ಉರಿ ಬರಲಿ, ಸಿರಿ ಬರಲಿ… ಬಸವ ತಂದೆಗಳ ವಚನ ನಿರ್ವಚನ

ಗುಳೇದಗುಡ್ಡ

ಬಸವಕೇಂದ್ರದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದ ಅಂಗವಾಗಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಸ್ಮರಣೋತ್ಸವ ಎಚ್. ಎಸ್. ಹುಳಿಪಲ್ಲೇದ ಅವರ ಮನೆಯಲ್ಲಿ ನಡೆಯಿತು.

ಮಹಾಮನೆ ಕಾರ್ಯಕ್ರಮಕ್ಕೆ ಅಪ್ಪ ಬಸವ ತಂದೆಗಳ ಈ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಕಾಯದ ಕಳವಳಕ್ಕಂಜಿ ‘ಕಾಯಯ್ಯಾ’ ಎನ್ನೆನು,
ಜೀವನೋಪಾಯಕ್ಕಂಜಿ ‘ಈಯಯ್ಯಾ’ ಎನ್ನೆನು,
ಉರಿ ಬರಲಿ, ಸಿರಿ ಬರಲಿ, ಬೇಕು ಬೇಡೆನ್ನೆನಯ್ಯಾ,
ಆನು ನಿಮ್ಮ ಹಾರೆನು, ಮಾನವರ ಬೇಡೆನು,
ಆಣೆ ನಿಮ್ಮಾಣೆ, ಕೂಡಲಸಂಗಮದೇವಾ.

ಸಂಪ್ರದಾಯದಂತೆ ಪ್ರೊ. ಶ್ರೀಕಾಂತ ಗಡೇದ ಅವರು ವಚನ ನಿರ್ವಚನಗೈಯುತ್ತ, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ಪಣತೊಟ್ಟು ಈ ವಚನದಂತೆ ಬದುಕಿ ತೋರಿಸಿದರು. ದೇವರ ಆರಾಧನೆ ಸ್ವಾರ್ಥ ಬದುಕಿಗಾಗಿ ಸೀಮಿತವಾಗಬಾರದು. ಪರಾವಲಂಭನೆಯಿಂದ ಬದುಕು ಮುಕ್ತವಾಗುವುದು ಕಾಯಕದ ಉದ್ದೇಶವಾಗಿದೆ. ಸಹಾಯವನ್ನು ಯಾರಿಂದಲಾದರೂ ಪಡೆದುಕೊಂಡು ನಿರಂತರವಾಗಿ ಸುಖದಿಂದ ಬದುಕುವುದು ಅಸಾಧ್ಯ. ಅದು ಕಾಯಕದಿಂದ ಮಾತ್ರ ಸಾಧ್ಯ ಎಂದು ತಿಳಿಯಪಡಿಸಿದರು.

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಕುರಿತು, ಉಪನ್ಯಾಸಕ ಪ್ರೊ. ಸುರೇಶ ತಿ. ರಾಜನಾಳ ಅವರು ಕಾಲಗರ್ಭದಲ್ಲಿ ಹುದುಗಿಕೊಂಡಿದ್ದ ವಚನಗಳನ್ನು ಶೋಧಿಸುವಲ್ಲಿ, ಅವುಗಳನ್ನು ಪ್ರಸ್ತುತ, ಪ್ರಚಾರ ಪಡಿಸುವಲ್ಲಿ ಹಳಕಟ್ಟಿಯವರು ಪಟ್ಟಂತ ನೋವನ್ನು ಸಭಿಕರಿಗೆಲ್ಲ ಅತ್ಯಂತ ಮುಗ್ಧತೆಯಿಂದ ಕೇಳುವಂತೆ ಹೇಳಿದರು. ನಾವು ಜಂಗಮಕ್ಕೆ (ಸಮಾಜಕ್ಕೆ) ದಾಸೋಹವನ್ನು ಹೇಗೆ ಮಾಡಿಕೊಳ್ಳಬೇಕೆನ್ನುವುದನ್ನು ತೋರಿಸಿದ ಡಾ. ಫ. ಗು. ಹಳಕಟ್ಟಿಯವರ ಹೋರಾಟದ ಬದುಕನ್ನು ಅನುಸರಿಸಿದರೆ ಈ ಸ್ಮರಣೋತ್ಸವ ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಮಹಾದೇವಯ್ಯ ಪಂ. ನೀಲಕಂಠಮಠ ಅವರು, ಡಾ. ಫ. ಗು. ಹಳಕಟ್ಟಿಯವರ ಬದುಕಿನಲ್ಲಿ ಅನುಭವಿಸಿದ ಸಂಗತಿಗಳನ್ನು ಹೃದಯ ತುಂಬಿ ಕೇಳುಗರು ತನ್ಮಯಚಿತ್ತರಾಗಿ ಕೇಳುವಂತೆ ಹಂಚಿಕೊಂಡರು. ಕೇವಲ ವರ್ಷಕ್ಕೊಮ್ಮೆ ಇಂಥಹ ಕಾರ್ಯಕ್ರಮ ಜರುಗಿದರೆ ಸಾಲದು. ಇಂಥಹ ಮಹನೀಯರು ಸಾಗಿದ ಬದುಕಿನ ಸಂಗತಿಗಳನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಬದುಕಿದರೆ ನಾವೆಲ್ಲರೂ ನಿಜವಾಗಿ ಅವರಿಗೆ ಗೌರವ ಅರ್ಪಿಸಿದಂತೆ. ಶರಣರು ಎಂದೂ ಬದುಕಿನ ನಿರ್ವಹಣೆಗಾಗಿ ತಾವು ಬೇಡುವುದನ್ನು ಮತ್ತು ತಮ್ಮನ್ನು ಸಂರಕ್ಷಣೆ ಮಾಡು ಅಂತ ಕೇಳುವುದನ್ನು ಮಾಡಲಿಲ್ಲ ಮತ್ತು ಒಪ್ಪಲಿಲ್ಲ. ತಮ್ಮ ಸಂರಕ್ಷಣೆ, ಬದುಕಿನ ನಿರ್ವಹಣೆಗೆ ಬೇಕಾದವುಗಳನ್ನು ತಾವೇ ಮಾಡಿಕೊಂಡವರು.

ಉರಿ ಬರಲಿ, ಸಿರಿ ಬರಲಿ ಏನೇ ಆದರೂ ಮತ್ತೊಬ್ಬರನ್ನು ಬೇಡುವುದು ಸಲ್ಲದು, ಅದಕ್ಕಾಗಿ ಬಸವ ತಂದೆಗಳು ತಾವು ಕಂಡುಕೊಂಡ ಅರಿವಿಗೆ (ಸತ್ಯಕ್ಕೆ) ತಾವೇ ಪ್ರಮಾಣೀಕರಿಸುತ್ತಾ, ಜಂಗಮಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮವು ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರ ಶರಣರ ನೆನಹುವಿನೊಂದಿಗೆ ಪ್ರಾರಂಭವಾಯಿತು. ಡಾ. ಫ. ಗು. ಹಳಕಟ್ಟಿಯವರ ಭಾವಚಿತ್ರಕ್ಕೆ ಹಾಗೂ ಅವರ ವಚನ ಸಂಪುಟಗಳಿಗೆ ಪುಷ್ಪಗಳನ್ನು ಸಮರ್ಪಿಸಲಾಯಿತು.

ಶರಣೆಯರಿಂದ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಮಹಾಮನೆಯಲ್ಲಿ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವಕೇಂದ್ರದ ಉಪಾಧ್ಯಕ್ಷರಾದ ಎಚ್. ಎಸ್. ಹುಳಿಪಲ್ಲೇದ, ರಾಚಣ್ಣ ಕೆರೂರ, ಚಂದ್ರಶೇಖರ ತೆಗ್ಗಿ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಮಹಾಲಿಂಗಪ್ಪ ಕರನಂದಿ, ಬಸವರಾಜ ಇಲಾಳಶೆಟ್ಟರ, ಸುರೇಶ ರಾಜನಾಳ, ಕಂಬಾಳಿಮಠ ಸರ್, ದಾಕ್ಷಾಯಣಿ ತೆಗ್ಗಿ, ಮಹಾಂತೇಶ ಸಿಂದಗಿ, ನಿರ್ಮಲಾ ಬರಗುಂಡಿ, ಗೀತಾ ತಿಪ್ಪಾ, ಪ್ರೊ. ಗಾಯತ್ರಿ ಕಲ್ಯಾಣಿ, ಸುರೇಖಾ ಗೆದ್ದಲಮರಿ, ವಚನಾ ಶೇಖಾ, ಶ್ರೀದೇವಿ ಶೇಖಾ, ವಿಶಾಲಕ್ಷಿ ಗಾಳಿ, ದಾನಮ್ಮ ಕುಂದರಗಿ, ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *