ಹೊಸಪೇಟೆ
(ಬಸವ ಶಕ್ತಿ ಕಾರ್ಯಕ್ರಮದ ಬಗ್ಗೆ ಹೊಸಪೇಟೆ ರಾಷ್ಟ್ರೀಯ ಬಸವ ದಳದ ಮುಖಂಡ ಸೋಧಾ ವಿರೂಪಾಕ್ಷಗೌಡ ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.)
ಧರ್ಮದಲ್ಲಿ ರಾಜಕೀಯ ಇರಬಾರದು. ಆದರೆ ಒಂದು ಸಂಘಟನೆ ಪ್ರಬಲವಾಗಬೇಕಾದರೆ ಸಾಮಾಜಿಕ, ಆರ್ಥಿಕ, ರಾಜಕೀಯದ ಭದ್ರತೆ ಅಗತ್ಯವಿದೆ. ಬಸವಭಕ್ತರು, ಬಸವ ಅನುಯಾಯಿಗಳಿಗೆ ರಾಜಕೀಯ ಪ್ರಜ್ಞೆ ಅವಶ್ಯವಾಗಿ ಬೇಕು. ಪ್ರಜ್ಞಾವಂತಿಕೆಯಿದ್ದರೆ ವಿರೋಧಿಗಳ ರಾಜಕೀಯ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಬಸವ ಸಂಘಟನೆಯಲ್ಲಿ ಯುವಶಕ್ತಿಗೆ ಆದ್ಯತೆ ಕೊಡಬೇಕು. ಈಗಿನ ಯುವಪೀಳಿಗೆಗೆ ಲಿಂಗಾಯತ ಧರ್ಮ ಸಂಸ್ಕಾರದ ಅವಶ್ಯಕತೆ ಇದೆ. ಅದು ಸಿಗಬೇಕಾದರೆ ಬಸವಣ್ಣನವರ ವಚನ ಸಾಹಿತ್ಯದ ಮಾರ್ಗದರ್ಶನ ಅವರಿಗೆ ಮಾಡಬೇಕು. ಸದ್ಯ ಅದಾದರೆ ಸಂಘಟನೆಯಲ್ಲಿ ಉತ್ತಮ ಕಾರ್ಯ ಅವರು ಮಾಡುತ್ತಾರೆ.
ಯುವಕವರಲ್ಲಿ ಅಧ್ಯಯನದ ಸಮಸ್ಯೆ ಇರುವುದರಿಂದ ಯಾವ ಸಂಘಟನೆಗೆ ಸೇರಬೇಕು, ಬೆಂಬಲಿಸಬೇಕು ಎಂದು ಅವರು ಕಂಡುಕೊಳ್ಳಲು ಆಗುತ್ತಿಲ್ಲ. ಅವರಲ್ಲಿ ಆ ವಿವೇಚನೆ ಶಕ್ತಿಯನ್ನು ಬಸವಶಕ್ತಿ ಶಿಬಿರದಿಂದ ತುಂಬಬೇಕು.
ಉತ್ತಮ ಶಿಬಿರ ಮಾಡುವುದರ ಮೂಲಕ ಜನರಲ್ಲಿ ಶರಣರ ವಚನಗಳ ಸಂದೇಶ ತಿಳಿಸುವುದಾಗಬೇಕು. ಜೊತೆಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕು. ಸಮಾಜದಲ್ಲಿ ಬಸವ ಧರ್ಮದ ಆಚರಣೆ ಕಡಿಮೆಯಾಗುತ್ತಿದೆ. ವೈದಿಕ ಆಚರಣೆಗಳೇ ಹೆಚ್ಚಾಗಿದೆ. ಆದರೆ ನಮ್ಮ ಧರ್ಮದ ನಿಜಾಚರಣೆಯ ಅರಿವಿನ ಕೊರತೆಯನ್ನು ಶಿಬಿರ ನೀಗಿಸಬೇಕು.
ಏನೇ ವಿರೋಧ, ಸಮಸ್ಯೆ ಬಂದರೂ ಅದಕ್ಕೆ ಜಗ್ಗದೆ ಬಸವ ಶಕ್ತಿ ಸಮಾವೇಶ ನಡೆಯಲಿ. ಬಸವಶಕ್ತಿ ಸಂಘಟನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವೆಲ್ಲ ಪಾಲ್ಗೊಳ್ಳುತ್ತೇವೆ.
