತ ಕೆಲಸ ಮಾಡುತ್ತಿದ್ದಾರೆ. ವೇದಿಕೆ ಮುಖಾಂತರ ಯುವಕ, ಯುವತಿಯರಿಗೆ ಪೊಲೀಸ್, ಆರ್ಮಿ, ಕೆಎಎಸ್, ಐಎಎಸ್ ತರಬೇತಿ ಕೊಡುತ್ತಿದ್ದಾರೆ. ಹಾಗೆಲ್ಲ ಮಾಡಿದಾಗ ಸಾಮಾಜಿಕವಾಗಿ ಜನ ಸಂಘಟಿತರಾಗುತ್ತಾರೆ.
ನಮ್ಮ ಮಠಗಳು ಶಿಕ್ಷಣ ಕೂಡುವುದು ಬಿಟ್ಟು ಬೇರೇನು ಮಾಡುತ್ತಿಲ್ಲ. ನಮ್ಮ ಮಠಾಧೀಶರಿಗೆ ಧರ್ಮದ ಆಗುಹೋಗುಗಳ ಬಗ್ಗೆ ತಿಳಿಯುವ ಆಸಕ್ತಿ ಕಡಿಮೆಯಾದಂತೆ ಅನಿಸುತ್ತಿದೆ. ಮಠ, ಪೀಠ ಗಟ್ಟಿ ಮಾಡಿಕೊಳ್ಳಲು ರಾಜಕಾರಣಿಗಳಿಂದ ತಮ್ಮ ಬೇಕು ಬೇಡಿಕೆ ಮಾತ್ರ ಹೇಳಿ ಅವರಿಂದ ಪಡೆದುಕೊಳ್ಳುತ್ತಾರೆ. ಸಮಾಜಕ್ಕೆ, ಧರ್ಮಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಕೇಳುವವರು, ಹೇಳುವವರು ಯಾರು ಇಲ್ಲದಂತಾಗಿದೆ.
ಒಂದು ಕಾಲಕ್ಕೆ ಮಠಗಳು ಬೇಕಾದಷ್ಟು ಶಿಕ್ಷಣ ನೀಡಿರಬಹುದು, ಈಗ ಆ ಅವಶ್ಯಕತೆ ಇಲ್ಲ. ಸರ್ಕಾರವೇ ಬೇಕಾದಷ್ಟು ಶಿಕ್ಷಣವನ್ನು ಈಗ ಜನರಿಗೆ ನೀಡುತ್ತಿದೆ. ಮಠಗಳು ಆ ವಿದ್ಯಾ ಸಂಸ್ಥೆಗಳನ್ನು ಬಂದ್ ಮಾಡಿ ಧರ್ಮ ಸಂಸ್ಥೆಗಳನ್ನು ತೆಗೆಯಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.
4) ನಿಮ್ಮ ಜಿಲ್ಲೆ, ತಾಲೂಕಿನಲ್ಲಿ ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಆಯೋಜಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಇಂತಹ ಕಾರ್ಯಗಳಿಗೆ ನಾವು ಕೈಜೋಡಿಸುತ್ತಲೇ ಬಂದಿದ್ದೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತೇವೆ. ಮಾಡಿದರೂ ಮಾಡಿದ್ದೇವೆ ಅಂತ ನಾವು ಎಲ್ಲೂ ಹೇಳಿಲ್ಲ. ನಾವು ನಮ್ಮ ಕೈಯಿಂದ ಆದಷ್ಟು ಬಸವಶಕ್ತಿ ಕಾರ್ಯಕ್ಕೆ ಕೈಜೋಡಿಸುತ್ತೇವೆ, ಸಾಧ್ಯವಾದ ಎಲ್ಲ ಕೆಲಸ ಮಾಡಲು ತಯಾರಿದ್ದೇವೆ.
