ಬೆಳಗಾವಿ
ಬಸವಣ್ಣನವರ ಜೀವನ ಮತ್ತು ಸಂದೇಶಗಳನ್ನು ತಮ್ಮ ಬರಹಗಳ ಮೂಲಕ ವಿಶ್ವದೆಲ್ಲೆಡೆ ಪಸರಿಸಿದ ಡಾ. ಎಸ್. ಆರ್. ಗುಂಜಾಳ ಗುರುಗಳನ್ನು ಕರ್ನಾಟಕ ಘನ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ.
ತಮ್ಮ ಜೀವನದ ಉದ್ದಕ್ಕೂ ಬಸವ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಗುಂಜಾಳ ಅವರು ಬಸವಣ್ಣನವರ ವಚನ ಪದಪ್ರಯೋಗ ಕೋಶ ವನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ವಿನೂತನ ಕೊಡುಗೆ ಕೊಟ್ಟವರು. ಬಸವ ಸಾಹಿತ್ಯ ದರ್ಪಣ ಕೃತಿ ಮೂಲಕ ಬಸವಣ್ಣನವರ ಕುರಿತು ಈವರೆಗೆ ಬಂದ ಸಮಗ್ರ ಸಾಹಿತ್ಯ ಸೂಚಿಯನ್ನು ರಚಿಸಿದರು.
Lingayat Bibliography ಎಂಬ ಇಂಗ್ಲಿಷ್ ಕೃತಿ ರಚಿಸಿ ಪಾಶ್ಚಿಮಾತ್ಯ ವಿದ್ವಾಂಸರಿಗೆ ಶರಣ ಸಾಹಿತ್ಯ ಪರಿಚಯಿಸಿದ ಕೀರ್ತಿ ಡಾ. ಗುಂಜಾಳ ಅವರದು. ಅನೇಕ ವಿದೇಶಿ ವಿದ್ವಾಂಸರು ಶರಣ ಸಾಹಿತ್ಯ ಕುರಿತು ಬರೆದ ಇಂಗ್ಲಿಷ್ ಕೃತಿಗಳಲ್ಲಿ ಡಾ. ಗುಂಜಾಳ ಅವರನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
೯೨ ವಯಸ್ಸಿನಲ್ಲೂ ಉತ್ಸಾಹದಿಂದ ಬಸವ ಸಾಹಿತ್ಯ ಕುರಿತು ಆಲೋಚಿಸುವ ಅವರ ಜೀವನೋತ್ಸಾಹ ನಿಜಕ್ಕೂ ಆದರ್ಶನೀಯ. ಇಂತಹ ಹಿರಿಯರಿಗೆ ಈ ಸಲದ ರಾಷ್ಟ್ರೀಯ ಬಸವ ಪುರಸ್ಕಾರ ದೊರೆತಿರುವುದು ಅತ್ಯಂತ ಸಂತೋಷದ ಸಂಗತಿ. ಡಾ. ಎಸ್. ಆರ್. ಗುಂಜಾಳ ಅವರಿಗೆ ವಂದನೆ ಅಭಿನಂದನೆಗಳು.
