ಬೆಂಗಳೂರು:
ಬಸವ ಜಯಂತಿ ಆಚರಣೆ ಮಾಡುವುದಕ್ಕೆ ಅಕ್ಷಯ ತೃತೀಯ ದಿವಸವೇ ಆಗಬೇಕೆಂದೇನಿಲ್ಲ. ಬಸವಣ್ಣನವರ ತತ್ವಾದರ್ಶಗಳನ್ನು ಅರಿತರೆ ವರ್ಷಪೂರ್ತಿಯಾಗಿ ಅವರ ಜಯಂತಿ ಮಾಡಿ ಅದನ್ನು ಅರ್ಥಪೂರ್ಣಗೊಳಿಸಬಹುದು ಎಂದು ತುಮಕೂರು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಬನಶಂಕರಿ ಜೆಎಸ್ಸೆಸ್ ಪಬ್ಲಿಕ್ ಸ್ಕೂಲಿನ ಘನಲಿಂಗ ಶಿವಯೋಗಿಗಳ ಸಭಾಭವನದಲ್ಲಿ ರವಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಯುವಜನರ ಮನಸ್ಸನ್ನು ಹಿಡಿದಿಡಬಲ್ಲ ತತ್ವಗಳು, ಸಮಾಜದ ಉನ್ನತಿಯನ್ನು ಸಾಧಿಸಲು ಬೇಕಾದ ವಿಷಯಗಳು ಬಸವತತ್ವದಲ್ಲಿ ಅಡಗಿದೆ. ಇತ್ತೀಚಿನ ದಿನಗಳಲ್ಲಿ ಬಸವತತ್ವದ ಬಗ್ಗೆ ಜಾಗೃತಿ, ಬಸವತತ್ವಕ್ಕೆ ಅಪಾಯ ಬಂದೊದಗಿದ ಬಗ್ಗೆ ಎಚ್ಚರಿಕೆ ಮೂಡುತ್ತಿರುವುದು ಸಂತೋಷ ತರುತ್ತಿದೆ. ಈ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಾಮದಾರ ಅಂಥವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದನ್ನು ನಾನು ಗಮನಿಸುತ್ತಾ ಇದ್ದೇನೆ. ನಿಜಕ್ಕೂ ಇಂದು ಯುವಜನರನ್ನು ಸರಿದಾರಿಗೆ ತರುವುದಕ್ಕೆ, ಲಿಂಗಾಯತ ಧರ್ಮ ಮಾನ್ಯತೆಯ ವಿಷಯವು ಗುರಿ ಮುಟ್ಟುವುದಕ್ಕೆ ಸಾಧ್ಯ. ಇದಕ್ಕೆ ನಿರಂತರ ಪ್ರಯತ್ನ ಬೇಕಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡ ಡಾ.ಜೆ. ಎಸ್. ಪಾಟೀಲ ಅವರ ಎಳೆಹೂಟೆ ನಾಟಕ ಪುಸ್ತಕದ ಕುರಿತು ಕೆ.ಬಿ. ಮಹಾದೇವಪ್ಪ ಪರಿಚಯ ಮಾಡುತ್ತಾ, ಪುಸ್ತಕದಲ್ಲಿ ಬಹಳ ಜನರ ಗಮನಕ್ಕೆ ಬರದೇ ಇರುವಂತಹ, ಶರಣರ ಕ್ರಾಂತಿಯ ದಿನಗಳಲ್ಲಿ ನಡೆದಂತಹ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಲಾಗಿದೆ ಎಂದರು.
ಉಪನ್ಯಾಸ ನೀಡಿದ ವಚನ ಚಿಂತಕ ಮಂಜುನಾಥ ವೆಂಕಟೇಶ ಮಾತನಾಡುತ್ತಾ, ವಿದೇಶಿ ವಿದ್ವಾಂಸರ ಗಮನ ಸೆಳೆದ ಬಸವಣ್ಣನವರ ಬಗ್ಗೆ ಕನ್ನಡಿಗರಾಗಿ ನಾವು ಸರಿಯಾಗಿ ಅರಿತುಕೊಂಡಿಲ್ಲ, ಇನ್ನಾದರೂ ಅರಿತುಕೊಳ್ಳುವುದು ಮುಖ್ಯ ಎಂದರು.

ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಮಾತನಾಡುತ್ತಾ, ಈಚಿನ ದಿನಗಳಲ್ಲಿ ಬಸವಪ್ರಜ್ಞೆ ಬೆಳೆಯುತ್ತಿದೆ. ಲಿಂಗಾಯತರು ಹೆಚ್ಚಿನ ಪ್ರಮಾಣದಲ್ಲಿ ಜಾಗೃತರಾಗುವ ಅಗತ್ಯವಿದೆ. ಧರ್ಮ ಮಾನ್ಯತೆ ವಿಷಯದಲ್ಲಿ ನಮಗೆ ಜನಸಾಮಾನ್ಯರಿಂದ ಬೆಂಬಲ ಸಿಗುತ್ತಿದೆ ಹೊರತು ಯಾವುದೇ ರಾಜಕಾರಣಿಗಳಿಂದಲ್ಲ. ಉತ್ತರ ಕರ್ನಾಟಕದಲ್ಲಿ ಇರುವ ಬಸವತತ್ವ ಜಾಗೃತಿ ದಕ್ಷಿಣ ಕರ್ನಾಟಕದಲ್ಲಿ ಇಲ್ಲ, ಅದರಲ್ಲೂ ಬೆಂಗಳೂರಂಥ ಪ್ರದೇಶದಲ್ಲಿ ಪರಸ್ಪರ ಸಂಪರ್ಕ ಮಾಡುವ ಕೊರತೆ ಇದೆ. ಹೀಗಾಗಿ ಅವರನ್ನೆಲ್ಲ ಸಂಪರ್ಕಿಸಲು ಜಾ.ಲಿಂ.ಮ. ಸದಸ್ಯರಾದಲ್ಲಿ ಬಹಳಷ್ಟು ವಿಚಾರಗಳು ಲಭ್ಯವಾಗುತ್ತವೆ. ಮಹಾಸಭಾ ಪ್ರಕಟ ಮಾಡಿರುವ ಕೃತಿಗಳು ಕಡಿಮೆ ಬೆಲೆಗೆ ಸಿಗುತ್ತವೆ, ಅವನ್ನು ಓದಿದರೆ ಸಂಪೂರ್ಣ ಜ್ಞಾನ ಬರುತ್ತೆ, ಇದನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಗಮನಹರಿಸಲು ತಿಳಿಸಿ ಎಂದರು.
ದೂರದರ್ಶನ ಚಂದನದ ಮಾಜಿ ನಿರ್ದೇಶಕಿ, ನಿರ್ಮಲ ಯಲಿಗಾರ ಮಾತನಾಡುತ್ತಾ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬಸವ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶರಣೆಯರ ವಚನ ವಿಚಾರಗಳನ್ನು ಗಮನಿಸಿದರೆ ಬಸವಣ್ಣನವರು ಮಹಿಳೆಯರಿಗೆ ಎಂತಹ ಉನ್ನತ ಸ್ಥಾನ ಕಲ್ಪಿಸಿದ್ದರು ಎಂಬುದು ಗೊತ್ತಾಗುತ್ತದೆ. ಇಂಥ ಉನ್ನತ ಸ್ಥಾನ ನಾವು ಸನಾತನ ಧರ್ಮದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ. ಗೊ.ರು. ಚನ್ನಬಸಪ್ಪ ವಹಿಸಿ ಮಾತನಾಡಿದರು.
ಅನೇಕ ಬಸವಪರ ಸಂಘಟನೆಗಳ ಮುಖ್ಯಸ್ಥರು ವೇದಿಕೆ ಮೇಲಿದ್ದರು. ಅವರನ್ನೆಲ್ಲ ಸತ್ಕರಿಸಲಾಯಿತು. ಕಲ್ಯಾಣ ಬಡಾವಣೆಯ ವಚನ ಕಲಿಕಾ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.
ಗ್ರಂಥಕರ್ತ ಜೆ.ಎಸ್. ಪಾಟೀಲ, ಬಿ.ಎಸ್. ಕೃಪಾಶಂಕರ, ಶಿವಕುಮಾರ, ರೇಣುಕಯ್ಯ, ಬಸವರಾಜ ಹಂಡಿ, ಅರುಣಕುಮಾರ ಮತ್ತಿತರ ಮುಖಂಡರು ಇದ್ದರು.
ಪ್ರೊ. ವೀರಭದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಜಗುಣಮೂರ್ತಿ ಶರಣು ಸಮರ್ಪಣೆ ಮಾಡಿದರು. 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕೊನೆಗೆ ಎಲ್ಲರಿಗೂ ಪ್ರಸಾದ ದಾಸೋಹ ನಡೆಯಿತು.
😍💐